ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆಯಲ್ಲಿ ಸರಸ್ವತಿ, ದಯಾನಂದ್, ಬಸವರಾಜು, ರುದ್ರ, ದಿವ್ಯಾ ಇದ್ದರು. 
ಕೊಡಗು

ಕಾನೂನು ಗೌರವಿಸುವುದು ಎಲ್ಲರ ಕರ್ತವ್ಯ

ಲೋಕೇಶ್ ಮನು. ಡಿ
ವಿರಾಜಪೇಟೆ: ನಮ್ಮ ರಾಷ್ಟ್ರದ ಸಂವಿಧಾನವು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾವಾಗಿದೆ ಎಂದು ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಅರ್ಜುನ್ ಮೌರ್ಯ ಅಭಿಪ್ರಾಯಪಟ್ಟರು.
ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಎನ್‌ಎಸ್‌ಎಸ್ ಘಟಕ ಹಾಗೂ ರಾಜ್ಯಶಾಸ್ತ್ರ ವಿಭಾಗದಿಂದ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾನೂನು ಪ್ರತಿಯೊಬ್ಬರಿಗೂ ಒಂದೇ. ಅದನ್ನು ಗೌರವಿಸುವುದು ಎಲ್ಲರ ಕರ್ತವ್ಯ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅನ್ವಯವಾಗುವಂತಹ ಸಂವಿಧಾನವು ನಮ್ಮದಾಗಿದೆ. ಸ್ವಾತಂತ್ರ, ಭ್ರಾತೃತ್ವ, ಸಾಮಾಜಿಕ ಮೌಲ್ಯಗಳನ್ನು ಗೌರವಿಸುವುದರ ಮೂಲಕ ಸಂವಿಧಾನವನ್ನು ಗೌರವಿಸಿ ಎಂದು ಸಲಹೆ ನೀಡಿದರು.
ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಕೊಡಗು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ಡಾ.ಕೆ. ಸಿ.ದಯಾನಂದ ಮಾತನಾಡಿ, ಸಂವಿಧಾನದ ಆಶಯಗಳು ಉಳಿಯಬೇಕಾದರೆ ಅದನ್ನು ಕೇವಲ ತಾತ್ವಿಕ ಸಿದ್ಧಾಂತವನ್ನಾಗಿ ನೋಡದೆ ಪ್ರತಿಯೊಬ್ಬ ಭಾರತೀಯನ ಮೂಲ ತಳಹದಿ ಎಂದು ನೋಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಕೋರನ ಸರಸ್ವತಿ ಮಾತನಾಡಿದರು. ಭಾರತದ ಸಂವಿಧಾನದ ಕುರಿತು ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂವಿಧಾನದ ಪೀಠಿಕೆಯ ಪ್ರತಿಜ್ಞೆಯನ್ನು ಬೋಧಿಸಲಾಯಿತು. ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ರುದ್ರ, ಐಕ್ಯುಎಸಿ ಸಂಚಾಲಕ ಡಾ.ಕೆ.ಬಸವರಾಜು, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಂ.ಬಿ.ದಿವ್ಯಾ, ಉಪನ್ಯಾಸಕರಾದ ಹೇಮಂತ್‌ಕುಮಾರ್, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.