ಅಪೂರ್ಣಗೊಂಡಿರುವ ಮಡಿಕೇರಿಯ ಕೊಡವ ಹೆರಿಟೇಜ್ ಸೆಂಟರ್ ಕಟ್ಟಡ ಕಾಮಗಾರಿ
ಮಹತ್ವಾಕಾಂಕ್ಷೆಯ ಕೊಡವ ಹೆರಿಟೇಜ್ ನಿರ್ಮಾಣ ಯೋಜನೆಗೆ ಮತ್ತೆ ಜೀವ ಸಿಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಈ ಸಂಬAಧ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸದನದಲ್ಲಿ ವಿಷಯ ಪ್ರಸ್ತಾಪ ಮಾಡಿದ್ದು, ಪ್ರವಾಸೋದ್ಯಮ ಸಚಿವರಿಂದ ಸಕರಾತ್ಮಕ ಪ್ರತಿಕ್ರಿಯೆಯೂ ಸಿಕ್ಕಿದೆ. ಯೋಜನೆಯ ಅನುಷ್ಠಾನಕ್ಕಾಗಿ 5 ಕೋಟಿ ರೂ. ಮೀಸಲಿಟ್ಟಿದ್ದು, ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ಮುಂದಿನ ಕಾಮಗಾರಿಗೆ ಹಣ ಬಿಡುಗಡೆಯೂ ಆಗಿದೆ.
ಮಡಿಕೇರಿಯಲ್ಲಿ ಕೊಡವ ಹೆರಿಟೇಜ್ ಸೆಂಟರ್ ಶುರುಮಾಡಲು 2009-10ರಲ್ಲಿ ಚಿಗುರೊಡೆದ ಕನಸಿಗೆ ಪೂರಕವಾಗಿ 2011ರ ಸೆ.21ರಂದು ಯೋಜನೆಗೆ ಭೂಮಿ ಪೂಜೆ ಮಾಡಲಾಯಿತಾದರೂ 15 ವರ್ಷಗಳಾದರೂ ಯೋಜನೆಗೆ ಅನುಷ್ಠಾನಕ್ಕೆ ಬಂದಿಲ್ಲ. ಕೊಡಗಿನ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರಗಳ ಬಗ್ಗೆ ಗಮನ ಸೆಳೆಯಲು ಕೊಡವ ಐನ್ ಮನೆ ಮಾದರಿಯಲ್ಲಿ ನಿರ್ಮಾಣ ಆಗಬೇಕಿದ್ದ ಕೊಡವ ಹೆರಿಟೇಜ್ ಸೆಂಟರ್ ಅರ್ಧಂಬರ್ಧ ಕಾಮಗಾರಿಯಿಂದಾಗಿ ಪಳೆಯುಳಿಕೆಯಂತೆ ಕಂಡುಬರುತ್ತಿದೆ.
ಐನ್ ಮನೆ, ಸಭಾಂಗಣ, ಒಳಾಂಗಣದಲ್ಲಿ ಪುಟ್ಟ ಕೊಳ, ತೆರೆದ ಸಭಾಂಗಣ, ಗ್ರಂಥಾಲಯ, ಹಳೇ ವಸ್ತುಗಳ ಸಂಗ್ರಹಾಲಯ, ಕುಡಿಯುವ ನೀರು ಇನ್ನಿತರ ವ್ಯವಸ್ಥೆಗಳೊಂದಿಗೆ ಗ್ರಾಮೀಣ ಸೊಗಡನ್ನು ಬಿಂಬಿಸುವ ಮೂಲಕ ಶ್ರೀಮಂತ ಕೊಡವ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಕೊಡವ ಹೆರಿಟೇಜ್ ನಿರ್ಮಾಣದ ಸಂಕಲ್ಪ ಮಾಡಲಾಯಿತು. ಮೊದಲ ಹಂತದಲ್ಲಿ 1.45 ಕೋಟಿ ರೂ. ವೆಚ್ಚದ ಯೋಜನೆ ಸಿದ್ದಪಡಿಸಲಾಯಿತಾದರೂ ನಂತರ ಇದು 2.68 ಕೋಟಿ ರೂ.ಗೆ ಏರಿಸಲಾಯಿತು.
ಪ್ರವಾಸೋದ್ಯಮ ಇಲಾಖೆಯ ಮೂಲಕ ನಬಾರ್ಡ್ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ಕಾಮಗಾರಿಯ ಮುಂದಾಳತ್ವ ವಹಿಸಿತ್ತು. ಮಡಿಕೇರಿ ಹೊರವಲಯದ ಕರವಲೆ ಬಾಡಗ ಗ್ರಾಮದಲ್ಲಿ 4 ಎಕರೆ ಪ್ರದೇಶವನ್ನು ಗುರುತಿಸಿ 2011ರ ಸೆ.21 ರಂದು ಕಾಮಗಾರಿ ಅಧಿಕೃತವಾಗಿ ಆರಂಭಿಸಲಾಯಿತು. ಒಪ್ಪಂದದ ಪ್ರಕಾರ ಗುತ್ತಿಗೆದಾರ ಕಾಮಗಾರಿಯನ್ನು 2012ರ ಸೆ.21ಕ್ಕೆ ಪೂರ್ಣಗೊಳಿಸಿ ಕಟ್ಟಡವನ್ನು ಪ್ರವಾಸೋದ್ಯಮ ಇಲಾಖೆಗೆ ಬಿಟ್ಟುಕೊಡಬೇಕಿತ್ತು. ಆರಂಭದಲ್ಲಿ ಕಾಮಗಾರಿ ಚುರುಕಾಗಿ ನಡೆಯಿತಾದರೂ ನಂತರ ಸಂಪೂರ್ಣ ನೆನೆಗುದಿಗೆ ಬಿದ್ದಿದೆ.
ಕೊಡಗಿನ ಪ್ರವಾಸೋದ್ಯಕ್ಕೆ ಅಮೂಲ್ಯ ಕೊಡುಗೆ ಆಗಬಹುದಾಗಿದ್ದ ಕೊಡವ ಹೆರಿಟೇಜ್ ಸೆಂಟರ್ ಈಗ ಸಂಬAಧಿಸಿದವರ ನಿರ್ಲಕ್ಷö್ಯತನಕ್ಕೆ ಸಾಕ್ಷಿಯಾಗಿ ನಿಂತಿದೆ. ಕಾಮಗಾರಿಯಲ್ಲಿನ ತಾಂತ್ರಿಕ ಸಮಸ್ಯೆಗಳು, ಕಳಪೆ ಕಾಮಗಾರಿ ಆರೋಪ, ಜನಪ್ರತಿನಿಧಿಗಳಲ್ಲಿನ ಇಚ್ಛಾಶಕ್ತಿಯ ಕೊರತೆ, ಅರ್ಧಕ್ಕೆ ಕೆಲಸ ನಿಲ್ಲಿಸಿದ ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರ, ಪ್ರಾಕೃತಿಕ ವಿಕೋಪ, ಕೋವಿಡ್-19 ಪರಿಣಾಮ ಹೀಗೆ ವಿವಿಧ ಕಾರಣಗಳಿಂದಾಗಿ ಯೋಜನೆ ಬಹುತೇಕ ಕಾಡುಪಾಲಾಗುವ ಹಂತ ತಲುಪಿದೆ.
ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿ ವಿಷಯಕ್ಕೆ ಸಂಬAಧಿಸಿದAತೆ ಪಿಡಬ್ಯೂಡಿ ಅಧಿಕಾರಿಗಳು ಸಾಕಷ್ಟು ಬಾರಿ ಜಿಲ್ಲಾ ಕೆಡಿಪಿ ಸಭೆಗಳಲ್ಲಿ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರಿಂದ ಛೀಮಾರಿ ಹಾಕಿಸಿಕೊಂಡಿದ್ದೂ ಇದೆ. ಪ್ರತಿ ಬಾರಿಯೂ ಒಂದೊAದು ಗಡುವು, ಒಂದೊAದು ನೆಪ ಹೇಳಿಕೊಳ್ಳುತ್ತಲೇ ಅಧಿಕಾರಿಗಳು ಬೀಸುವ ದೊಣ್ಣೆಯಿಂದ ಆ ಹೊತ್ತಿಗೆ ಪಾರಾಗುತ್ತಿದ್ದಾರೆಯೇ ವಿನಃ ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಮಾತ್ರ ಕಂಡುಬರುತ್ತಿಲ್ಲ. ಯೋಜನೆಗೆ ಮೊದಲ ಹಂತದಲ್ಲಿ 3 ಕೋಟಿ ರೂ. ಬಿಡುಗಡೆಯಾಗಿತ್ತು. ಈಗ 4.95 ಕೋಟಿ ರೂ. ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನುವುದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸದ್ಯದ ಮಾತು.
ಕಾಡುಪಾಲಾಗುತ್ತಿರುವ ಕೊಡವ ಹೆರಿಟೇಜ್ ಸೆಂಟರ್ ಬಗ್ಗೆ ಕೊಡವ ಸಮಾಜಗಳು, ಕೊಡವ ಸಂಸ್ಕೃತಿ ಬಗ್ಗೆ ಕಾಳಜಿ ಇರುವವರು ಆಗಾಗ್ಗೆ ಸರ್ಕಾರ, ಜನಪ್ರತಿನಿಧಿಗಳ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಆದರೆ ಇಲ್ಲಿಯ ತನಕ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದೀಗ ಡಾ. ಮಂತರ್ ಗೌಡ ವಿಷಯವನ್ನು ಸದನದಲ್ಲಿ ಪ್ರಸ್ತಾಪ ಮಾಡಿರುವುದರಿಂದ ಯೋಜನೆ ಬಗ್ಗೆ ಒಂದಿಷ್ಟು ಆಶಾಭಾವನೆ ಮೂಡಿದೆ. ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿ ಸ್ಥಗಿತವಾಗಿರುವ ಕುರಿತು ಮತ್ತು ಕೊಡಗಿಗೆ ಈ ಯೋಜನೆಯ ಅಗತ್ಯತೆ ಬಗ್ಗೆ ಪ್ರವಾಸೋದ್ಯಮ ಸಚಿವರ ಗಮನ ಸೆಳೆಯುವಲ್ಲೂ ಮಂತರ್ ಗೌಡ ಯಶಸ್ವಿಯಾಗಿದ್ದಾರೆ.
ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿ ಮುಂದುವರಿಸುವುದಕ್ಕಾಗಿ ಶಾಸಕ ಡಾ. ಮಂತರ್ ಗೌಡ ಪ್ರಯತ್ನದಿಂದಾಗಿ 5 ಕೋಟಿ ರೂ. ಮೀಸಲಿಟ್ಟಿರುವುದಾಗಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಸದನದಲ್ಲಿ ಮಾಹಿತಿ ನೀಡಿದ್ದಾರೆ. ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ಮುಂದಿನ ಕಾಮಗಾರಿ ಹಣ ಬಿಡುಗಡೆ ಆಗಿದೆ ಎಂದೂ ಅವರು ತಿಳಿಸಿದ್ದಾರೆ. ಕೊಡವರ ಕಲೆ, ಸಂಸ್ಕೃತಿ ಪ್ರವಾಸಿಗರಿಗೆ ಪರಿಚಯಿಸುವಲ್ಲಿ ಕೊಡವ ಹೆರಿಟೇಜ್ ಸೆಂಟರ್ ಪ್ರಮುಖ ಪಾತ್ರ ವಹಿಸಲಿರುವುದರಿಂದ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತು ನೀಡುವುದಾಗಿ ಕೂಡ ಹೇಳಿದ್ದಾರೆ.
ಮಡಿಕೇರಿ ಹೊರವಲಯದ ಕರವಲೆ ಬಾಡಗ ಗ್ರಾಮಕ್ಕೆ ಸಂಬAಧಿಸಿದ ಸುಂದರವಾದ ಗುಡ್ಡ ಪ್ರದೇಶದ 4 ಎಕರೆ ಪ್ರದೇಶದಲ್ಲಿ ಕೊಡವ ಹೆರಿಟೇಜ್ ಸೆಂಟರ್‌ನ ಸುಮಾರು ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇದಾಗಿ ಈಗಾಗಲೇ 10 ವರ್ಷಗಳು ಕಳೆದಿವೆ. ಮಳೆ, ಗಾಳಿಗೆ ತೆರೆದುಕೊಂಡಿದ್ದ ಈ ಕಟ್ಟಡಗಳು ಈಗ ಗುಣಮಟ್ಟದಿಂದ ಕೂಡಿದೆಯಾ ಎನ್ನುವುದು ಸ್ಥಳೀಯರ ಪ್ರಶ್ನೆ. ಗೋಡೆ ಮತ್ತು ಮೆಟ್ಟಿಲಿನ ಕಾಮಗಾರಿ ಕಳಪೆಯಾಗಿದೆ ಎಂದು ಈ ಹಿಂದೆಯೇ ಆರೋಪಗಳು ಕೇಳಿ ಬಂದಿದ್ದವು. ಇದೀಗ ಇಲ್ಲಿಯೇ ಕಾಮಗಾರಿ ಮುಂದುವರಿಸುವುದು ಎಷ್ಟು ಸುರಕ್ಷಿತ ಎನ್ನುವ ಮಾತುಗಳೂ ಕೇಳಿಬರುತ್ತಿದೆ. ಮರು ಕಾಮಗಾರಿ ಆರಂಭಿಸುವ ಮೊದಲು ಸುರಕ್ಷತೆಯ ಪರೀಕ್ಷೆ ನಡೆಯಬೇಕು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಕೊಡವ ಹೆರಿಟೇಜ್ ಸೆಂಟರ್‌ಗೆ ಮೀಸಲಿಟ್ಟಿರುವ ಹಣ ಬಳಸಿಕೊಂಡು ಆದಷ್ಟು ಬೇಗ ಕಾಮಗಾರಿ ಆರಂಭಿಸಬೇಕು. ಕಾಮಗಾರಿ ಪೂರ್ಣಗೊಂಡ ನಂತರ ಈ ಕೇಂದ್ರ ಕೊಡವರ ಸಂಸ್ಕೃತಿ, ಕಲೆ, ಆಟ್, ನೃತ್ಯ ಪ್ರದರ್ಶನ, ವಸ್ತುಸಂಗ್ರಾಹಲಯ ಆರಂಭಕ್ಕೆ ಖಾಸಗಿ ಸಹಭಾಗಿತ್ವದ ಅವಕಾಶ ಇದ್ದರೆ ಬಳಸಿಕೊಳ್ಳುವ ಮೂಲಕ ಕೇಂದ್ರದ ಸದುಪಯೋಗಪಡಿಸಿಕೊಳ್ಳಬಹುದು. ಕೊಡವ ಸಮಾಜಗಳು, ಕೊಡವ ಸಾಹಿತ್ಯ ಅಕಾಡೆಮಿಯನ್ನೂ ಇದರಲ್ಲಿ ಒಳಗೊಳ್ಳುವಂತೆ ಮಾಡಬಹುದು. ಒಟ್ಟಿನಲ್ಲಿ ಯೋಜನೆ ಆದಷ್ಟು ಬೇಗ ಆರಂಭವಾಗಬೇಕು.
ಪ್ರವಾಸೋದ್ಯಮಕ್ಕೆ ಕೊಡಗು ಪ್ರಮುಖ ಕೇಂದ್ರ ಸ್ಥಾನವಾಗಿದೆ. ಕಲೆ, ಕ್ರೀಡೆ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಕೊಡವರ ಕೊಡುಗೆ ದೊಡ್ಡದಿದೆ. ಇದನ್ನು ಬಿಂಬಿಸುವ ಮತ್ತು ಉಳಿಸಿ ಬೆಳೆಸುವ ಕೆಲಸ ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಕೊಡವರ ಕಲೆ, ಸಂಸ್ಕೃತಿ ಪ್ರವಾಸಿಗರಿಗೆ ಪರಿಚಯಿಸುವಲ್ಲಿ ಕೊಡವ ಹೆರಿಟೇಜ್ ಸೆಂಟರ್ ಪ್ರಮುಖ ಕೇಂದ್ರವಾಗುತ್ತದೆ. ಈ ಕೇಂದ್ರಕ್ಕೆ 5 ಕೋಟಿ ರೂ. ಮೀಸಲಿಡಾಗಿದೆ. ಕೆಟಿಐಎಲ್ ಮೂಲಕ ಅನುಷ್ಠಾನಕ್ಕೆ ಹಣ ಬಿಡುಗಡೆಯೂ ಮಾಡಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋÀದ್ಯಮ ಅಭಿವೃದ್ಧಿಗೆ ಟೂರಿಸಂ ಪಾಲಿಸಿಯಲ್ಲಿ ಅವಕಾಶಗಳಿವೆ. ಶಾಸಕರ ಸಲಹೆ ಬಳಸಿಕೊಂಡು ಅವರು ಸೂಚಿಸಿದ ಮಾದರಿಯಲ್ಲಿ ಕೊಡವ ಹೆರಿಟೇಜ್ ಸೆಂಟರ್‌ನಲ್ಲಿ ಖಾಸಗಿ ಸಹಭಾಗಿತ್ವ ಬಳಸಿಕೊಳ್ಳಲಾಗುವುದು.