ನರಿಯಂದಡ ಗ್ರಾಮದ ಎಡಪಾಲದ ಕುಪ್ಪೋಡಂಡ ಕುಟುಂಬಸ್ಥರ ಆತಿಥ್ಯದಲ್ಲಿ ನಡೆದ 23ನೇ ವರ್ಷದ ಎಡಪಾಲ ಕೌಟುಂಬಿಕ ಕ್ರೀಡಾಕೂಟ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿನ್ನರ್ಸ್ ಪ್ರಶಸ್ತಿ ಪಡೆದ ಕಿಕ್ಕರೆ ತಂಡ . 
ಕೊಡಗು

ಪ್ರಶಸ್ತಿ ಮುಡಿಗೇರಿಸಿಕೊಂಡ ಕಿಕ್ಕರೆ ತಂಡ

ಲೋಕೇಶ್ ಮನು. ಡಿ
ಪೊನ್ನಂಪೇಟೆ: ನರಿಯಂದಡ ಗ್ರಾಮದ ಎಡಪಾಲದ ಕುಪ್ಪೋಡಂಡ ಕುಟುಂಬಸ್ಥರ ಆತಿಥ್ಯದಲ್ಲಿ ಆಯೋಜಿಸಿದ್ದ 23ನೇ ವರ್ಷದ ಎಡಪಾಲ ಕೌಟುಂಬಿಕ ಕ್ರೀಡಾಕೂಟ ಮಂಗಳವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಿಕ್ಕರೆ ತಂಡ ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡು ಸಂಭ್ರಮಿಸಿತು. ಫೈನಲ್‌ನಲ್ಲಿ ತೀವ್ರ ಪೈಪೋಟಿ ನೀಡಿದ, ಕ್ರೀಡಾಕೂಟದ ಅತಿಥ್ಯ ವಹಿಸಿದ್ದ ಕುಪ್ಪೋಡಂಡ ತಂಡ ಕೊನೆಗೆ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ವಾಲಿಬಾಲ್ ಪಂದ್ಯಾವಳಿಯಲ್ಲಿ ಎಡಪಾಲ ಗ್ರಾಮದ ಬದ್ರಿಯಾ ಫ್ರೆಂಡ್ಸ್ ತಂಡ ವಿನ್ನರ್ಸ್ ಪ್ರಶಸ್ತಿ ಪಡೆದರೆ, ಕಿಕ್ಕರೆ ತಂಡ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿತು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕಿಕ್ಕರೆ ತಂಡ ಪ್ರಥಮ ಸ್ಥಾನ ಗಳಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಸ್ಪರ್ಧೆಯಲ್ಲಿ ಬದ್ರಿಯಾ ಫ್ರೆಂಡ್ಸ್ ತಂಡ ರನ್ನರ್ಸ್ ಪ್ರಶಸ್ತಿ ಗಳಿಸಿತು.
ಎಡಪಾಲದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಈ ಕೌಟುಂಬಿಕ ಕ್ರೀಡಾಕೂಟದಲ್ಲಿ ಎಡಪಾಲ ವ್ಯಾಪ್ತಿಯ ಕುಪ್ಪೋಡಂಡ, ಕಿಕ್ಕರೆ, ಕುರಿಕಡೆ, ಎರಟೇಂಡ ಪೊಯಕಾರಂಡ, ಕೂತಂಬಟ್ಟೀರ ಕುಟುಂಬ ತಂಡಗಳು ಸೇರಿದಂತೆ ಒಟ್ಟು 9 ತಂಡಗಳು ಪಾಲ್ಗೊಂಡಿದ್ದವು. ಈ ಪೈಕಿ ಗ್ರಾಮದ ಕೇಮಾಡ್ ಫ್ರೆಂಡ್ಸ್, ಬದ್ರಿಯಾ ಫ್ರೆಂಡ್ಸ್ ಮತ್ತು ಪಾಟಿಲತ್ ಬ್ರದರ್ಸ್ ಎಂಬ ಮೂರು ತಂಡಗಳು ಕ್ರೀಡಾಕೂಟದಲ್ಲಿ ಆಹ್ವಾನಿತ ತಂಡಗಳಾಗಿ ಭಾಗವಹಿಸಿದವು.
ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಬೆಂಗಳೂರಿನ ರಾಜ್ಯ ಪೊಲೀಸ್ ಅಪರಾಧ ತನಿಖಾ ವಿಭಾಗದ ಡಿಟೆಕ್ಟಿವ್ ಪೊಲೀಸ್ ಇನ್ಸ್‌ಸ್ಪ್ಪೆಕ್ಟರ್ ಆಗಿ ಪದೋನ್ನತಿ ಹೊಂದಿದ ಎಡಪಾಲದವರಾದ ಕುಪ್ಪಡಂಡ ಎ.ರಫೀಕ್ ಮತ್ತು ಕಳೆದ ಬಾರಿಯ ಸಿಎ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ತೋರಿದ ಗ್ರಾಮದ ಖಲಂದರ್ ಭಾಷಾ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಡಪಾಲ ಕೌಟುಂಬಿಕ ಕ್ರೀಡಾಕೂಟದ ಸ್ಥಾಪಕರಾದ ಕುಪ್ಪೋಡಂಡ ಎ.ಅಬ್ದುಲ್ ರಶೀದ್, ಕುಪ್ಪೋಡಂಡ ಕುಟುಂಬ ಸಂಘದ ಅಧ್ಯಕ್ಷರಾದ, ರಾಷ್ಟ್ರಪತಿ ಪದಕ ವಿಜೇತ ನಿವೃತ್ತ ಪೊಲೀಸ್ ಅಧಿಕಾರಿ ಕುಪ್ಪೋಡಂಡ ಎಂ.ಹಂಸಾ, ಕುಪ್ಪೋಡಂಡ ಕುಟುಂಬದ ತಕ್ಕ ಮುಖ್ಯಸ್ಥ ಕೆ.ವೈ.ಕುಂಜ್ಹಿಹಮದ್, ಎರಟೇಂಡ ಕುಟುಂಬದ ತಕ್ಕ ಮುಖ್ಯಸ್ಥ ಮೊಯ್ದು ಹಾಜಿ, ಕುರಿಕಡೆ ಕುಟುಂಬದ ತಕ್ಕ ಮುಖ್ಯಸ್ಥ ಅಹಮದ್ ಹಾಜಿ, ಪೊಯಕಾರಂಡ ಕುಟುಂಬದ ತಕ್ಕ ಮುಖ್ಯಸ್ಥ ಪಿ.ಎಂ.ಅಬ್ದುಲ್ಲಾ ಸೇರಿದಂತೆ ಎಡಪಾಲದ ವಿವಿಧ ಕುಟುಂಬದ ನೂರಾರು ಸದಸ್ಯರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.