ನೂತನ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕುಶಾಲನಗರದ ತಾಲೂಕು ಕಚೇರಿಗೆ ಭೇಟಿ ನೀಡಿದ ಸಂದರ್ಭ ಅಪರ ಜಿಲ್ಲಾಧಿಕಾರಿ ಡಾ.ಐಶ್ವರ್ಯಾ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ , ತಹಸೀಲ್ದಾರ್ ಕಿರಣ್ ಜಿ.ಗೌರಯ್ಯ ಮತ್ತಿತರರಿದ್ದರು. 
ಕೊಡಗು

ಕುಶಾಲನಗರಕ್ಕೆ ನೂತನ ಜಿಲ್ಲಾಧಿಕಾರಿ ಭೇಟಿ

ಕುಶಾಲನಗರ: ಪಟ್ಟಣದ ತಾಲೂಕು ಕಚೇರಿಗೆ ಗುರುವಾರ ಭೇಟಿ ನೀಡಿದ ನೂತನ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರನ್ನು ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಂದಾಯ ಇಲಾಖೆಯಿಂದ ಸಮಗ್ರ ಮಾಹಿತಿ ಪಡೆದರು. ಕುಶಾಲನಗರ ಕಂದಾಯ ಅಧಿಕಾರಿ ಸಂತೋಷ್ ಕುಮಾರ್ ಹಾಗೂ ಸಿಬ್ಬಂದಿ ಜಿಲ್ಲಾಧಿಕಾರಿಗೆ ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಬಳಿಕ ಪಟ್ಟಣದ ಘನ ಹಾಗೂ ದ್ರವ ತ್ಯಾಜ್ಯ ನೇರವಾಗಿ ಕಾವೇರಿ ನದಿ ಸೇರುವುದರ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಜಿಲ್ಲಾಧಿಕಾರಿ ಸೋಮಶೇಖರ್, ಕಾವೇರಿ ಸಂರಕ್ಷಣೆ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ಅಲ್ಲದೆ ಕುಶಾಲನಗರದ ಒಳಚರಂಡಿ ಯೋಜನೆಯನ್ನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಶೀಘ್ರ ಪೂರ್ಣಗೊಳಿಸಲಾಗುವುದು. ಕುಶಾಲನಗರದ ತಾವರೆಕೆರೆಯ ಅಭಿವೃದ್ಧಿಯ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂರು ಭರವಸೆ ನೀಡಿದರು.
ನಗರದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಪ್ರವಾಸಿಗರಲ್ಲಿ ಅರಿವು, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರಪತ್ರ, ಜಾಹೀರಾತು ಫಲಕ ಇತ್ಯಾದಿಗಳನ್ನು ಉಪಯೋಗಿಸಲಾಗುವುದು ಎಂದು ಇದೇ ವೇಳೆ ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ.ಐಶ್ವರ್ಯಾ, ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಇದ್ದರು.