ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಕೊಡಂದೇರ ಪಿ.ಗಣಪತಿ ಮಾತನಾಡಿದರು. ಸತೀಶ್‌ಕುಮಾರ್, ಮಣವಟ್ಟಿರ ಬೆಳ್ಯಪ್ಪ ಇದ್ದರು. 
ಕೊಡಗು

ಕೊಡಗು ಡಿಸಿಸಿ ಬ್ಯಾಂಕ್ ಸಾಧನೆ ಅನಾವರಣ

ಪ್ರಮುಖ ಮುಖ್ಯಾಂಶಗಳು

  • ಕೊಡಗು ಡಿಸಿಸಿ ಬ್ಯಾಂಕ್ ಸಾಧನೆ ಅನಾವರಣ
ಮಡಿಕೇರಿ: ೧೦೫ ವರ್ಷಗಳ ಇತಿಹಾಸವಿರುವ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಜಿಲ್ಲೆಯ ೨೩ ಬ್ಯಾಂಕ್‌ಗಳ ಪೈಕಿ ಠೇವಣಿ ಸಂಗ್ರಹ ಮತ್ತು ಸಾಲ ವಿತರಣೆಯಲ್ಲಿ ಅಗ್ರಸ್ಥಾನದಲ್ಲಿದೆ. ಸಾಲ ವಸೂಲಾತಿಯಲ್ಲಿ ಶೇ.೯೮ ಸಾಧನೆ ಮಾಡಿದ್ದೇವೆ. ಬ್ಯಾಂಕಿನ ನಿವ್ವಳ ಎನ್‌ಪಿಎ ಶೂನ್ಯಕ್ಕೆ ಇಳಿದಿದೆ ಎಂದು ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಹೇಳಿದರು.
ಬ್ಯಾಂಕಿನ ಮುಖ್ಯ ಕಚೇರಿ ಮತ್ತು ಕಾಲೇಜು ರಸ್ತೆ ಶಾಖೆಯಲ್ಲಿ ಇತ್ತೀಚೆಗೆ ನಡೆದ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ರೈತರು, ಠೇವಣಿದಾರರು ಹಾಗೂ ಸಹಕಾರ ಸಂಘಗಳ ಸಹಕಾರದಿಂದಲೇ ಬ್ಯಾಂಕ್ ಈ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದೆ. ಬ್ಯಾಂಕಿನ ಎನ್‌ಪಿಎ ಗಣನೀಯವಾಗಿ ಇಳಿಕೆಯಾಗಿದೆ ಎಂದ ಅವರು, ಗ್ರಾಹಕರ ವಿಶ್ವಾಸವೇ ನಮ್ಮ ಬಲ ಎಂದು ಹೇಳಿದರು.
ಸಭೆಯಲ್ಲಿ ಗ್ರಾಹಕರು ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಬ್ಯಾಂಕಿನ ಅಭಿವೃದ್ಧಿ, ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಸೇವೆಯನ್ನು ಪ್ರಶಂಸಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಣವಟ್ಟಿರ ಬೆಳ್ಯಪ್ಪ ಅವರು ಬ್ಯಾಂಕಿನ ಪ್ರಗತಿ ಅಂಕಿಅಂಶಗಳನ್ನು ಮಂಡಿಸಿದರು. ಗ್ರಾಹಕರ ಕುಂದುಕೊರತೆ ಸಭೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತಿದ್ದು, ಮುಂದೆ ಬ್ಯಾಂಕಿನ ಎಲ್ಲಾ ೨೬ ಶಾಖೆಗಳಲ್ಲಿಯೂ ಸ್ಥಳೀಯ ನಿರ್ದೇಶಕರ ಉಪಸ್ಥಿತಿಯಲ್ಲಿ ಸಭೆ ಆಯೋಜಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಸಭೆಯಲ್ಲಿ ನಿರ್ದೇಶಕರಾದ ಹೊಸೂರು ಸತೀಶ್‌ಕುಮಾರ್, ಕಾಂಗೀರ ಸತೀಶ್ ಮತ್ತು ಶಾಖಾ ಸಿಬ್ಬಂದಿ ಉಪಸ್ಥಿತರಿದ್ದರು.