ವಿರಾಜಪೇಟೆ ಕಾವೇರಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಸಂವಿಧಾನ ದಿನ ಆಚರಿಸಲಾಯಿತು. ನ್ಯಾ.ಎಸ್.ನಟರಾಜ್, ಸಿ.ಕೆ.ಪೂವಣ್ಣ, ವೇದಿಕಾ ರೆಡ್ಡಿ, ಪಿ.ಕೆ.ವಿನೀತಾ ಇದ್ದರು. 
ಕೊಡಗು

ಸಂವಿಧಾನ ಎಲ್ಲ ಕಾನೂನುಗಳ ತಾಯಿ

ಲೋಕೇಶ್ ಮನು. ಡಿ
ವಿರಾಜಪೇಟೆ : ಸಂವಿಧಾನ ಜೀವನದ ಅಂಗವಾಗಿದ್ದು, ನಮ್ಮೆಲ್ಲ ಕರ್ತವ್ಯ, ಕೆಲಸಗಳು ಸರಾಗವಾಗಿ ನಡೆಯಲು ಮೂಲ ಕಾರಣವೇ ನಮ್ಮ ಸಂವಿಧಾನ ಎಂದು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ನಟರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಲಾ, ವಿರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ಕಾವೇರಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸಂಯೋಗದಲ್ಲಿ ಬುಧವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾವೆಲ್ಲ ಇಂದು ಇಷ್ಟು ಶಿಸ್ತು ಹಾಗೂ ಸ್ವತಂತ್ರದಿಂದ ಬದುಕಲು ಸಂವಿಧಾನವೇ ಮೂಲ ಕಾರಣ. ಹೊರಗಿನ ಕೆಲ ದೇಶಗಳೊಂದಿಗೆ ನಮ್ಮ ದೇಶವನ್ನು ಹೋಲಿಕೆ ಮಾಡಿ ನೋಡಿದಂತಹ ಸಂದರ್ಭದಲ್ಲಿ ನಮಗೆ ಸಂವಿಧಾನದ ಮಹತ್ವ ಏನೆಂದು ತಿಳಿಯುತ್ತದೆ. ನಮ್ಮ ಸಂವಿಧಾನ ಅದ್ಭುತವಾದ ಜೀವಂತ ಸಂವಿಧಾನವಾಗಿದ್ದು, ಇದನ್ನು ರಚಿಸಲು ಪಟ್ಟಂತಹ ಶ್ರಮವನ್ನು ಅರಿಯುವುದರೊಂದಿಗೆ, ರಚಿಸಿದಂತಹ ಅಂಬೇಡ್ಕರ್ ಹಾಗೂ ರಚನಾ ಸಮಿತಿಯಲ್ಲಿದ್ದ ಪ್ರತಿಯೊಬ್ಬರನ್ನು ಸ್ಮರಿಸಬೇಕು. ಸಂವಿಧಾನವು ಎಲ್ಲ ಕಾನೂನಿನ ತಾಯಿ ಎಂಬುದನ್ನು ಅರಿತು ಪ್ರತಿಯೊಬ್ಬರ ಹಕ್ಕು ಕರ್ತವ್ಯಗಳನ್ನು ಗೌರವಿಸಿ ನಾವು ಪಾಲಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ನ್ಯಾ.ಆರ್.ಮಂಜುನಾಥ್ ಮಾತನಾಡಿ, ದೈನಂದಿನ ಜೀವನದಲ್ಲಿ ಸಂವಿಧಾನವು ಅವಿಭಾಜ್ಯ ಅಂಗವಾಗಿದೆ. ಸಂವಿಧಾನದ ಪ್ರಸ್ತಾವನೆಯನ್ನು ನಾವು ಅರ್ಥೈಸಿಕೊಂಡರೆ ಸಂಪೂರ್ಣ ಸಂವಿಧಾನವನ್ನು ಅರ್ಥೈಸಿಕೊಂಡಂತೆ. ಸಂವಿಧಾನ ಎಲ್ಲ ರೀತಿಯಲ್ಲೂ ನಮಗೆ ಸಮಾನ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ್ದು. ನಾವು ನಮ್ಮ ಹಕ್ಕನ್ನು ಅನುಭವಿಸುವುದರೊಂದಿಗೆ ಕರ್ತವ್ಯವನ್ನು ಸಮರ್ಪಕವಾಗಿ ಪಾಲಿಸಿದರೆ ಉತ್ತಮ ಸಮಾಜವನ್ನು ನಿರ್ಮಿಸಬಹುದು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರದೀಪ ಪೊತದಾರ ಮಾತನಾಡಿ, ಸಂವಿಧಾನವು ನಮಗೆ ವಿವಿಧ ಹಕ್ಕುಗಳನ್ನು ನೀಡಿದೆ. ಹಕ್ಕುಗಳನ್ನು ಅನುಭವಿಸುವುದರೊಂದಿಗೆ ಕರ್ತವ್ಯವನ್ನು ಸಮರ್ಪಕವಾಗಿ ಪಾಲಿಸಬೇಕು ಹಾಗೂ ಇತರರ ಹಕ್ಕುಗಳಿಗೆ ನಮ್ಮಿಂದ ತೊಂದರೆಯಾಗದಂತೆ ಸಂವಿಧಾನವನ್ನು ಗೌರವಿಸಬೇಕು ಎಂದರು.
ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಸಿ.ಕೆ.ಪೂವಣ್ಣ ಮಾತನಾಡಿದರು. ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಲಾ ಕಾಲೇಜು ಕಾರ್ಯದರ್ಶಿ ವೇದಿಕಾ ರೆಡ್ಡಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಲಾ ಪ್ರಾಂಶುಪಾಲೆ ಪಿ.ಕೆ. ವಿನೀತಾ ಸಂವಿಧಾನದ ಪ್ರಸ್ತಾವನೆ ಬೋಧಿಸಿದರು. ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಲಾದ ಟ್ರಸ್ಟಿ ಪ್ರಶಾಂತ್ ಇದ್ದರು.
ಕಾವೇರಿ ಕಾಲೇಜಿನ ಪ್ರಾಂಶುಪಾಲೆ ಬೆನೆಡಿಕ್ಟ್ ಆರ್ ಸಲ್ದಾನ, ಉಪನ್ಯಾಸಕರಾದ ಡಾ.ವೀಣಾ, ಕಾವೇರಿ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು, ಕಾವೇರಿ ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಲಾ ಉಪನ್ಯಾಸಕರು , ವಿದ್ಯಾರ್ಥಿಗಳು ಇದ್ದರು.