ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಜಯಕರ ಶೆಟ್ಟಿ ಬಿ.ಇಂದ್ರಾಳಿ ಕಾರ್ಯಕ್ರಮ ಉದ್ಘಾಟಿಸಿದರು. ಪಿ.ಯು.ರಾಬಿನ್ ದೇವಯ್ಯ , ಜಿ.ಕೆ ದಿವಾಕರ್, ಎಚ್.ಕೆ.ಮಾದಪ್ಪ ಮತ್ತಿತರರಿದ್ದರು. 
ಕೊಡಗು

ಸಮಾಜದ ಪ್ರಗತಿಗೆ ಸಹಕಾರ ಕ್ಷೇತ್ರ ಮುಖ್ಯ

ಕುಶಾಲನಗರ: ಸಮಾಜದ ಸರ್ವತೋಮುಖ ಪ್ರಗತಿಗೆ ಸಹಕಾರ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಸಹಕಾರಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳ ಪ್ರಯೋಜನ ಪಡೆದುಕೊಂಡು ಸಹಕಾರ ರಂಗವನ್ನು ಅಭಿವೃದ್ಧಿಪಡಿಸಬೇಕೆಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಜಯಕರ ಶೆಟ್ಟಿ ಬಿ.ಇಂದ್ರಾಳಿ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಮತ್ತು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಜಂಟಿ ಆಶ್ರಯದಲ್ಲಿ ಕುಶಾಲನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾ ಆಯೋಜಿಸಿದ್ದ ಮೈಸೂರು ವಿಭಾಗದ ನೌಕರರ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಪೂರಕವಾಗಿ ಅನೇಕ ಜನಪರವಾದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಹಾಗೆಯೇ ಕೆಲವೊಂದು ಯೋಜನೆಗಳಿಗೆ ಪೂರಕವಾದ ಕಾಯ್ದೆಗಳ ತಿದ್ದುಪಡಿ ಕೂಡ ತರುತ್ತಿರುವುದು ಶ್ಲಾಘನೀಯ ವಿಚಾರ.
ಸಹಕಾರಿ ಕ್ಷೇತ್ರವನ್ನು ಆರ್ಥಿಕ ವ್ಯವಸ್ಥೆಗೆ ಮಾತ್ರ ಸೀಮಿತಗೊಳಿಸದೆ ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಗಳು ಹಾಗೂ ಅಧಿಕಾರಿಗಳು ಶ್ರಮಿಸಬೇಕೆಂದು ಎಂದರು.
ವಿಶೇಷ ಆಹ್ವಾನಿತರಾದ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಿ.ಸಿ.ಲೋಕಪ್ಪಗೌಡ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಎಲ್ಲ ವಿಚಾರಗಳ ಬಗ್ಗೆ ಅರಿವು, ತಿಳಿವಳಿಕೆ ಅತ್ಯವಶ್ಯ. ಅದರಲ್ಲೂ ಸಹಕಾರಿಗಳಿಗೆ ಸಹಕಾರ ಕ್ಷೇತ್ರವನ್ನು ಮುನ್ನಡೆಸಲು ಕಾಯ್ದೆ, ಕಾನೂನು, ತಿದ್ದುಪಡಿಗಳ ಬಗ್ಗೆ ಅರಿವು ಅಗತ್ಯವಿದೆ. ಈ ನಿಟ್ಟಿನಲ್ಲಿ ಕೈಗೊಂಡಿರುವ ತರಬೇತಿ ಕಾರ್ಯಾಗಾರವನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು.ರಾಬಿನ್ ದೇವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿದ್ದರು.
ಸಹಕಾರ ಸಂಘಗಳ ಕಾಯ್ದೆ-ಇತ್ತೀಚಿನ ತಿದ್ದುಪಡಿ, ಪದಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕರ ಜವಬ್ದಾರಿ - ಕರ್ತವ್ಯಗಳು, ಆದಾಯ ತೆರಿಗೆ ಹಾಗೂ ಜಿಎಸ್ಟಿ ಕುರಿತು, ಮಹಾಮಂಡಳದ ಕಾರ್ಯ ಚಟುವಟಿಕೆ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಡಾ.ಗುರುಸ್ವಾಮಿ, ಸಿ.ಎ. ರುದ್ರೇಶ್ ಪಟೇಲ್, ಎಂ.ಎಂ. ಶ್ಯಾಮಲಾ ಉಪನ್ಯಾಸ ನೀಡಿದರು.
ಈ ಸಂದರ್ಭ ಚಿಕ್ಕಮಗಳೂರು ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಕೆ ದಿವಾಕರ್, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಎಚ್.ಕೆ.ಮಾದಪ್ಪ, ನಿರ್ದೇಶಕ ಕೆ.ಟಿ.ಪರಮೇಶ್, ಬಲ್ಲಾರಂಡ ಮಣಿ ಉತ್ತಪ್ಪ, ಎಂ.ಎಂ.ಶ್ಯಾಮಲಾ, ಎಸ್.ಆರ್. ಸುನೀಲ್ ರಾವ್, ಸಹಕಾರ ಸಂಘಗಳ ಉಪನಿಬಂಧಕ ಎಚ್.ಡಿ.ರವಿಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ಸಮನ್ವಯಾಧಿಕಾರಿ ಪುಟ್ಟಸ್ವಾಮಿ ಇದ್ದರು.