ಸಮ್ಮೇಳನದಲ್ಲಿ ಮಾತನಾಡಿದ ಸರ್ವಾಧ್ಯಕ್ಷ ಅಬ್ದುಲ್ ರಶೀದ್. ಕೇಶವ ಕಾಮತ್, ಟಿ.ಪಿ. ರಮೇಶ್, ವಿ.ಪಿ. ಶಶಿಧರ್, ರೇವತಿ ಪೂವಯ್ಯ, ಎ. ಲೋಕೇಶ್ ಕುಮಾರ್ ಮತ್ತಿತರರು ಇದ್ದರು
ವಿಲಾಸಿ ಪ್ರವಾಸಿಗರ ಅಸಹ್ಯ ದಾಳಿಯನ್ನು ಎದುರಿಸಲಾಗದೆ ಕೊಡಗು ಈಗ ತತ್ತರಿಸುತ್ತಿದೆ ಎಂದು ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಅಬ್ದುಲ್ ರಶೀದ್ ಆತಂಕ ವ್ಯಕ್ತಪಡಿಸಿದ್ದಾರೆ. ಸಮ್ಮೇಳದ ಸರ್ವಾಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು.
ಕೊಡಗನ್ನು ಕರ್ನಾಟಕದ ಕಾಶ್ಮೀರ ಎಂದು ಹೇಳುತ್ತಾರೆ. ಆದರೆ ಈ ಹೋಲಿಕೆ ಸರಿಯಲ್ಲ. ಕಾಶ್ಮೀರದ ಕಷ್ಟ ಕಾರ್ಪಣ್ಯಗಳ ಅರಿವು ಇರುವವರು ಮತ್ತು ಕೊಡಗಿನ ಚೆಲುವನ್ನು ಚೆನ್ನಾಗಿ ಬಲ್ಲವರು ಯಾರೂ ಸಹ ಈ ಹೋಲಿಕೆ ಸರಿಯಲ್ಲ ಎಂದು ಹೇಳುತ್ತಾರೆ. ಕೊಡಗು ಇದೀಗ ವಿಲಾಸಿ ಪ್ರವಾಸಿಗರ ಅಸಹ್ಯ ದಾಳಿ ಎದುರಿಸಲಾಗದೆ ತತ್ತರಿಸುತ್ತಿದೆ. ಪ್ರವಾಸಿಗರಿಗೆ ಈ ನೆಲದ ಮಣ್ಣ, ಈ ನೆಲದ ಗಾಳಿ, ಇಲ್ಲಿರುವ ಗುಡಿಗಳು ಭಗವತಿ, ಈಶ್ವರ, ಅಯ್ಯಪ್ಪ ಸೇರಿದಂತೆ ದೇವರ ಕಾಡುಗಳ ಇದರ ಯಾವುದೇ ಅರಿವಿಲ್ಲ. ಕೊಡಗಿನ ಹಸಿರು ಮತ್ತು ಘನತೆಗಳಿಗೆ ಕ್ಯಾರೇ ಅನ್ನದೆ ದಾಂಧಲೆ ಎಬ್ಬಿಸುತ್ತಾರೆ. ಪ್ರವಾಸೋದ್ಯಮ ಮತ್ತು ಆದಾಯದ ನೆಪದಲ್ಲಿ ಕೊಡಗಿನ ನೆಮ್ಮದಿ ಹಾಳಾಗುತ್ತಿದೆ. ರೆಸಾರ್ಟ್ಗಳು, ರಿಯಲ್ ಎಸ್ಟೇಟ್ ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗಿದೆ. ಆದ್ದರಿಂದ ಸರ್ಕಾರ ಈ ವಿಲಾಸಿ ಪ್ರವಾಸಿಗಳ ನಿಯಂತ್ರಣಕ್ಕೆ ನೀತಿ ರೂಪಿಸಬೇಕೆಂದು ಒತ್ತಾಯಿಸಿದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಶ್ರಮಿಸಿದ ಲೇಖಕರ ದೊಡ್ಡ ಪಟ್ಟಿಯೇ ಇದೆ. ಪಂಜೆ ಮಂಗೇಶರಾಯರು ಕೊಡಗಿನಲ್ಲಿ ಶಾಲಾ ಇನ್ಸ್ಪೆಕ್ಟರ್ ಆಗಿದ್ದರು. ಭಾರತೀಸುತರು ಮಡಿಕೇರಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದು. ಜಿ.ಟಿ. ನಾರಾಯಣರಾಯರು ಗಣಿತ ಶಿಕ್ಷಕರಾಗಿದ್ದರು. ಬಿ.ಡಿ. ಗಣಪತಿ, ಐ.ಮಾ. ಮುತ್ತಣ್ಣ ಕನ್ನಡದಲ್ಲಿ ಬಹಳಷ್ಟು ಬರೆದಿದ್ದಾರೆ. ಶಿವರಾಮ ಕಾರಂತರು, ಗುಂಡುಗುಟ್ಟಿಯ ಮಂಜುನಾಥಯ್ಯ ಅವರ ತೋಟದ ಮನೆಗೆ ಬಂದು ಕಾದಂಬರಿ ಬರೆಯುತ್ತಿದ್ದರು. ಹಾಗೆಯೇ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಮತ್ತು ಬೇಂದ್ರೆಯವರು ಕೊಡಗಿಗೆ ಬಂದು ಹಲವು ಕಥೆ ಕವನ ಬರೆದಿದ್ದಾರೆ.
ಕೊಡಗಿನ ಸಾಹಿತಗಳ ಹಾಗೂ ಘಟಾನುಘಟಿಗಳ ಪುಸ್ತಕಗಳ ಮರುಮುದ್ರಣ, ಅವರ ಬದುಕು ಕುರಿತಾದ ಮ್ಯೂಸಿಯಂ, ಕೊಡಗಿನ ಆದಿವಾಸಿಗಳ ಸಂಗೀತದ ಆಡಿಯೋ ಲ್ರೈಬ್ರರಿ, ಜಾಲತಾಣಗಳು, ಸಾಮಾಜಿಕ ಮಾಧ್ಯಮಗಳ ಡಿಜಿಟಲ್ ಚಾನೆಲ್ ಗಳು ಇದ್ದರೆ ಚೆನ್ನಾಗಿರುತ್ತದೆ. ಪುಸ್ತಕಗಳನ್ನು ಭದ್ರವಾಗಿ ಕಪಾಟಿನಲ್ಲಿ ಬಚ್ಚಿಡಲು ನೋಡುವುದಕ್ಕಿಂತ ಪುಸ್ತಕಗಳು ಕಳುವಾದರೂ ಸರಿಯೇ ಮಕ್ಕಳ ತಲೆಯೊಳಗೆ ಒಳ್ಳೆಯ ಓದಿನ ಭೂತ ಹೊಕ್ಕುಬಿಡಲಿ ಎಂಬ ಆಲೋಚನೆ ಇರಬೇಕು. ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ಕೊಡುವುದರ ಜತೆಗೆ ಒಳ್ಳೆಯ ಸಾಹಿತ್ಯ ಕೃಷಿಯನ್ನು ನೀಡುವಂತಾಗಬೇಕು.
ನಮ್ಮಲ್ಲಿ ಹಲವು ಭಾಷೆಯವರು ಇದ್ದೇವೆ. ಆದರೆ ಕನ್ನಡಕ್ಕೆ ಎಂದಿಗೂ ಅಗ್ರ ಸ್ಥಾನ ನೀಡಿದ್ದೇವೆ. ಕನ್ನಡದ ಪ್ರಶ್ನೆ ಬಂದಾಗ ಎಂದಿಗೂ ಹೆದರುವುದಿಲ್ಲ. ಯಾವ ಭಾಷೆಯವರಾದರೂ ನಮ್ಮ ಎದೆಯೊಳಗೆ ಸದಾ ಕನ್ನಡ ಇರುತ್ತದೆ. ನಮ್ಮಲ್ಲಿ ಕನ್ನಡಾಭಿಮಾನ ಎಂದಿಗೂ ಬತ್ತುವುದಿಲ್ಲ. ಸುಂಟಿಕೊಪ್ಪದಲ್ಲಿ ಎಲ್ಲಾ ಭಾಷೆ ಮಾತನಾಡುವವರಿದ್ದಾರೆ. ಆದರೆ ಕನ್ನಡಕ್ಕೆ ಸದಾ ಎಂದಿಗೂ ಮುಂದೆ ನಿಲ್ಲುವುದು ಇಲ್ಲಿಯವರ ಗುಣ.
ಕೊಡಗು ಜಿಲ್ಲೆಯಲ್ಲಿ ಸಾಂಸ್ಕೃತಿಕ ನೀತಿ ಮತ್ತು ಶೈಕ್ಷಣಿಕ ಭಾಷಾ ಸೂತ್ರ ಬೇಕಿದೆ. ಕೊಡವ, ಅರೆಭಾಷೆ, ಜೇನುಕುರುಬ, ಬೆಟ್ಟಕುರುಬ, ಕಾಡುಕುರುಬ, ಯರವ, ಮೇದ, ಅಡಿಯ, ಪಣಿಯ, ದೇವಸೋಲಿಗ, ಜೇನು ಮಲೆಕುಡಿಯ, ಪೂಮಲೆ ಕುಡಿಯ ಇತ್ಯಾದಿ ಭಾಷೆಗಳನ್ನು ಕೊಡಗಿನಲ್ಲಿ ಅಲ್ಲದೆ ಬೇರೆ ಎಲ್ಲೂ ಬಳಸಲು ಮತ್ತು ಉಳಿಸಲು ಸಾಧ್ಯವಿಲ್ಲ. ಕಲಿಕೆಯ ಭಾಷೆಯಾಗಿ ಈ ಭಾಷೆಯನ್ನು ಬಳಸುವುದು ಅಸಾಧ್ಯವಾದ ವಿಷಯ. ಆದರೆ ಈ ಭಾಷೆಗಳನ್ನು ಬಳಸುವ ಸಮುದಾಯದ ಮಕ್ಕಳಲ್ಲಿ ಈ ಭಾಷೆಗಳ ಕುರಿತ ಕುತೂಹಲ ಆಸಕ್ತಿ ಮತ್ತು ಹೆಮ್ಮೆಯನ್ನು ಮೂಡಿಸುವ ಕೆಲಸ ಆಗಬೇಕು.
ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನತೆ ಮತ್ತು ಸಹಭಾಳ್ವೆಯಿಂದ ಬದುಕಬೇಕು. ದೂರದಿಂದ ಮತ್ತು ಮೇಲೆ ಆಕಾಶದಿಂದ ನೋಡಿದರೆ ನಂದನವನದAತೆ ಕಾಣುತ್ತಿರುವಂತೆ ಕೊಡಗಿನ ಕಾಡುಗಳ ಒಳಹೊಕ್ಕರೆ ಏನು ಕಾಣುತ್ತದೆ. ಪಕ್ಕದಲ್ಲಿರುವ ಹೆರೂರು ಹಾಡಿ, ಚಿಕ್ಲಿಹೊಳೆ ಕಾಡಿನ ಹಾಡಿಗಳಲ್ಲಿ ಬದುಕುತ್ತಿರುವ ಆದಿವಾಸಿಗಳ ಬದುಕು ಹೇಗಿದೆ. ಯಾಕೆ ಹಾಡಿಗಳಿಂದ ಒಬ್ಬ ಬರಹಗಾರ, ಒಬ್ಬ ಹಾಡುಗಾರ, ಒಬ್ಬ ಅಧಿಕಾರಿ, ಒಬ್ಬ ವಕೀಲ ಮೂಡಿ ಬರಲಿಲ್ಲ. ಯಾಕೆ ಮಕ್ಕಳು ಅಕ್ಷರದ ಇಂದ್ರಜಾಲದಿAದ ವಂಚಿತರಾದರು ಎಂಬ ಬಗ್ಗೆ ಪ್ರತಿಯೊಬ್ಬರೂ ಚಿಂತಿಸಬೇಕಿದೆ.
ಕೊಡಗಿನ ವನರಾಶಿಯೊಳಗೆ ಮುಸುಕು ಹೊದ್ದುಕೊಂಡು ನಿಟ್ಟುಸಿರು ಬಿಡುತ್ತಿರುವ ಗಿರಿಜನ ಹಾಡಿಗಳ ಒಳಗೆ ಯಾಕೆ ಸದ್ದಿಲ್ಲದೆ ಮತಾಂತರ ಕಾರ್ಯ ನಡೆಯುತ್ತಿದೆ. ಮದ್ಯ ವ್ಯಸನದಿಂದ ಬಿಡುಗಡೆ ಹೊಂದಲು ಮತಾಂತರಕ್ಕೆ ಮೊರೆ ಹೋಗುತ್ತಿರುವ ಕೊಡಗಿನ ಆದಿವಾಸಿ ಮೂಲ ನಿವಾಸಿಗರು ತಮ್ಮದೇ ಆದ ಆಚರಣೆ, ದೇವರು, ದೈವಗಳನ್ನು ಯಾಕೆ ಅಸಡ್ಡೆಯಿಂದ ನೋಡಲು ತೊಡಗಿದ್ದಾರೆ. ಜೀತ, ಹಸಿವು, ಅವಮಾನ, ಮದ್ಯಪಾನ ಮತ್ತು ಮತಾಂತರ ಹೀಗೆ ಒಂದಕ್ಕೆ ಒಂದು ಇವರ ಕೊರಳಿಗೆ ಸುತ್ತುಕೊಳ್ಳುತ್ತಿರುವ ಈ ಭಯಾನಕ ಸರಣಿಯ ಕೊಂಡಿಗಳನ್ನು ಕತ್ತರಿಸುವುದು ಹೇಗೆ ಎಂಬ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ ಎಂದು ಹೇಳಿದರು.