ಹೆಬ್ಬಾಲೆಯಲ್ಲಿ ಸ್ತ್ರೀಶಕ್ತಿ ಭವನವನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಪರಮೇಶ್‌ಕುಮಾರ್, ಅರುಣಕುಮಾರಿ, ವಿ.ಪಿ.ಶಶಿಧರ್ ಮತ್ತಿತರರಿದ್ದರು.
ಕುಶಾಲನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪರಿಕಲ್ಪನೆಯ ನಾರಿ ಶಕ್ತಿಯೊಂದಿಗೆ ವಿಕಸಿತ ಭಾರತ ನಿರ್ಮಾಣ ಪ್ರಗತಿದಾಯಕವಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ, ಮಹಿಳಾ ಶಕ್ತಿಗೆ ಬೇಕಾದ ಕಟ್ಟಡಗಳ ನಿರ್ಮಾಣ ಅವರ ಅಭ್ಯುದಯಕ್ಕೆ ಪೂರಕವಾಗಿವೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಹೆಬ್ಬಾಲೆಯಲ್ಲಿ ಶುಕ್ರವಾರ ಸ್ತ್ರೀಶಕ್ತಿ ಭವನ ಉದ್ಘಾಟಿಸಿ ಮಾತನಾಡಿದರು.
ದೇಶದ ಸಂಸ್ಕೃತಿ, ಪರಂಪರೆ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಅಪಾರವಿದೆ. ಕೌಶಲಾಭಿವೃದ್ಧಿಗೆ ಕಟ್ಟಡಗಳು ಪೂರಕವಾಗಿದ್ದು ಸಂಜೀವಿನಿ ಒಕ್ಕೂಟದಲ್ಲಿ ಹೆಬ್ಬಾಲೆ ವ್ಯಾಪ್ತಿಯಲ್ಲಿ 44 ಸಂಘಗಳ 705 ಮಹಿಳಾ ಸದಸ್ಯರಿದ್ದು ಪೂರಕ ಅಭಿವೃದ್ಧಿಗೆ ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಯೋಜನೆಯ ಹೆಸರು ಬದಲಾವಣೆ ಮುಖ್ಯವಲ್ಲ, ಗ್ರಾಮೀಣ ಕೌಶಲ ಅಭಿವೃದ್ಧಿಗೆ ಬೇಕಾದ ಸವಲತ್ತುಗಳು ಹೊಸ ಹೆಸರಿನಲ್ಲಿ ಅಡಕವಾಗಿವೆ. ಆದರೆ ಕಾಂಗ್ರೆಸ್‌ನವರ ಅಪಪ್ರಚಾರ ಸಲ್ಲದು. ಮನರೇಗಾ ಆ ಕಾಲಘಟ್ಟಕ್ಕೆ ಆಗಿದ್ದು ಸರಿ. ಆದರೆ ಈಗ ಸ್ವಾವಲಂಬಿಗಳಾಗಲೂ ವಿಜಿ ರಾಮ್ ಜಿ ಯಂತಹ ಹೊಸ ಹೊಸ ಯೋಜನೆಗಳ ಅನುಷ್ಠಾನ ಹಾಗೂ ಸವಲತ್ತುಗಳು ಅಗತ್ಯವಿದೆ ಎಂದು ಸಂಸದರು ಸಮರ್ಥಿಸಿಕೊಂಡರು.
ರಾಜ್ಯ ಸರ್ಕಾರಗಳ ಉಚಿತ ಗ್ಯಾರಂಟಿ ಯೋಜನೆಗಳಿಂದಾಗಿ ಗ್ರಾಮೀಣ ಭಾಗದ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿಗಳು ಆಗುತ್ತಿಲ್ಲ ಎಂದು ಸಂಸದರು ವಿಷಾದಿಸಿದರು. ಸುಸಜ್ಜಿತ ರಸ್ತೆಗಳಿಲ್ಲದೆ ಉಚಿತ ಬಸ್ ಕೊಟ್ಟು ಏನು ಪ್ರಯೋಜನವಿಲ್ಲ. ಬಸ್‌ನಲ್ಲಿ ಉಚಿತವಾಗಿ ತೆರಳುವವರಿಗೆ ಕೆಲಸಗಳೇ ಇಲ್ಲ ಎಂದು ಸಂಸದರು ಹೇಳಿದರು.
ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಭ್ರೂಣದಿಂದ ಬೂದಿಯಾಗುವವರೆಗೂ ಹೆಣ್ಣು ಮಕ್ಕಳು ಈ ಹಿಂದೆ ಸಾಕಷ್ಟು ಶೋಷಣೆಗೆ ಒಳಗಾಗಿದ್ದರು. ಎಸ್.ಎಂ.ಕೃಷ್ಣ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಮುನ್ನುಡಿ ಬರೆಯಲಾಯಿತು. ಮರದಡಿ, ಬೇರೆ ಬೇರೆ ಮನೆಯಂಗಳದಲ್ಲಿ ಮಹಿಳಾ ಚಟುವಟಿಕೆಗಳ ಮನಗಂಡು ಇಂತಹ ಸ್ತ್ರೀಶಕ್ತಿ ಭವನ ನಿರ್ಮಾಣ ಹೆಮ್ಮೆಯ ಸಂಗತಿ. ಅತಿ ದೊಡ್ಡ ಜನಸಂಖ್ಯೆ ಇರುವ ಹೆಬ್ಬಾಲೆ ಗ್ರಾಮದ ವ್ಯಾಪ್ತಿಯ ಜನರಿಗೆ ಉದ್ಯೋಗ ಒದಗಿಸಲು ಕೈಗಾರಿಕಾ ನಿರ್ಮಾಣ, ಶಿಕ್ಷಣ ಸಂಸ್ಥೆಗಳು ಈ ಹಿಂದೆ ಆಗಬೇಕಿತ್ತು. ಆದರೆ, ನಮ್ಮನ್ನಾಳುವ ಜನಪ್ರತಿನಿಧಿಗಳ ಮನಸ್ಥಿತಿಯಿಂದಾಗಿ ಈ ಭಾಗ ಅಭಿವೃದ್ಧಿಯಿಂದ ಕಡೆಗಣಿಸಿದೆ. ಇದೀಗ ಹೋಬಳಿ ಕೇಂದ್ರವಾಗುವ ಮೂಲಕ ಹೆಬ್ಬಾಲೆ ಗ್ರಾಮ ಸಾಮೂಹಿಕ ಅಭಿಪ್ರಾಯಗಳ ಮೂಲಕ ಸಾಕಷ್ಟು ಅಭಿವೃದ್ಧಿಯಾಗಬೇಕು ಎಂದರು.
ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಸಾಕಷ್ಟು ಪ್ರಯೋಜನವಾಗುತ್ತಿರುವ ಕುರಿತು ವಿಮರ್ಶಿಸಿದ ಶಶಿಧರ್ ಸಂಸದರ ಟೀಕೆಗೆ ಪ್ರತ್ಯುತ್ತರ ನೀಡಿದರು.
ಜಲಜೀವನ್ ಯೋಜನೆ ಇನ್ನೂ ಪೂರ್ಣಗೊಳ್ಳದ ಬಗ್ಗೆ ಹೇಳಿದ ಶಶಿಧರ್, ಈ ಬಗ್ಗೆ ಸಂಸದರು ಹೆಚ್ಚಿನ ಒತ್ತು ನೀಡುವ ಮೂಲಕ ಕೇಂದ್ರದ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿದರು.
ಹೆಬ್ಬಾಲೆ ಗ್ರಾಪಂ ಅಧ್ಯಕ್ಷೆ ಅರುಣಕುಮಾರಿ ಮಾತನಾಡಿ, ಪಿಡಿಒ ಇಲ್ಲದೇ ಪಂಚಾಯಿತಿಯಲ್ಲಿ ಸದಸ್ಯರ ನಡುವೆ ಸಾಮರಸ್ಯವಿಲ್ಲದೆ ಇನ್ನಷ್ಟು ಒಳ್ಳೆಯ ಕೆಲಸಗಳು ನನೆಗುದಿಗೆ ಬಿದ್ದಿವೆ ಎಂದು ವಿಷಾದಿಸಿದ ಅರುಣಕುಮಾರಿ, ಈ ಭಾಗದ ಮಹಿಳೆಯರಿಗೆ ಅತೀ ಅಗತ್ಯವಿದ್ದ ಸ್ತ್ರೀಶಕ್ತಿ ಭವನ ನಿರ್ಮಾಣ ಹೆಮ್ಮೆ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಸಹಾಯಕ ನಿರ್ದೇಶಕ ರಾಕೇಶ್, ಜಿಪಂ ಮಾಜಿ ಅಧ್ಯಕ್ಷ ಎಚ್.ಎಸ್.ಅಶೋಕ್, ಗ್ರಾಪಂ ಅಧ್ಯಕ್ಷೆ ಅರುಣಕುಮಾರಿ, ಉಪಾಧ್ಯಕ್ಷೆ ಲತಾ ತಮ್ಮಯ್ಯ, ಸದಸ್ಯರಾದ ಎಚ್.ಸಿ.ಮಹದೇವ, ಮಹೇಶ್, ಚಂದ್ರಶೇಖರ್ ಜೋಗಿ, ನಾರಾಯಣ, ಎಚ್.ಪಿ.ತನುಕುಮಾರ್, ಎಚ್.ಬಿ.ರತ್ನಮ್ಮ, ಪುಟ್ಟಲಕ್ಷ್ಮಮ್ಮ, ಯಶಸ್ವಿನಿ, ಪವಿತ್ರಾ, ಕವಿತಾ, ಪಿಡಿಒ ರವಿಕುಮಾರ್, ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಸ್.ರಘು, ಹೆಬ್ಬಾಲೆ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ವಿ.ಶಿವಪ್ಪ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಇದ್ದರು.