ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಕೃಷ್ಣಮೂರ್ತಿ ಮಾತನಾಡಿದರು. ಸಿದ್ದೆಗೌಡ, ಸುರೇಶ್, ನಿರ್ವಾಣಪ್ಪ ಇದ್ದರು.
ಸೋಮವಾರಪೇಟೆ: ನ. 26ರಂದು ಆಯೋಜಿಸಿರುವ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಸಂಬಂಧ ತಹಸೀಲ್ದಾರ್ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಸೋಮವಾರ ತಾಲೂಕು ಕಚೇರಿಯಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
ಸಂವಿಧಾನ ದಿನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಹಾಜರಿರಬೇಕು. ಬಿಇಒ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಕರೆತರಬೇಕು ಎಂದು ನಿರ್ದೇಶನ ನೀಡಿದರು.
ದಲಿತ ಮುಖಂಡ ಟಿ.ಈ.ಸುರೇಶ್ ಮಾತನಾಡಿ, ಅಂಬೇಡ್ಕರ್ ಜಯಂತಿಯಂದು ಬಹುತೇಕ ಸರ್ಕಾರಿ ನೌಕರರು ಗೈರಾಗುವ ಮೂಲಕ ತಾತ್ಸಾರ ತೋರುತ್ತಿದ್ದಾರೆ ಎಂದು ದೂರಿದರು. ಈ ಬಗ್ಗೆ ಈ ಹಿಂದೆಯೇ ತಹಸೀಲ್ದಾರ್ ಗಮನಕ್ಕೆ ತರಲಾಗಿದೆ. ಯಾವುದೇ ಕ್ರಮ ವಹಿಸಿಲ್ಲ. ಇನ್ನು ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಗೌರವ ತೋರುವ ಅಧಿಕಾರಿ ಹಾಗು ಸಿಬ್ಬಂದಿಗೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಭರವಸೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ ಕಾರ್ಯಕ್ರಮದ ಮಾಹಿತಿ ನೀಡಿ, ಮೊದಲಿಗೆ ಬಾಣಾವರ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅಲ್ಲಿಂದ ತೆರೆದ ವಾಹನದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಮೆರವಣಿಗೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ರಾಷ್ಟ್ರಧ್ವಜ, ಸಂವಿಧಾನ ಪೀಠಿಕೆ ಹಿಡಿದು ಸಾಗಲಿದ್ದಾರೆ. ಜೇಸಿ ವೇದಿಕೆಯಲ್ಲಿ ತಹಸೀಲ್ದಾರ್ ಸಂವಿಧಾನ ಪೀಠಿಕೆ ಬೋಧಿಸಲಿದ್ದಾರೆ.
ಸಂವಿಧಾನ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಪ್ರಬಂಧ ಸ್ಫರ್ಧೆ ನಡೆದಿದೆ. ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.
ಸಭೆಯಲ್ಲಿ ದಲಿತ ಮುಖಂಡರಾದ ಡಿ.ಎಸ್ ನಿರ್ವಾಣಪ್ಪ, ಜಯಪ್ಪ ಹಾನಗಲ್ಲು, ಕೆಂಚೇಶ್ವರ, ಹೊನ್ನಪ್ಪ, ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎ.ಆದಂ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಮೋಹಿನಿ ಹಾಗು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.