ವೇದಿಕೆಯಲ್ಲಿ ಭೂಮಿಕ ಮಹಿಳಾ ಒಕ್ಕೂಟದ ಅಧ್ಯಕ್ಷೆ ಫಿಲೋಮಿನಾ, ಶಿಕ್ಷಕಿ ಮಾಲಾದೇವಿ , ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ , ಯೋಜನೆಯ ಪ್ರಮುಖರಾದ ವಿ.ಡಿ.ಪುಂಡರೀಕಾಕ್ಷ, ಕುಶಾಲನಗರ ಎಪಿಸಿಎಂಎಸ್ ಅಧ್ಯಕ್ಷೆ ಹೆಬ್ಬಾಲೆ ಚಂದ್ರಕಲಾ, ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕ ನಾಗರಾಜು, ಸೇವಾಪ್ರತಿನಿಧಿಗಳಾದ ಗಣೇಶ್, ಲೀಲಾ, ಶೈಲಾ, ಜಯಲಕ್ಷ್ಮೀ, ನಿರ್ಮಲಾ ಮತ್ತಿತರರಿದ್ದರು. 
ಕೊಡಗು

ಹೆಣ್ಣು ಭೋಗದ ವಸ್ತುವಲ್ಲ, ಭಾಗ್ಯದ ದೇವತೆ

ಕುಶಾಲನಗರ: ಹೆಣ್ಣು ಭೋಗದ ವಸ್ತುವಲ್ಲ, ಅವಳು ಕುಟುಂಬಗಳನ್ನು ಬೆಳಗುವ, ಸಂಸ್ಕೃತಿ ಸಂಪ್ರದಾಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ಭಾಗ್ಯದ ದೇವತೆ ಎಂದು ಶಿಕ್ಷಕಿ ಮಾಲಾದೇವಿ ಬಣ್ಣಿಸಿದರು.
ಕುಶಾಲನಗರ ಹಾಗೂ ಸೋಮವಾರಪೇಟೆ ಅವಳಿ ತಾಲೂಕುಗಳ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಕುಶಾಲನಗರದ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಕುಟುಂಬದ ಕ್ಷೇಮಕ್ಕಾಗಿ ಹಗಲಿರುಳು ದುಡಿಯುವ ಹೆಣ್ಣು ಸಂಸಾರದ ಕಣ್ಣು, ಮಹಿಳೆಯಿಲ್ಲದ ಕುಟುಂಬಗಳನ್ನು ಊಹಿಸಲೂ ಸಾಧ್ಯವಿಲ್ಲ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನೇಕ ಜನಪರವಾದ ಯೋಜನೆಗಳು ಹಾಗೂ ಕಾರ್ಯಕ್ರಮಗಳಿಂದಾಗಿ ಹಳ್ಳಿಗಾಡು ಪ್ರದೇಶಗಳಲ್ಲಿ ಮಹಿಳೆಯರ ಗ್ರಾಮೀಣರ ಬದುಕು ಹಸನಾಗಿದೆ.
ಒಂದು ಸರ್ಕಾರ ಮಾಡಬೇಕಾದ ಸುಸ್ಥಿರ, ಸ್ವಸ್ಥ ಸಮಾಜ ಕಟ್ಟುವ ಕಾಯಕದಲ್ಲಿ ಧರ್ಮಸ್ಥಳ ಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಮಾಲಾದೇವಿ ಹೇಳಿದರು.
ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಯೋಜನೆಗಳ ಕುರಿತು ಮಾಹಿತಿ ನೀಡುತ್ತಾ, ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕಿನ ವ್ಯಾಪ್ತಿಗಳಲ್ಲಿ 1849 ಸಂಘಗಳಿದ್ದು 17294 ಸದಸ್ಯರಿದ್ದಾರೆ.
ಸದಸ್ಯರಿಗೆ 1.14 ಕೋಟಿ ರೂ.ಗಳ ಪ್ರಗತಿ ನಿಧಿ ವಿತರಿಸಲಾಗಿದೆ. ನಮ್ಮೂರ ಕೆರೆಗಳ ಯೋಜನೆಯಲ್ಲಿ 5 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. 67 ನಿರ್ಗತಿಕ ಕುಟುಂಬಗಳಿಗೆ ಮಾಸಾಶನ ನೀಡಲಾಗುತ್ತಿದೆ.
114 ದೇವಾಲಯಗಳನ್ನು ಜೀರ್ಣೊದ್ಧಾರಗೊಳಿಸಲಾಗಿದೆ. 570 ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಸ್ವಚ್ಛ ಮಾಡಲಾಗಿದೆ. 845 ಲಕ್ಷ ರೂ.ಗಳ ಸುಜ್ಞಾನ ನಿಧಿ ನೀಡಲಾಗಿದೆ ಎಂದು ಸಮಗ್ರ ಸೇವೆಗಳ ಬಗ್ಗೆ ಹನುಮಂತಪ್ಪ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಭೂಮಿಕ ಮಹಿಳಾ ಒಕ್ಕೂಟದ ಅಧ್ಯಕ್ಷೆ ಫಿಲೋಮಿನಾ ಮಾತನಾಡಿ, ಮಹಿಳೆಯರ ಸಬಲೀಕರಣ ಯೋಜನೆಯ ಉದ್ದೇಶವಾಗಿದ್ದು ಧರ್ಮಸ್ಥಳ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಲಹೆ ನೀಡಿದರು.
ಯೋಜನೆಯ ಪ್ರಮುಖರಾದ ವಿ.ಡಿ.ಪುಂಡರೀಕಾಕ್ಷ, ಕುಶಾಲನಗರ ಎಪಿಸಿಎಂಎಸ್ ಅಧ್ಯಕ್ಷೆ ಹೆಬ್ಬಾಲೆ ಚಂದ್ರಕಲಾ ಮಾತನಾಡಿದರು.
ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕ ನಾಗರಾಜು, ಸೇವಾಪ್ರತಿನಿಧಿಗಳಾದ ಗಣೇಶ್, ಲೀಲಾ, ಶೈಲಾ, ಜಯಲಕ್ಷ್ಮೀ, ನಿರ್ಮಲಾ ಮತ್ತಿತರರಿದ್ದರು.