ದಕ್ಷಿಣ ವಲಯದ ಅಂತರ್ ಗುಂಪು ಫುಟ್ಬಾಲ್ ಪಂದ್ಯಾವಳಿಯಲ್ಲಿ (ಗ್ರೂಪ್-ಹೆಚ್) ಚಾಂಪಿಯನ್‌ಶಿಪ್ ಪಟ್ಟ ಗಳಿಸಿದ ಕೂಡಿಗೆಯ ಕೊಡಗು ಸೈನಿಕ ಶಾಲೆ ತಂಡ. ಅಮರ್ ಜೀತ್ ಸಿಂಗ್, ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ವಿಬಿನ್ ಕುಮಾರ್, ದಿವ್ಯಾ ಸಿಂಗ್ ಮತ್ತಿತರರು ಇದ್ದರು.
ಕೂಡಿಗೆಯ ಕೊಡಗು ಸೈನಿಕ ಶಾಲೆ 2026-27ನೇ ಸಾಲಿನ ದಕ್ಷಿಣ ವಲಯದ ಅಂತರ್ ಗುಂಪು ಫುಟ್ಬಾಲ್ ಪಂದ್ಯಾವಳಿಯಲ್ಲಿ (ಗ್ರೂಪ್-ಹೆಚ್) ಸತತ ಎರಡನೇ ಬಾರಿಗೆ ಚಾಂಪಿಯನ್‌ಶಿಪ್ ಪಟ್ಟ ಉಳಿಸಿಕೊಂಡಿದೆ. 15 ವರ್ಷದೊಳಗಿನ ಬಾಲಕರು, 17 ವರ್ಷದೊಳಗಿನ ಬಾಲಕಿಯರು ಮತ್ತು 17 ವರ್ಷದೊಳಗಿನ ಬಾಲಕರು ಹೀಗೆ ಎಲ್ಲಾ ವಿಭಾಗಗಳಲ್ಲಿಯೂ ಕೊಡಗು ಸೈನಿಕ ಶಾಲೆ ಪ್ರಾಬಲ್ಯ ಪ್ರದರ್ಶಿಸಿತು.
ಸೈನಿಕ ಶಾಲೆ ಕೊಡಗು ಮತ್ತು ಸೈನಿಕ ಶಾಲೆ ಕಝಕೂಟಂ ತಂಡಗಳ ನಡುವೆ ಶನಿವಾರ ನಡೆದ ಅಂತಿಮ ಪಂದ್ಯ ಅತ್ಯಂತ ರೋಚಕವಾಗಿತ್ತು. ಅಂತಿಮವಾಗಿ ಕೊಡಗು ತಂಡವು 3-2 ಗೋಲುಗಳ ಅಂತರದಿAದ ಜಯ ಸಾಧಿಸಿತು. ಮುಖ್ಯ ಅತಿಥಿಗಳು ವಿಜೇತ ಕೆಡೆಟ್‌ಗಳಿಗೆ ಪ್ರಮಾಣಪತ್ರ, ಪದಕ ಹಾಗೂ ಪಾರಿತೋಷಕಗಳನ್ನು ವಿತರಿಸಿದರು. ವೈಯಕ್ತಿಕ ಸಾಧನೆಗಳ ವಿಭಾಗದಲ್ಲೂ ಕೊಡಗು ಸೈನಿಕ ಶಾಲೆಯ ವಿದ್ಯಾರ್ಥಿಗಳು ಸಿಂಹಪಾಲು ಪಡೆದುಕೊಂಡರು. ಕೆ.ಎಸ್.ಎಫ್.ಎ. ಸಂಸ್ಥೆಯ ರೆಫ್ರೀ ಗಿರೀಶ್ ಮತ್ತು ಅವರ ತಂಡವನ್ನು ಶಾಲೆಯ ಸ್ಮರಣಿಕೆ ನೀಡಿ ಗೌರವಿಸಲಾಯಿತು. ತಮಿಳುನಾಡಿನ ಮಧುರೈ ಮೂಲದ ನೂತನ ಸೈನಿಕ ಶಾಲೆ ವಲ್ಲಭ ತಂಡದ ಕ್ರೀಡಾ ಮನೋಭಾವ ಗುರುತಿಸಿ ಕ್ಯೂಟ್ ವಾರಿಯರ್ಸ್ ಪ್ರಶಸ್ತಿ ನೀಡಲಾಯಿತು.
ಪಂದ್ಯಾವಳಿಯಲ್ಲಿ 17 ವರ್ಷದೊಳಗಿನ ಬಾಲಕಿರ ವಿಭಾಗದಲ್ಲಿ ಸೈನಿಕ ಶಾಲೆ ಕೊಡಗು ಪ್ರಥಮ ಸ್ಥಾನ ಪಡೆದುಕೊಂಡಿತು. ಸೈನಿಕ ಶಾಲೆ ಕಲಿಕಿರಿ ದ್ವಿತೀಯ ಸ್ಥಾನ ಗಳಿಸಿತು. 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸೈನಿಕ ಶಾಲೆ ಕೊಡಗು ಪ್ರಥಮ ಸ್ಥಾನವನ್ನಲಂಕರಿಸಿದರೆ, ಸೈನಿಕ ಶಾಲೆ ಕಝಕೊಟಂ ದ್ವಿತೀಯ ಸ್ಥಾನ ಪಡೆಯಿತು. 15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸೈನಿಕ ಶಾಲೆ ಕೊಡಗು ಪ್ರಥಮ ಸ್ಥಾನ ಪಡೆದರೆ, ಸೈನಿಕ ಶಾಲೆ ಕಝಕೊಟಂ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಕ್ರೀಡೆಯಲ್ಲಿ ಶಿಸ್ತು ಮತ್ತು ಸ್ಪರ್ಧಾತ್ಮಕ ಮನೋಭಾವ ಅತ್ಯಗತ್ಯ. ಇದು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಸಮಾರೋಪದ ಅಂಗವಾಗಿ ಆಕರ್ಷಕ ಪಥಸಂಚಲನ ನಡೆಯಿತು.
ಉಪಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕ ವಿಬಿನ್ ಕುಮಾರ್, ದಿವ್ಯಾ ಸಿಂಗ್, ಅಮರಾವತಿನಗರ, ಕಲಿಕಿರಿ, ಕಝಕೂಟಂ, ವಲ್ಲಭ ಮತ್ತು ವಿಕಾಸ ಸೈನಿಕ ಶಾಲೆಗಳ ಸಿಬ್ಬಂದಿ, ತರಬೇತುದಾರರು, ರೆಫ್ರಿಗಳು, ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ, ಎನ್‌ಸಿಸಿ, ಸಿಬ್ಬಂದಿವರ್ಗ, ದೈಹಿಕ ಶಿಕ್ಷಕರು ಇದ್ದರು.