ಜನಸಂಪರ್ಕ ಸಭೆಯಲ್ಲಿ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ, ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಚಂದ್ರಶೇಖರ್, ಕುಶಾಲನಗರ ಟೌನ್ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಆರ್.ಪ್ರದೀಪ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ದಿನೇಶ್‌ಕುಮಾರ್ ಮತ್ತಿತರರು ಹಾಜರಿದ್ದರು.
ಕುಶಾಲನಗರ: ಕೊಡಗು ಜಿಲ್ಲೆಯನ್ನು ಅಪರಾಧಮುಕ್ತ ಜಿಲ್ಲೆಯಾಗಿ ಕಟ್ಟುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅಭಿಪ್ರಾಯಪಟ್ಟರು.
ಕುಶಾಲನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ರೀತಿಯ ಅಪರಾಧಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತಾಗಬೇಕು. ಅಪರಾಧಮುಕ್ತ ಸಮಾಜಕ್ಕಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ನೈತಿಕ ಪೊಲೀಸ್‌ಗಿರಿಗೆ ಆಸ್ಪದವಾಗದಂತೆ ಇಲಾಖೆಯೊಂದಿಗೆ ಅತ್ಯಂತ ಸೌಜನ್ಯವಾಗಿ ನಡೆದುಕೊಳ್ಳುವ ಮೂಲಕ ಸ್ವಚ್ಛ, ಸುಂದರ, ಕ್ಷೇಮವಾದ ಕೊಡಗು ನಿರ್ಮಾಣಕ್ಕೆ ಬಿಂದುಮಣಿ ಸಲಹೆ ನೀಡಿದರು.
ಕುಶಾಲನಗರದ ಆಯ್ದ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಸಮರ್ಪಕ ಸಂಚಾರ ವ್ಯವಸ್ಥೆಗೆ ಕಾರ್ಯ ಯೋಜನೆ ರೂಪಿಸಲಾಗುವುದು. ಗ್ರಾಮ ಪಂಚಾಯಿತಿ, ಪುರಸಭೆ ಸಹಯೋಗದೊಂದಿಗೆ ಈ ಸಂಬಂಧ ಚರ್ಚಿಸಿ ಕ್ರಿಯಾಯೋಜನೆ ರೂಪಿಸಲಾಗುವುದು ಎಂದರು.
ಸೈಬರ್ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಬಗ್ಗೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು. ಪೊಲೀಸ್ ಇಲಾಖೆ ಮೂಲಕ ಭದ್ರತೆ ಕಲ್ಪಿಸಬಹುದೇ ಹೊರತು ನಾಗರಿಕರ ಸಿವಿಲ್ ವ್ಯಾಜ್ಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಹೆದ್ದಾರಿ ರಸ್ತೆಯಲ್ಲಿ ವೇಗ ನಿಯಂತ್ರಕಗಳನ್ನು ಅಳವಡಿಸುವ ಮೂಲಕ ಅಪಘಾತ ಪ್ರಕರಣಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ ಅವರು, ಗಾಂಜಾ ಮತ್ತಿತರ ಮಾದಕ ವಸ್ತುಗಳ ಮಾರಾಟ ಬಳಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ದಂಧೆಯನ್ನು ಬುಡಸಹಿತ ಕಿತ್ತು ಹಾಕಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಶಾಲಾ-ಕಾಲೇಜು ಮಕ್ಕಳು ಗಾಂಜಾ ಮತ್ತಿತರ ಮಾದಕ ವಸ್ತುಗಳಿಗೆ ಬಲಿಯಾಗುವುದನ್ನು ತಪ್ಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ನಾಗರಿಕರು ತಮ್ಮ ಸಮಸ್ಯೆಗಳ ನಿವಾರಣೆಗಾಗಿ ತುರ್ತು ಸಂಖ್ಯೆಗಳಾದ 112/1930/1098 ಸಂಪರ್ಕಿಸಿ ಸಹಾಯ ಹಸ್ತ ಕೋರುವಂತೆ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಅವರು ಕೋರಿದರು.
ಸಭೆಯಲ್ಲಿ ಸಂಘ ಸಂಸ್ಥೆಗಳ ಪ್ರಮುಖರು ಕುಶಾಲನಗರ, ಸುಂಟಿಕೊಪ್ಪ ಭಾಗದ ಸಮಸ್ಯೆಗಳ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದರು.
ಪಟ್ಟಣದಲ್ಲಿ ಆಟೋ ನಿಲ್ದಾಣಗಳ ಮೂಲಕ ಸಂಚಾರ ವ್ಯವಸ್ಥೆಗೆ ತೊಡಕು ಉಂಟಾಗುತ್ತಿರುವುದು, ಗೌರಿ-ಗಣೇಶ ಹಬ್ಬದ ಸಂದರ್ಭ ನಾಗರಿಕ ಬಡಾವಣೆಗಳಲ್ಲಿ ಕಿರಿಕಿರಿ ಉಂಟಾಗುತ್ತಿರುವುದು, ಕುಶಾಲನಗರ ಪಟ್ಟಣ ಸುತ್ತಮುತ್ತ ನಿಯಮಬಾಹಿರವಾಗಿ ಮಸಾಜ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವುದು, ಮೈಸೂರು ಕೊಡಗು ಗಡಿಭಾಗದ ಅಪರಾಧ ಸಂಬಂಧ ವಿಷಯಗಳ ಬಗ್ಗೆ ನಾಗರಿಕರು ಗಮನಕ್ಕೆ ತಂದರು.
ಪಟ್ಟಣ ಪೊಲೀಸ್ ಠಾಣೆಗೆ ಮಹಿಳಾ ಅಧಿಕಾರಿ ನೇಮಕ, ಖಾಸಗಿ ಹಣಕಾಸು ಸಂಸ್ಥೆಗಳ ಕಿರುಕುಳ, ಪೊಲೀಸ್ ಸಿಬ್ಬಂದಿ ಕೊರತೆ, ಸೈಬರ್ ಅಪರಾಧ ಬಗ್ಗೆ, ಪ್ರವಾಸಿ ಕೇಂದ್ರಗಳ ಸಮಸ್ಯೆ, ವಾರಾಂತ್ಯದಲ್ಲಿ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ವಾಹನ ಸಂಚಾರ ದಟ್ಟಣೆ, ಹಾರಂಗಿ ಅಣೆಕಟ್ಟು ಭದ್ರತೆಯಲ್ಲಿ ಪೊಲೀಸ್ ವೈಫಲ್ಯ, ಕೂಡಿಗೆಯಲ್ಲಿ ಸಂಚಾರ ಪೊಲೀಸ್ ನೇಮಕ ವಿಷಯಗಳ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರಲಾಯಿತು.
ಸಾರ್ವಜನಿಕರ ಅಹವಾಲನ್ನು ಆಲಿಸಿದ ಪೊಲೀಸ್ ಅಧೀಕ್ಷಕರು ಹಂತ ಹಂತವಾಗಿ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವ ಭರವಸೆ ಒದಗಿಸಿದರು.
ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕುಶಾಲನಗರ ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ದಿನೇಶ್‌ಕುಮಾರ್ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾಹಿತಿ ಒದಗಿಸಿದರು.
ಕುಶಾಲನಗರ ಟೌನ್ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಆರ್.ಪ್ರದೀಪ್ ಅವರು ಸ್ವಾಗತಿಸಿದರು. ಸೋಮವಾರಪೇಟೆ ಇನ್‌ಸ್ಪೆಕ್ಟರ್ ಮುದ್ದು ಮಹಾದೇವಯ್ಯ ಶನಿವಾರಸಂತೆಯ ಇನ್‌ಸ್ಪೆಕ್ಟರ್ ಕೃಷ್ಣರಾಜು ಇದ್ದರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಪೊಲೀಸರು ಹಾಗೂ ಸಾರ್ವಜನಿಕರು ಇದ್ದರು.