ಕುಶಾಲನಗರ ತಾಲೂಕಿನ ಕೂಡಿಗೆ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಮ್ಮಿಕೊಂಡಿದ್ದ ಕಂಪ್ಯೂಟರ್ ಸೈನ್ಸ್ ಪಠ್ಯಪುಸ್ತಕ ಪರಿಷ್ಕರಣಾ ಕಾರ್ಯಾಗಾರದವನ್ನು ಡಾ.ರಾಜಾರಾಂ ಶರ್ಮ ಉದ್ಘಾಟಿಸಿದರು. ಪುಂಡಲೀಕ ಅನವಾಲ, ಬೆಳ್ಳಶೆಟ್ಟಿ, ಕೆ.ಆರ್. ಭಾರತಿ ಇತರರು ಇದ್ದರು.  
ಕೊಡಗು

ಎ ಐ ತಂತ್ರಜ್ಞಾನ ಸದ್ಬಳಕೆ ಮಾಹಿತಿ ನೀಡಿ

ಎ. ಆರ್. ರಘುರಾಮ
ಕುಶಾಲನಗರ : ಕುಶಾಲನಗರ ತಾಲೂಕಿನ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಕಂಪ್ಯೂಟರ್ ಸೈನ್ಸ್ ಪಠ್ಯಪುಸ್ತಕ ಪರಿಷ್ಕರಣಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಶಿಕ್ಷಣ ತಜ್ಞ ಡಾ.ರಾಜಾರಾಂ ಶರ್ಮ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಎ ಐ ತಂತ್ರಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದೆ. ಈ ತಂತ್ರಜ್ಞಾನದ ಸದ್ಬಳಕೆ ಬಗ್ಗೆ ಪಠ್ಯದಲ್ಲಿ ಮಾಹಿತಿ ಸೇರ್ಪಡೆ ಮಾಡಬೇಕು ಎಂದು ಸಲಹೆ ನೀಡಿದರು.
ಇಂದು ಎಲ್ಲ ವಿಷಯಗಳಲ್ಲೂ ತಂತ್ರಜ್ಞಾನದ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ವಿಜ್ಞಾನ ದೊಂದಿಗೆ ತಂತ್ರಜ್ಞಾನವೂ ಸೇರಿದರೆ ಎಂಥಹಾ ಕಠಿಣ ಕೆಲಸವನ್ನೂ ಸುಲಭವಾಗಿಸಬಹುದು, ಆಧುನಿಕ ಜಗತ್ತಿನಲ್ಲಿ ಮುಂದುವರಿದ ದೇಶಗಳೊಂದಿಗೆ ಭಾರತವು ಪೈಪೋಟಿ ಮಾಡಬೇಕಾದ ಕಾರಣ ತಂತ್ರಜ್ಞಾನ ಬಳಕೆ ಬಗ್ಗೆ ಪಠ್ಯಕ್ರಮದಲ್ಲಿ ವಿಷಯ ಅಳವಡಿಸಬೇಕು ಎಂದರು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಉಪನಿರ್ದೇಶಕ ಪುಂಡಲೀಕ ಅನವಾಲ ಮಾತನಾಡಿ, ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ತಂತ್ರಜ್ಞಾನ ವಿಷಯ ಆಧಾರಿತ ಬೋಧನೆ ನಡೆಯುತ್ತಿದೆ. ಇದರಿಂದ ಮಕ್ಕಳು ಬಹಳ ಉಪಯೋಗ ಪಡೆದುಕೊಂಡಿದ್ದಾರೆ. ಶಿಕ್ಷಕರು ಮಕ್ಕಳಿಗೆ ಎ ಐ ತಂತ್ರಜ್ಞಾನದ ಬಗ್ಗೆ ಇನ್ನು ಹೆಚ್ಚಿನ ಒತ್ತು ನೀಡಿ ಕಲಿಸಬೇಕೆಂದು ತಿಳಿಸಿದರು.
ಶೈಕ್ಷಣಿಕ ಸಮಾಲೋಚಕ ಬೆಳ್ಳಶೆಟ್ಟಿ ಮಾತನಾಡಿದರು. ಶಾಲೆಯ ಪ್ರಾಂಶುಪಾಲರಾದ ಭಾರತಿ ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಟರ್ ಸೈನ್ಸ್ ಪಠ್ಯಪುಸ್ತಕ ಪರಿಷ್ಕರಣಾ ಕಾರ್ಯಾಗಾರದಲ್ಲಿ ವಿವಿಧ ಜಿಲ್ಲೆಗಳ 25 ಮಂದಿ ಗಣಕಯಂತ್ರ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.