ಸೋಮವಾರಪೇಟೆ ಪಪಂ ಸಭಾಂಗಣದಲ್ಲಿ ಆಯವ್ಯಯ ಸಂಬಂಧ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಕೆ.ಎ.ಆದಂ, ಜಾಸಿಮ್ ಖಾನ್ ಇದ್ದರು. 
ಕೊಡಗು

ಪ.ಪಂ. ಆಯವ್ಯಯ ಪೂರ್ವಭಾವಿ ಸಭೆ

ಲೋಕೇಶ್ ಮನು. ಡಿ
ಸೋಮವಾರಪೇಟೆ: ಇಲ್ಲಿನ ಪಟ್ಟಣ ಪಂಚಾಯಿತಿಯ 2026-27ನೇ ಸಾಲಿನ ಆಯವ್ಯಯ ರೂಪಿಸುವ ಕುರಿತು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅಧ್ಯಕ್ಷತೆಯಲ್ಲಿ ಸೋಮವಾರ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
ಸಭೆಯಲ್ಲಿ ಮುಖ್ಯಾಧಿಕಾರಿ ಮಾತನಾಡಿ, ಮುಂದಿನ ಸಾಲಿನ ಬಜೆಟ್‌ನಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ, ಪಾರ್ಕ್ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ 20 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಸರ್ಕಾರದ ಅನುದಾನ ಹಾಗೂ ಕಂದಾಯ ಸೇರಿದಂತೆ ವಿವಿಧ ಮೂಲಗಳಿಂದ ನಿಧಿ ಸಂಗ್ರಹಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಮಳೆ ಹೆಚ್ಚಿರುವ ಹಿನ್ನೆಲೆಯಲ್ಲಿ ರಸ್ತೆ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಮಾಜಿ ಅಧ್ಯಕ್ಷೆ ಲೀಲಾ ನಿರ್ವಾಣಿ ಸಲಹೆ ನೀಡಿದರು.
ನಿರ್ವಹಣೆ ಇಲ್ಲದೆ ಪಾಳುಬಿದ್ದಿರುವ ಎರಡು ಪಾರ್ಕ್‌ಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡುವಂತೆ ಮಾಜಿ ಸದಸ್ಯೆ ಶೀಲಾ ಡಿಸೋಜ ಆಗ್ರಹಿಸಿದರು.
ಬೇನಾಮಿ ಕಟ್ಟಡ ನಿರ್ಮಾಣದಿಂದ ಪಂಚಾಯಿತಿಗೆ ನಷ್ಟವಾಗುತ್ತಿರುವುದನ್ನು ತಡೆಯಬೇಕೆಂದು ಸೂಡ ಅಧ್ಯಕ್ಷ ಕೆ.ಎ.ಆದಂ ಹೇಳಿದರು.
ಆನೆಕೆರೆ ಹಾಗೂ ಕಟ್ಟೆ ಬಸವೇಶ್ವರ ದೇವಾಲಯದ ಬಳಿಯ ಕೆರೆಗಳ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಪಡಿಸುವಂತೆ ಎಸ್.ಮಹೇಶ್ ಮನವಿ ಮಾಡಿದರು.
ಅಂಬೇಡ್ಕರ್ ಭವನದ ಸಮರ್ಪಕ ನಿರ್ವಹಣೆಗೆ ಸಮಿತಿ ರಚಿಸಲಾಗುವುದು ಎಂದು ಮುಖ್ಯಾಧಿಕಾರಿ ಇದೇ ವೇಳೆ ಭರವಸೆ ನೀಡಿದರು. ಸಭೆಯಲ್ಲಿ ಆರೋಗ್ಯ ನಿರೀಕ್ಷಕ ಜಾಸಿನ್ ಖಾನ್ ಇದ್ದರು.