ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಶಾಸಕ ಡಾ.ಮಂತರ್‌ಗೌಡ ಮಾತನಾಡಿದರು. ಮಂಜುನಾಥ್, ಸತೀಶ್, ಆದಂ, ನಾಗೇಶ್ ಇದ್ದರು. 
ಕೊಡಗು

ಕಾರ್ಯಕರ್ತರ ಕುಂದುಕೊರತೆ ಸಭೆ

ಎ. ಆರ್. ರಘುರಾಮ
ಸೋಮವಾರಪೇಟೆ : ಇಲ್ಲಿನ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ನಗರ ಕಾರ್ಯಕರ್ತರ ಕುಂದುಕೊರತೆ ಸಭೆ ನಗರ ಅಧ್ಯಕ್ಷ ಮಂಜುನಾಥ್ ಅವರ ನೇತೃತ್ವದಲ್ಲಿ ಪಟ್ಟಣದ ಮಹಿಳಾ ಸಮಾಜದಲ್ಲಿ ಮಂಗಳವಾರ ನಡೆಯಿತು.
ಸಭೆಯಲ್ಲಿ ಶಾಸಕ ಡಾ. ಮಂತರ್ ಗೌಡ ಭಾಗವಹಿಸಿ, ಮೊದಲಿಗೆ ಕಾರ್ಯಕರ್ತರ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಆಲಿಸಿದರು. ನಂತರ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾಗಲಿರುವುದರಿಂದ ಕಾರ್ಯಕರ್ತರು ಈಗಿನಿಂದಲೇ ಸನ್ನದ್ಧರಾಗಬೇಕು ಎಂದು ಕರೆ ನೀಡಿದರು. ಎಸ್‌ಐಆರ್ ಕುರಿತು ಹೆಚ್ಚು ಗಮನ ಹರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.ತಮ್ಮ ತಮ್ಮ ಪ್ರದೇಶಗಳಲ್ಲಿ ಸಮಸ್ಯೆಗೀಡಾದವರು ಹಾಗೂ ಅನಾರೋಗ್ಯಕ್ಕೆ ತುತ್ತಾದವರ ಬಗ್ಗೆ ಕಾಳಜಿ ವಹಿಸಿ ಸಾಧ್ಯವಾದಷ್ಟು ಸಹಾಯ ಮಾಡಬೇಕು. ಇಂತಹ ವಿಷಯಗಳನ್ನು ನನ್ನ ಗಮನಕ್ಕೂ ತರಬೇಕೆಂದು ತಿಳಿಸಿದರು.
ಸ್ಥಳೀಯ ಬೂತ್ ಮಟ್ಟದಿಂದ ತಾಲೂಕು ಮಟ್ಟದವರೆಗೆ ಸಕ್ರಿಯ ಕಾರ್ಯಕರ್ತರನ್ನು ಗುರುತಿಸಿ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಬೇಕಾಗಿದೆ ಎಂದು ಹೇಳಿದರು.
ನಗರದ ಸ್ವಚ್ಛತೆ ವಿಚಾರದಲ್ಲಿಯೂ ಎಲ್ಲರೂ ಹೆಚ್ಚಿನ ಗಮನ ಹರಿಸಬೇಕೆಂದು ಅವರು ಸಲಹೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಪಕ್ಷವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆಗೆ ಸೂಕ್ತ ಅಭ್ಯರ್ಥಿಗಳನ್ನು ಗುರುತಿಸಿ ಶಾಸಕರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಯೋಜನಾ ಪ್ರಾಧಿಕಾರ ತಾಲೂಕು ಅಧ್ಯಕ್ಷ ಕೆ.ಎ.ಆದಮ್, ನಗರ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಸಿ.ನಾಗೇಶ್, ನಗರ ಕಾರ್ಯದರ್ಶಿ ಭುವನೇಶ್, ಮಹಿಳಾ ಘಟಕ ಅಧ್ಯಕ್ಷೆ ಶುಭ, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಬಿ.ಸಿ. ವೆಂಕಟೇಶ್ ಮತ್ತಿತರರು ಇದ್ದರು.