ಸೋಮವಾರಪೇಟೆ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕೂಟ ಕಾರ್ಯಕ್ರಮಕ್ಕೆ ಮಾಜಿ ಸಚಿವ ಅಪ್ಪಚ್ಚು ರಂಜನ್ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಚಾಲನೆ ನೀಡಿದರು. ಮೇದಪ್ಪ, ಅಭಿಮನ್ಯುಕುಮಾರ್ ಇತರರು ಇದ್ದರು. ಸೋಮವಾರಪೇಟೆ
ಕೊಡಗು

ಕೊಡವ ಸಂಸ್ಕೃತಿ ಪಕೃತಿ ಪೂಜೆಯಲ್ಲಿ ಮಿಳಿತ

ವಕೀಲ ಪಾಂಡಂಡ ಮೇದಪ್ಪ ಅಭಿಮತ

ಸೋಮವಾರಪೇಟೆ: ಕೊಡವರು ತಮ್ಮ ಕಲೆ ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿ ಪರಂಪರೆ, ಸಂಸ್ಕೃತಿ ರಕ್ಷಣೆಯೊಂದಿಗೆ ನೆಲ, ಜಲದ ಉಳಿವಿಗೆ ಮುಂದಾಗಬೇಕು ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.

ಇಲ್ಲಿನ ಕೊಡವ ಸಮಾಜದ ವತಿಯಿಂದ ಭಾನುವಾರ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಕೈಲ್ ಮುಹೂರ್ತ ಸಾಂಸ್ಕೃತಿಕ ಕೂಟ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕೊಡವ ಸಮುದಾಯವರು ತಮ್ಮ ಭೂಮಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಕಾಫಿ, ಭತ್ತ, ಏಲಕ್ಕಿ ಬೆಳೆಯಿಂದ ಆರ್ಥಿಕ ಸುಧಾರಣೆಯಾಗದಿದ್ದರೂ, ತಮ್ಮ ಜಾಗದಲ್ಲಿ ಹೋಂ ಸ್ಟೇಗಳ ಮೂಲಕ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡು, ಆರ್ಥಿಕವಾಗಿ ಸಬಲತೆ ಸಾಧಿಸಬೇಕು. ಇಲ್ಲಿನ ಗಾಳಿ, ಹವಾಮಾನ ಬೇರೆಲ್ಲೂ ಇಲ್ಲ ಎಂದರು.

ಮುಖ್ಯ ಅತಿಥಿಯಾಗಿದ್ದ ವಕೀಲ ಪಾಂಡಂಡ ಮೇದಪ್ಪ ಮಾತನಾಡಿ, ಕೊಡವ ಎಂಬುದು ಕೇವಲ ಜಾತಿ ಅಲ್ಲ. ಅದೊಂದು ವಿಶಿಷ್ಟವಾದ ಸಂಸ್ಕೃತಿ. ನಮ್ಮ ಸಂಸ್ಕೃತಿಯು ಪ್ರಕೃತಿ ಪೂಜೆಯಲ್ಲಿ ಮಿಳಿತಗೊಂಡಿದೆ. ಕೊಡವರ ಜನಸಂಖ್ಯೆ ಕಡಿಮೆಯಾದರೆ ಭವಿಷ್ಯಕ್ಕೆ ಮಾರಕವಾಗಲಿದೆ. ಈ ಬಗ್ಗೆ ಕೊಡವರು ಚಿಂತನೆ ನಡೆಸಬೇಕಿದೆ ಎಂದು ಸಲಹೆ ನೀಡಿದರು.

ಕೊಡವರ ಹಬ್ಬ ಹರಿದಿನಗಳ ಆಚರಣೆಗಳು ಅವರವರ ಮನೆಗೆ ಸೀಮಿತ ಆಗಬಾರದು. ಎಲ್ಲರೂ ಒಂದೆಡೆ ಬೆರೆತು ಆಚರಿಸಬೇಕು. ಸಾಮೂಹಿಕ ಆಚರಣೆಗಳಿಂದ ಸಾಮರಸ್ಯ ವೃದ್ಧಿಸುತ್ತದೆ. ರಾಜ್ಯ ಸರ್ಕಾರವು ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಶಿಫಾರಸ್ಸು ಮಾಡಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಮಾತನಾಡಿ, ಸೋಮವಾರಪೇಟೆ ಕೊಡವ ಸಮಾಜದಲ್ಲಿ ಪುಸ್ತಕ ಪತ್ತಾಯವನ್ನು ತೆರೆಯಲಾಗಿದೆ. ಕೊಡವ ಸಮಾಜದ ಸದಸ್ಯರು, ಕೊಡವ ಭಾಷೆಯ ಪುಸ್ತಕಗಳನ್ನು ನೀಡಬೇಕು. ಇದರಿಂದ ಮುಂದಿನ ಪೀಳಿಗೆಯ ಮಕ್ಕಳಿಗೆ ಇತಿಹಾಸ, ಚರಿತ್ರೆ, ಜಾನಪದ ಹಾಗೂ ಕೊಡವಾಮೆಯ ಬಗ್ಗೆ ಅರಿವು ಮೂಡಿಸಲು ಸಹಕಾರಿ ಆಗಲಿದೆ ಎಂದರು.

ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಬೊಳಂದಂಡ ಕುಟ್ಟಪ್ಪ, ಕಾರ್ಯದರ್ಶಿ ಕೊಚ್ಚೇರ ಅನಿಲ್, ಪ್ರಮುಖರಾದ ಪಾಂಡಂಡ ಮುತ್ತಮ್ಮ, ಮಹಿಳಾ ಘಟಕದ ಅಧ್ಯಕ್ಷೆ ಬಾಚಿನಾಡಂಡ ಇಂದಿರಾ ಚಂಗಪ್ಪ ಇದ್ದರು.

ದಕ್ಷಿಣ ಕೊಡಗಿನ ಬೆಕ್ಕೆಸೊಡ್ಲೂರು ಮಂದತ್ತವ್ವ ಸಾಂಸ್ಕೃತಿಕ ತಂಡದಿಂದ ಗೆಜ್ಜೆತಂಡ್ ನೃತ್ಯರೂಪಕ ಸೇರಿದಂತೆ ವಿವಿಧ ನೃತ್ಯಗಳು ಮನ ಸೆಳೆದವು. ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಸಮಾಜದ ಸದಸ್ಯರಾದ ತೇಲಪಂಡ ಕವನ್ ಕಾರ್ಯಪ್ಪ, ಹಂಚೆಟ್ಟಿರ ಸಾರಿಕಾ, ಬಾಚಿನಾಡಂಡ ರೋಶ್ನಿ ಪ್ರದೀಪ್, ಮಲ್ಲಾಜೀರ ನೇಹಾ ಪೂಣಚ್ಚ ಇತರರು ಪಾಲ್ಗೊಂಡಿದ್ದರು.