ತಿತಿಮತಿಯಲ್ಲಿ ಬುಧವಾರ ಆಯೋಜಿಸಿದ್ದ ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನ 25ನೇ ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮ
- ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಮಾಹಿತಿ
- ತಿತಿಮತಿಯಲ್ಲಿ 25ನೇ ಶಾಖೆ ಉದ್ಘಾಟನೆ
ಗೋಣಿಕೊಪ್ಪಲು: ರೈತರಿಗೆ, ಗ್ರಾಹಕರಿಗೆ ಸಕಾಲದಲ್ಲಿ ಸಾಲ ಮಂಜೂರು ಮಾಡುವ ಮೂಲಕ, ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಕಡಿಮೆ ಇಲ್ಲದಂತೆ ಡಿಸಿಸಿ ಬ್ಯಾಂಕ್ ವಾರ್ಷಿಕವಾಗಿ ಕೋಟ್ಯಂತರ ರೂ. ವ್ಯವಹಾರ ನಡೆಸುತ್ತಿದೆ ಎಂದು ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಶ್ಲಾಘಿಸಿದರು.
ತಿತಿಮತಿಯಲ್ಲಿ ಬುಧವಾರ ಆಯೋಜಿಸಿದ್ದ ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನ 25ನೇ ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಜಿಲ್ಲೆಯಲ್ಲಿರುವ ಮಡಿಕೇರಿಯ ಕೇಂದ್ರ ಬ್ಯಾಂಕ್ ಸೇರಿದಂತೆ 24 ಶಾಖೆಗಳು ಲಾಭಾಂಶದಲ್ಲಿ ಮುಂದುವರೆಯುತ್ತಿವೆ ಎಂದರು.
ಸ್ಥಳೀಯ ಬೆಳೆಗಾರರು, ರೈತರು ಮನವಿ ಮಾಡಿದ ಹಿನ್ನೆಲೆಯಲ್ಲಿ ತಿತಿಮತಿಯಲ್ಲಿ ನೂತನ ಶಾಖೆಯನ್ನು ಆರಂಭಿಸಲಾಗಿದೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ರಾಜ್ಯಕ್ಕೆ ಮಾದರಿಯಾಗಿದ್ದು, ರಾಜ್ಯದಲ್ಲಿ 3ನೇ ಸ್ಥಾನ ಹೊಂದಿದೆ. ಶೂನ್ಯ ಬಡ್ಡಿದರದಲ್ಲಿ ಸ್ವಸಹಾಯ ಗುಂಪುಗಳಿಗೆ, 7.5 ಬಡ್ಡಿ ದರದಲ್ಲಿ ಪುರುಷ ಸ್ವಸಹಾಯ ಸಂಘಗಳಿಗೆ ಸಾಲವನ್ನು ಮಂಜೂರು ಮಾಡಲಾಗುವುದು. ಇದರ ಪ್ರಯೋಜನವನ್ನು ಪಡೆಯುವ ಮೂಲಕ ಸ್ವಾವಲಂಬಿಗಳಾಗಬೇಕು.ತಿತಿಮತಿ ಶಾಖೆಯಲ್ಲಿ ನೂತನ ಎಟಿಎಂ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 19ಎಟಿಎಂ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಿಗುವ ರೀತಿಯಲ್ಲಿಯೇ ತಮ್ಮ ಠೇವಣಿ ಹಣಗಳಿಗೆ ವಿಮಾ ಸೌಲಭ್ಯದ ಮೂಲಕ ಭದ್ರತೆ ನೀಡಲಾಗುತ್ತದೆ. ಮುಂದಿನ ವರ್ಷಗಳಲ್ಲಿ ಒಟ್ಟಾರೆ 31 ಶಾಖೆಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಡಿಸಿಸಿ ಬ್ಯಾಂಕ್ ಸದಸ್ಯರಿಗೆ ವಾರ್ಷಿಕವಾಗಿ ಶೇ.13 ಡಿವಿಡೆಂಟ್ ನೀಡುತ್ತಿದೆ. ಉಳಿದ ಜಿಲ್ಲೆಗಳಲ್ಲಿ ಶೇ.2 ಮಾತ್ರ ಡಿವಿಡೆಂಟ್ ನೀಡುತ್ತಿದೆ ಎಂದರು.
ಡಿಸೆಂಬರ್ 1 ರಿಂದ ಅನ್ವಯವಾಗುವಂತೆ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವ ಗ್ರಾಹಕರಿಗೆ ವಿಶೇಷವಾಗಿ ಹೆಚ್ಚಿನ ಬಡ್ಡಿದರ ನೀಡಲು ಆಡಳಿತ ಮಂಡಳಿಯು ನಿರ್ಧಾರ ಕೈಗೊಂಡಿದೆ. ಬೆಳೆಗಾರರು ಇದರ ಪ್ರಯೋಜನ ಪಡೆಬಹುದಾಗಿದೆ. ಮುಂದಿನ ವರ್ಷವು ಕೂಡ ಹೊಸ ಶಾಖೆಗಳನ್ನು ಅರಂಭಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾಕುಶಾಲಪ್ಪ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಸಹಕಾರ ಸಂಘಗಳು ಗ್ರಾಹಕರಿಗೆ ಆತ್ಮೀಯ ಸೇವೆ ನೀಡುತ್ತ ಜನರ ಮನಸ್ಸನ್ನು ಗೆಲುವಲ್ಲಿ ಯಶಸ್ವಿಯಾಗಿದೆ. ಬ್ಯಾಂಕಿನ ಸಿಬ್ಬಂದಿ ಗ್ರಾಹಕರೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳಬೇಕು. ಯಾವುದೇ ಅಡೆತಡೆ ಇಲ್ಲದೆ ರೈತರಿಗೆ ಸಾಲ ಮಂಜೂರಾತಿಗಳು ಸಕಾಲದಲ್ಲಿ ಸಿಗುವಂತಾಗಬೇಕು, ಇದರಿಂದ ಗ್ರಾಹಕರು ಬ್ಯಾಂಕಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡೀರ ಎಂ.ರಾಮಕೃಷ್ಣ ಮಾತನಾಡಿದರು.
ಬ್ಯಾಂಕಿನ ಭದ್ರತಾ ಕೊಠಡಿಯನ್ನು ಟಿ.ಆರ್.ಶರವಣ ಕುಮಾರ್ ಉದ್ಘಾಟಿಸಿದರು. ನಗದು ಕೌಂಟರ್‌ಅನ್ನು ಉಪಾಧ್ಯಕ್ಷ ಕೆ.ಎಸ್.ಪೂವಯ್ಯ ನೆರವೇರಿಸಿದರು. ಬ್ಯಾಂಕಿನ ಗಣಕ ಯಂತ್ರಕ್ಕೆ ನಿರ್ದೇಶಕರಾದ ಗುಮ್ಮಟ್ಟಿರ ಕಿಲನ್ ಗಣಪತಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಎಚ್.ಎಂ.ರಮೇಶ್, ಹೊಸೂರು ಜೆ.ಸತೀಶ್ ಕುಮಾರ್, ಕೆ.ಅರುಣ್ ಭೀಮಯ್ಯ, ಟಿ.ಆರ್.ಶರವಣಕುಮಾರ್, ಗುಮ್ಮಟ್ಟಿರ ಕಿಲನ್ ಗಣಪತಿ, ಎಸ್.ಸಿ.ಶರತ್ ಶೇಖರ್, ಎಚ್.ಕೆ.ಮಾದಪ್ಪ, ಎನ್.ಎಂ.ಉತ್ತಪ್ಪ, ಪಿ.ಪಿ.ಪೆಮ್ಮಯ್ಯ, ಕೆ.ಎನ್.ಸತೀಶ್, ಪಟ್ರಪಂಡ ಬಿ.ರಘುನಾಣಯ್ಯ, ಎಚ್.ಡಿ.ರವಿ, ಸೇರಿದಂತೆ ಪ್ರಧಾನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಡಿ.ರವಿಕುಮಾರ್, ಪ್ರಧಾನ ವ್ಯವಸ್ಥಾಪಕರಾದ ಜಿ.ಎಂ.ಬೋಜಮ್ಮ, ಉಪಸ್ಥಿತರಿದ್ದರು.