ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳು ಹಾಗು ಬಡಾವಣೆಯ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎಂ .ಕೆ. ದಯಾನಂದ ಮತ್ತಿತರರು. 
ಕೊಡಗು

ಹಿತರಕ್ಷಣಾ ವೇದಿಕೆಯ ವಾರ್ಷಿಕೋತ್ಸವ

ಎ. ಆರ್. ರಘುರಾಮ
ಕುಶಾಲನಗರ: ಕುಶಾಲನಗರ ಪುರಸಭಾ ವ್ಯಾಪ್ತಿಯ ಮುಳ್ಳುಸೋಗೆಯಲ್ಲಿ ಕುವೆಂಪು ಬಡಾವಣೆಯ ಹಿತರಕ್ಷಣಾ ವೇದಿಕೆಯ ವಾರ್ಷಿಕೋತ್ಸವ ಸಮಾರಂಭ ಭಾನುವಾರ ಬಡಾವಣೆಯ ಉದ್ಯಾನವನದಲ್ಲಿ ನಡೆಯಿತು. ಬಡಾವಣೆಯ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎಂ .ಕೆ. ದಯಾನಂದ ಅವರ ಅಧ್ಯಕ್ಷತೆಯಲ್ಲಿ ಸಮಾರಂಭವು ನಡೆದಿದ್ದು ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಬಡಾವಣೆಯಲ್ಲಿನ ಎಲ್ಲ ಸಮುದಾಯದವರು ಸಾಮರಸ್ಯದಿಂದ ಜೀವಿಸುತ್ತಿದ್ದು ಎಲ್ಲರ ಒಕ್ಕೊರಲ ಹೋರಾಟದ ಫಲವಾಗಿ ಬಡಾವಣೆಗೊದಗಿದ ಹಾಗೂ ಸಂಭವನೀಯ ಪ್ರವಾಹ ತಡೆಗೆ ಕೆಲ ವರ್ಷಗಳ ಹಿಂದೆ ನಾಲ್ಕು ಕೋಟಿ ರೂ.ವೆಚ್ಚದಲ್ಲಿ ಕಾವೇರಿ ನದಿ ಅಂಚಿನಲ್ಲಿ ತಡೆಗೋಡೆ ನಿರ್ಮಾಣವಾಗಿದ್ದು, ಬಡಾವಣೆಯ ಪ್ರವೇಶ ದ್ವಾರದಲ್ಲಿ ಸ್ವಾಗತ ಕಮಾನು ಹಾಗೂ ಕುವೆಂಪು ಪುತ್ತಳಿ ನಿರ್ಮಾಣ ಮಾಡುವ ಚಿಂತನೆ ಹೊಂದಲಾಗಿದೆ ಎಂದರು.
ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಾಡಿಸಲಾಗಿತ್ತು. ಮಧ್ಯಾಹ್ನದ ಭೋಜನದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ 13 ಮಂದಿ ಪೌರ ಕಾರ್ಮಿಕರನ್ನು ವಿಶೇಷವಾಗಿ ಆಹ್ವಾನಿಸಿ ಅವರಿಗೆ ಮಧ್ಯಾಹ್ನದ ಭೋಜನದೊಂದಿಗೆ ನಗದು ಕಾಣಿಕೆ ನೀಡಿ ಗೌರವಿಸಲಾಯಿತು.
ಬಡಾವಣೆಯ ಕಾರ್ಯದರ್ಶಿ ಬೀನಾ ಅನಿಲ್ ಕುಮಾರ್, ಖಜಾಂಚಿ ಬಿ.ಎಮ್. ರವೀಂದ್ರ, ಸಲಹೆಗಾರರಾದ ಕೆ .ಜಿ. ಚಂದ್ರಶೇಖರ್, ನಿರ್ದೇಶಕ ಸಿ. ಕೆ. ಹೇಮಂತ್, ಅಮರಾವತಿ, ಪ್ರಕಾಶ್ ಇದ್ದರು. ಬುಟ್ಟಂಡ ಪಿ. ಶರಿ ಕಾರ್ಯಪ್ಪ ಕಾರ್ಯಕ್ರಮ ನಿರೂಪಿಸಿದ್ದು, ಆರಂಭದಲ್ಲಿ ಚಂದ್ರಶೇಖರ್ ಸ್ವಾಗತಿಸಿ, ಬಿ. ಎಂ. ರವೀಂದ್ರ ವಂದಿಸಿದರು.