ಕೊಡ್ಲಿಪೇಟೆ ಕುರ್ಗ್ಮ ಆಟೋ ಚಾಲಕರ ಸಂಘದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಕ್ಕಳ ನೃತ್ಯ ಕಾರ್ಯಕ್ರಮ.
ಶನಿವಾರಸಂತೆ: ಕೂರ್ಗ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಸೋಮವಾರ ಇಲ್ಲಿನ ಬಸ್ ನಿಲ್ದಾಣದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಾಡು, ನುಡಿ ಬಿಂಬಿಸುವ ಹಳೇ ಕನ್ನಡ ಹಾಡುಗಳಿಗೆ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.
ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳ ತಂಡ ಕನ್ನಡ ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸಲಾಯಿತು.
ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಸೀಮಿತ ಆಗಬಾರದು. ನಿರಂತರವಾಗಿ ಕನ್ನಡ ಕಾರ್ಯಕ್ರಮಗಳು ನಡೆಯಬೇಕು. ನಾವು ಕನ್ನಡಿಗರಾಗಬೇಕು. ಆಂಗ್ಲ ವ್ಯಾಮೋಹ ದಿಂದ ಮಾತೃಭಾಷೆಯನ್ನು ಕಡೆಗಣಿಸಲಾಗುತ್ತಿದೆ. ಕನ್ನಡ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಟೋ ಚಾಲಕರ ಸಂಘದವರು ಕನ್ನಡ ಧ್ವಜವನ್ನು ನಿರಂತರವಾಗಿ ಹಾರಿಸುತ್ತಿರುವುದು ಹೆಮ್ಮೆಯ ವಿಚಾರ. ಜತೆಗೆ ಆಟೋ ಚಾಲಕರು ಕನ್ನಡ ಸಿನಿಮಾಗಳ ಅಭಿಮಾನಿಗಳಾಗಿದ್ದಾರೆ. ಆಟೋ ಚಾಲಕರ ಸಮಾಜ ಸೇವೆ ಶ್ಲಾಘನೀಯ. ಆಟೋ ಚಾಲಕರ ಸಮಸ್ಯೆಗಳಿಗೆ ನಾವು ಸ್ಪಂದಿಸುತ್ತೇವೆ. ಜತೆಗೆ ಜಾಗ ಪರಿಶೀಲನೆ ಮಾಡಿ ಆಟೋ ನಿಲ್ದಾಣಕ್ಕೆ ಸೂಕ್ತ ಸ್ಥಳ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಕೊಡ್ಲಿಪೇಟೆ ಊರ್ದು ಶಾಲೆಯ ಮುಖ್ಯ ಶಿಕ್ಷಕ ಮುಜಾಮಿಲ್ ಅಖ್ತರ್ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೂರ್ಗ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಡಿ.ವಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ
ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಪ್ಸರೆ ಬೇಗಂ, ಸದಸ್ಯ ಚಂದ್ರಶೇಖರ್, ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಖಜಾಂಚಿ ಡಾ.ಉದಯಕುಮಾರ್, ಅಕ್ರಮ-ಸಕ್ರಮ ಸಮಿತಿ ಸದಸ್ಯ ಜನಾರ್ದನ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಔರಂಗಜೇಬ್, ಕೂರ್ಗ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಮಾಜಿ ಅಧ್ಯಕ್ಷರಾದ ಸೋಮಣ್ಣ, ವಿಜಯ್, ಅಬ್ದುಲ್, ವಾಜಪೇಯಿ ವಸತಿ ಶಾಲೆ ಶಿಕ್ಷಕ ಸತೀಶ್ ಮತ್ತು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.ತೀರ್ಪುಗಾರರಾಗಿ ಮುಜಾಮಿಲ್ ಅಖ್ತರ್, ಜಾಕಿರ್, ಧರ್ಮಣ್ಣ ಕಾರ್ಯನಿರ್ವಹಿಸಿದರು.
ಇದೇ ಸಂದರ್ಭ ಸಂಘದ ವತಿಯಿಂದ ಶಾಸಕ ಡಾ.ಮಂತರ್‌ಗೌಡ ಅವರನ್ನು ಸನ್ಮಾನಿಸಿ ಗೌರವಿಸಿದರು.