ಸಿಪಿಎಲ್ ಲೋಗೋ ವನ್ನು ಅತಿಥಿಗಳು ಅನಾವರಣಗೊಳಿಸಿದರು. 
ಕೊಡಗು

ಸಿಪಿಎಲ್ ಲೋಗೋ ಅನಾವರಣ

ಲೋಕೇಶ್ ಮನು. ಡಿ
ಸಿದ್ದಾಪುರ: ನೆಲ್ಯಹುದಿಕೇರಿಯ ಕೋಫಿಯಾ ರೆಸ್ಟೋರೆಂಟ್‌ನಲ್ಲಿ ಬುಧವಾರ ಸಂಜೆ ಸಿಜೆ ಬಿಲ್ಡ್‌ವೇರ್ ಪ್ರಸ್ತುತಿಯಲ್ಲಿ ಐಪಿಎಲ್ ಮಾದರಿಯಲ್ಲಿ ಆಯೋಜಿಸಿರುವ ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) ಆವೃತ್ತಿ -1ಕ್ಕೆ ಲೋಗೋ ಅನಾವರಣದ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ನೀಡಲಾಯಿತು.
ಏ.10, 11 ಮತ್ತು 12ರಂದು ಸಿದ್ದಾಪುರದ ಪ್ರೌಢಶಾಲಾ ಮೈದಾನದಲ್ಲಿ ಪಂದ್ಯಾವಳಿ ಆಯೋಜಿಸಿದ್ದು, ಕೊಡಗು ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಯುವಕರಿಗೆ ಕ್ರೀಡಾ ವೇದಿಕೆ ಒದಗಿಸುವ ಉದ್ದೇಶದಿಂದ ಈ ಲೀಗ್ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಿಜೆ ಬಿಲ್ಡ್‌ವೇರ್‌ನ ವ್ಯವಸ್ಥಾಪಕ ಪ್ರಿನ್ಸ್, ಸಂಸ್ಥೆ ಸದಾ ಕ್ರೀಡೆ, ಶಿಸ್ತು ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಿಪಿಎಲ್‌ಗೆ ಬೆಂಬಲ ನೀಡಿದೆ ಎಂದು ತಿಳಿಸಿದರು. ಕ್ರಿಕೆಟ್ ಮೂಲಕ ಸಮುದಾಯದಲ್ಲಿ ಸ್ನೇಹಭಾವ, ಒಗ್ಗಟ್ಟು ಹಾಗೂ ಆರೋಗ್ಯಕರ ಜೀವನಶೈಲಿ ಬೆಳೆಸುವುದು ಸಂಸ್ಥೆಯ ಪ್ರಮುಖ ಉದ್ದೇಶ ಎಂದರು.
ವಿರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಾನ್ಸನ್ ಮಾತನಾಡಿ, ಕ್ರಿಶ್ಚಿಯನ್ ಯುವಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಈ ಕೊಡಗು ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್ ಕ್ರೀಡಾಸ್ಫೂರ್ತಿಯ ಜತೆಗೆ ಸಹೋದರತ್ವ ಮತ್ತು ಶಿಸ್ತು ಬೆಳೆಸುವ ಉತ್ತಮ ಪ್ರಯತ್ನವಾಗಿದೆ ಎಂದು ಶ್ಲಾಘಿಸಿದರು.
ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಸಿಪಿಎಲ್ ಅಧ್ಯಕ್ಷ ಜಿಜೋ, ಉಪಾಧ್ಯಕ್ಷ ಟೋಮಿ ಥಾಮಸ್, ಸಂತ ಜೋಸೆಫ್ ಸೇವಾ ಸಂಘ ಉಪಾಧ್ಯಕ್ಷ ಜೋಷಿ, ಉದ್ಯಮಿಗಳಾದ ವಿಜೇಶ್, ಜಾನ್ಸನ್, ಅನೀಶ್, ಸಂತ ಜೋಸೆಫ್ ಸೇವಾ ಸಂಘ ಸದಸ್ಯರಾದ ಶಾಜಿ, ವಿನ್ಸಿ, ಜಾನಿ, ರೀಗಲ್ ಹಾಗೂ ಎಸ್‌ಜೆಸಿ ಕ್ರಿಕೆಟರ್ಸ್‌ನ ಯುವಕರು ಭಾಗವಹಿಸಿದ್ದರು.