ಎಮ್ಮೆಮಾಡು ಉರುಸ್ ಪ್ರಯುಕ್ತ ’ಕೊಡಿ ತೂಕಲ್’ ಕಾರ್ಯಕ್ರಮದ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಜಮಾ ಅತ್ ಪ್ರಮುಖರು.
ನಾಪೋಕ್ಲು: ಎಮ್ಮೆಮಾಡು ಉರುಸ್ ಪ್ರಯುಕ್ತ ’ಕೊಡಿ ತೂಕಲ್’ ಕಾರ್ಯಕ್ರಮ ಎಮ್ಮೆಮಾಡು ದರ್ಗದಲ್ಲಿ ಶ್ರದ್ಧಾ ಭಕ್ತಿಯಿಂದ ಮಂಗಳವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಜಮಾಯತ್ ಪದಾಧಿಕಾರಿಗಳ ಹಾಗೂ ಗ್ರಾಮಸ್ಥರು ಅಲ್ಲಿಯ ಮಸೀದಿ ಆವರಣದಿಂದ ದಫ್ಫ್ ಪ್ರದರ್ಶನದೊಂದಿಗೆ ಸೂಫೀ ಶಹೀದ್ , ಸಯ್ಯಿದ್ ಹಸ್ಸನ್ ಸಖಾಫ್ ಹಾಗೂ ಇತರ ದರ್ಗಾಗಳಿಗೆ ತೆರಳಿ ಜಮಾಅತ್ತ್ ಅಧ್ಯಕ್ಷ ಹುಸೈನ್ ಸಖಾಫಿ ಅವರ ನೇತೃತ್ವದಲ್ಲಿ ಚಾದರ ಹೊದಿಸಿ ಆ ಬಳಿಕ ಉರುಸ್ ಸಮಾರಂಭಗಳು ಯಾವುದೇ ವಿಘ್ನಗಳಿಲ್ಲದೆ ಸುಶೂತ್ರವಾಗಿ ಜರುಗಲಿ ಎಂದು ದರ್ಗದಲ್ಲಿ ಸಾಮೂಹಿಕ ವಿಶೇಷ ಪ್ರಾರ್ಥನೆ ಮಾಡಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಪಾರಂಪರಿಕವಾಗಿ ಆಚರಿಸಿಕೊಂಡು ಬಂದ ಈ ’ಕೊಡಿ ತೂಕಲ್’ ಕಾರ್ಯಮವು ಉರುಸ್ ಕಾರ್ಯಕ್ರಮದ ಸಿದ್ಧತೆಗೆ ಸಂಬಂಧಿಸಿದ ಧ್ವಜಗಳನ್ನು ಪ್ರಥಮವಾಗಿ ಸಾಂಕೇತಿಕವಾಗಿ ದರ್ಗಾದಲ್ಲಿ ಕಟ್ಟಿ ಬಲಿಕ ಊರಿನಲ್ಲಿ ಕಟ್ಟಿ ಅಲಂಕರಿಸುವ ಪದ್ಧತಿಯಾಗಿದೆ.
ತಾಜುಲ್ ಇಸ್ಲಾಂ ಮುಸ್ಲಿಂ ಜಮಾ ಅತ್ ಅಧ್ಯಕ್ಷ ಹುಸೈನ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಝಕರಿಯ ಸಅದಿ ಅಲ್ ಐದರೂಸಿ ಮತ್ತು ಸೈಯದ್ ಸಿಹಬುದ್ದೀನ್ ತಂಗಲ್ ಎಮ್ಮೆಮಾಡು ಅವರು ಮಾತನಾಡಿ, ಸಾಮರಸ್ಯದ ಕೇಂದ್ರವಾದ ಎಮ್ಮೆಮಾಡು ಉರುಸ್ ಕಾರ್ಯಕ್ರಮಕ್ಕೆ ಜಾತಿ ಧರ್ಮ ಭೇದವಿಲ್ಲದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಕೋಶಾಧಿಕಾರಿ ಅಬ್ದುಲ್ ಮಜೀದ್, ಮುದರ್ರಿಸ್, ಹಂಸ ಸಖಾಫಿ, ಖತೀಬ್ ರಾಜಿಕ್ ಫೈಜು, ತಾಜುಲ್ ಇಸ್ಲಾಂ ಮುಸ್ಲಿಂ ಜಮಾಯತ್ ಪದಾಧಿಕಾರಿಗಳು, ಸದಸ್ಯರು ಇದ್ದರು.