ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಸೋಮವಾರ ನಡೆದ ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸಮಾಲೋಚನೆ ನಡೆಸಿದರು. ತೆನ್ನಿರಾ ಮೈನಾ, ಸಜಿಲ್ ಕೃಷ್ಣ, ಗುಲಾಬಿ ಜನಾರ್ಧನ ಇದ್ದರು. 
ಕೊಡಗು

ಮತದಾರರ ಮನೆ ಮನೆಗೆ ಬಿಎಲ್‌ಒಗಳು ಭೇಟಿ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಭೆ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಭೆಯಲ್ಲಿ ಜಿಲ್ಲಾಧಿಕಾರಿ

ಮಡಿಕೇರಿ: ಮ್ಯಾಪಿಂಗ್‌ನಲ್ಲಿ ವ್ಯತ್ಯಾಸವಾಗಿದ್ದ ಸುಮಾರು ೧೪,೪೩೯ ಮತದಾರರ ಮನೆ ಮನೆಗೆ ಬಿಎಲ್‌ಒಗಳು ಭೇಟಿ ನೀಡಿ ದಾಖಲೆಗಳನ್ನು ಪಡೆದು ಇಸಿಐ ನೆಟ್‌ನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಜಿಲ್ಲೆಯಲ್ಲಿ ಈಗಾಗಲೇ ಮ್ಯಾಪಿಂಗ್ ಆಗದಿರುವ, ಮ್ಯಾಪಿಂಗ್‌ನಲ್ಲಿ ವ್ಯತ್ಯಾಸವಾಗಿದ್ದ ಸುಮಾರು ೫೮,೮೮೩ ಮತದಾರರಲ್ಲಿ ೪೪,೪೪೪ ಮತದಾರರ ಮಾಹಿತಿ ಪಡೆದು ವಿಚಾರಣೆ ಪೂರ್ಣಗೊಳಿಸಲಾಗಿದೆ. ಉಳಿದಂತೆ ೧೪,೪೩೯ ಮತದಾರರ ಮನೆ ಮನೆಗೆ ಬಿಎಲ್‌ಒಗಳು ಭೇಟಿ ನೀಡಿ ದಾಖಲೆಗಳನ್ನು ಪಡೆದು ಇಸಿಐ ನೆಟ್‌ನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ ಎಂದು ತಿಳಿಸಿದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಡೆಯುತ್ತಿದೆ. ಈಗಾಗಲೇ ಮ್ಯಾಪಿಂಗ್‌ನಲ್ಲಿ ವ್ಯತ್ಯಾಸ ಆಗಿರುವ ಸಂಬಂಧ ಪರಿಶೀಲನಾ ಕಾರ್ಯವು ನಡೆಯುತ್ತಿದೆ. ಬಾಕಿ ಇರುವ ಮತದಾರರ ಮನೆ ಮನೆಗೆ ಬಿಎಲ್‌ಒಗಳು ಭೇಟಿ ನೀಡಿ ಮಾಹಿತಿ ಪಡೆಯಲಿದ್ದು, ಈ ಅವಕಾಶವನ್ನು ಪಡೆದುಕೊಳ್ಳುವಂತಾಗಬೇಕು. ಆ ನಿಟ್ಟಿನಲ್ಲಿ ವಿವಿಧ ರಾಜಕೀಯ ಪಕ್ಷಗಳು ಸಹಕರಿಸುವಂತೆ ಜಿಲ್ಲಾಧಿಕಾರಿ ಕೋರಿದರು.

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಸಂಬಂಧ ವಿಶೇಷ ಅಭಿಯಾನ ಆ.೨೯ ಮತ್ತು ೩೦ ರಂದು, ಹಾಗೆಯೇ ಸೆ.೧೯ ಮತ್ತು ೨೦ ರಂದು ನಡೆದಿದ್ದು, ಆ ಸಂದರ್ಭದಲ್ಲಿಯೂ ಸಹ ನಮೂನೆ-೬, ೦೭ ಮತ್ತು ೮ ರಲ್ಲಿ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಗೆ ಪರಿಷ್ಕರಣಾ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಸಂಬಂಧ ಆ.೨೯ ಮತ್ತು ೩೦ ರಂದು ನಡೆದ ವಿಶೇಷ ಅಭಿಯಾನ ಸಂದರ್ಭದಲ್ಲಿ ನಮೂನೆ ೬ ರಡಿ ೩೯೮ ಅರ್ಜಿಗಳು ಸಲ್ಲಿಕೆಯಾಗಿದ್ದವು, ನಮೂನೆ-೭ ಮತ್ತು ೮ ರಡಿ ೨೪೭ ಒಟ್ಟು ೬೫೨ ಅರ್ಜಿಗಳು ಸಲ್ಲಿಕೆಯಾಗಿದ್ದವು ಎಂದು ಮಾಹಿತಿ ನೀಡಿದರು.

ಸೆ.೧೯ ಮತ್ತು ೨೦ ರಂದು ನಡೆದ ವಿಶೇಷ ಅಭಿಯಾನ ಸಂದರ್ಭದಲ್ಲಿ ನಮೂನೆ-೬ ರಡಿ ೫೦೭ ಅರ್ಜಿಗಳು ಸಲ್ಲಿಕೆಯಾಗಿದ್ದವು. ನಮೂನೆ ೭ ರಡಿ ೫ ಮತ್ತು ನಮೂನೆ ೮ ರಡಿ ೪೬೨ ಒಟ್ಟು ೯೫೪ ಅರ್ಜಿಗಳು ಸಲ್ಲಿಕೆಯಾಗಿದ್ದವು. ೨೦೨೬ರ ಅ.೧ ಅರ್ಹತಾ ದಿನಾಂಕವಾಗಿದ್ದು, ಕರಡು ಮತದಾರರ ಪಟ್ಟಿಯ ಪ್ರಕಟಣೆ ದಿನದಿಂದ(೨೦೨೬ ರ ಆ.೨೪ ರಿಂದ ಸೆ.೨೩ ರವರೆಗೆ) ನಮೂನೆಯನ್ನು ಸ್ವೀಕರಿಸಲಾಗಿದ್ದು, ನಮೂನೆ ೬ ರಡಿ ೨೩೮೮, ನಮೂನೆ ೭ ರಡಿ ೨೬, ನಮೂನೆ ೮ ರಡಿ ೩೨೨೪ ಅರ್ಜಿಗಳು ಸ್ವೀಕರಿಸಲಾಗಿದ್ದು, ಒಟ್ಟು ೫,೬೩೮ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದರು.

೨೦೨೬ ರ ಆ.೨೪ ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ೫೬೭ ಮತಗಟ್ಟೆಗಳಿದ್ದು, ೪,೦೫,೮೦೩ ಮತದಾರರು ಇದ್ದು, ಇವರಲ್ಲಿ ೧,೯೮,೨೯೪ ಪುರುಷ, ೨,೦೭,೫೦೫ ಮಹಿಳಾ ಮತದಾರರು ಮತ್ತು ೪ ಇತರೆ ಮತದಾರರು ಇದ್ದಾರೆ. ಒಟ್ಟಾರೆ ಜಿಲ್ಲೆಯ ಸಮಗ್ರ ಅಂತಿಮ ಮತದಾರರ ಪಟ್ಟಿಯು ಇದೇ ಅ.೨೭ ರಂದು ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಭಾರತೀಯ ಕಾಂಗ್ರೆಸ್ ಪಕ್ಷದ ಪ್ರತಿನಿಧಿ ತೆನ್ನಿರಾ ಮೈನಾ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ಸರಿ ಇದ್ದರೂ ಸಹ, ಹಿರಿಯ ನಾಗರಿಕರಿಗೆ ನೋಟೀಸ್ ನೀಡಿ ಒಂದು ರೀತಿ ಮುಜುಗರ ಉಂಟು ಮಾಡಿರುವುದು ಸಮರ್ಥನೀಯವಲ್ಲ ಎಂದು ಪ್ರತಿಪಾದಿಸಿದರು.

ಭಾರತೀಯ ಜನತಾ ಪಕ್ಷದ ಪ್ರತಿನಿಧಿ ಸಜಿಲ್ ಕೃಷ್ಣ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ಸುಗಮವಾಗಿ ನಡೆಯುವಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಮತದಾರರ ಪಟ್ಟಿಯಲ್ಲಿ ಅರ್ಹರ ಹೆಸರು ಬಿಟ್ಟುಹೋಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದರು.

ಜಾತ್ಯಾತೀತ ಜನತಾ ದಳದ ಪ್ರತಿನಿಧಿ ಗುಲಾಬಿ ಜನಾರ್ಧನ, ಭಾರತೀಯ ಕಮ್ಯುನಿಸ್ಟ್ ಪಕ್ಷದ ರಮೇಶ್, ಚುನಾವಣಾ ತಹಶೀಲ್ದಾರ್ ಗುರುರಾಜ್, ಶಿರಸ್ತೆದಾರ್ ಮಹೇಶ್, ಅನಿಲ್ ಕುಮಾರ್ ಇತರರು ಇದ್ದರು.