ಕಣದಲ್ಲಿ ಒಣಹಾಕಿರುವ ಕಾಫಿ 
ಕೊಡಗು

ಕಾಫಿ ಫಸಲು ಕಳವು ತಡೆಗೆ ಖಾಕಿ ಕಟ್ಟೆಚ್ಚರ

ಪ್ರಮುಖ ಮುಖ್ಯಾಂಶಗಳು

  • ಕಾಫಿ ಸೀಸನ್‌ನಲ್ಲಿ ಕಳ್ಳರ ಕಾಟ
  • ಕಣದಿಂದಲೇ ಕಾಫಿ ಹೊತ್ತೊಯ್ಯುವ ಕಳ್ಳರು
  • ಗಿಡದಲ್ಲೂ ಕಾಫಿ ಬಿಡದ ಖದೀಮರು
ಮಡಿಕೇರಿ:
ಕಾಫಿ ಕೊಯ್ಲು ಹಂತಕ್ಕೆ ಬರುತ್ತಿದ್ದಂತೆಯೇ ಕಳ್ಳರ ಹಾವಳಿ ಹೆಚ್ಚಾಗುವುದು ಇತ್ತೀಚಿನ ಸಾಮಾನ್ಯ ಬೆಳವಣಿಗೆ ಆಗಿದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಕದ್ದಿರುವ ಕಾಫಿಯನ್ನು ಖರೀದಿಸುವವರ ಮೇಲೆಯೇ ಹದ್ದಿನ ಕಣ್ಣು ಇಡುವ ಮೂಲಕ ಖದೀಮರ ಕೈಯನ್ನೇ ಕಟ್ಟಿ ಹಾಕಲು ಮುಂದಾಗಿದೆ.
ಶುಕ್ರವಾರದ ಮಾರುಕಟ್ಟೆ ಮಾಹಿತಿ ಪ್ರಕಾರ ಅರೆಬಿಕಾ ಪಾರ್ಚಿಮೆಂಟ್ 60 ಕೆಜಿ ಚೀಲದ ಬೆಲೆ 23,550-23,600 ರೂ. ಅರೆಬಿಕಾ ಚೆರಿ ದರ 14,150-14,200 ರೂ. ರೋಬಸ್ಟಾ ಪಾರ್ಚಿಮೆಂಟ್ ದರ 17,450-17,500 ರೂ., ರೋಬಸ್ಟಾ ಚೆರಿಯ ದರ 9,300-9350 ರೂ. ಹಾಗೂ ಕರಿಮೆಣಸು ದರ ಕೆಜಿಗೆ 640-670 ರೂ. ಇದೆ. ಆಕರ್ಷಕವಾಗಿ ಕಾಣುವ ಈ ದರ ಸಿಗಬೇಕಾದರೆ ಕಾಫಿ ಬೆಳೆಗಾರ ವರ್ಷಪೂರ್ತಿ ಬೆವರು ಸುರಿಸಿರುತ್ತಾನೆ. ತೋಟದ ನಿರ್ವಹಣೆಗಾಗಿ ದೊಡ್ಡ ಮೊತ್ತದ ಹಣವನ್ನು ವಿನಿಯೋಗಿಸಿರುತ್ತಾನೆ. ಮತ್ತೊಂದು ಕಡೆ ಯಾರದ್ದೋ ತೋಟದ ಕಡೆ ಕಳ್ಳರನ್ನು ಸೆಳೆಯುವಂತೆ ಈ ದರ ಮಾಡುತ್ತಿದೆ.
ಪ್ರತಿವರ್ಷವೂ ಕಾಡುವ ಅತಿವೃಷ್ಠಿ, ಅನಾವೃಷ್ಠಿ, ಪ್ರಾಕೃತಿಕ ವಿಕೋಪ, ಮಾನವ-ವನ್ಯಜೀವಿ ಸಂಘರ್ಷ... ಹೀಗೆ ಹಲವು ಕಾರಣಗಳಿಂದ ಕಾಫಿ ಬೆಳೆಗಾರರು ನಷ್ಟಕ್ಕೆ ಒಳಗಾಗುವುದು ಸಾಮಾನ್ಯ. ಇದರ ಜತೆಗೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಹೋಗುತ್ತಿರುವ ತೋಟಗಳ ನಿರ್ವಹಣಾ ವೆಚ್ಚ, ಉತ್ಪಾದನಾ ವೆಚ್ಚಕ್ಕೆ ಸರಿದೂಗದ ಮಾರುಕಟ್ಟೆ ಬೆಲೆ ಕಾಫಿ ಬೆಳೆಗಾರರನ್ನು ಈ ಕೃಷಿಯಿಂದ ಬಹುತೇಕ ವಿಮುಖರಾಗುವಂತೆ ಮಾಡಿರುವುದೂ ನಿಜ. ಈ ಎಲ್ಲಾ ಕಾರಣಗಳಿಂದ ಜಿಲ್ಲೆಯ ಬಹುತೇಕ ಕಾಫಿ ತೋಟಗಳು ಮಾರಾಟವಾಗಿದ್ದರೆ. ಕೆಲವರು ತೋಟಗಳನ್ನು ಗುತ್ತಿಗೆ ಕೊಟ್ಟು ನಗರ ಸೇರಿಕೊಂಡಿದ್ದಾರೆ. ಈ ಮಧ್ಯೆ ಅಲ್ಲಲ್ಲಿ ಉಳಿದುಕೊಂಡಿರುವ ಕಾಫಿ ತೋಟಗಳಿಗೆ ಈಗ ಕಳ್ಳರ ಹಾವಳಿಯಿಂದಾಗಿ ಬೆಳೆಗಾರ ಬೇಸತ್ತು ಹೋಗುವಂತೆ ಆಗಿದೆ.
ಕಾಫಿಗೆ ಬೆಲೆ ಇಲ್ಲ ಎಂದು ಬೆಳೆಗಾರ ಕೊರಗುತ್ತಿರುವ ಹೊತ್ತಿನಲ್ಲಿ ಕಳೆದ ವರ್ಷದಿಂದ ಈಚೆಗೆ ಕಾಫಿಗೆ ಉತ್ತಮ ದರ ಸಿಗುತ್ತಿದೆ. ಇದರಿಂದ ಬೆಳೆಗಾರು ಸಂಭ್ರಮ ಪಡಬೇಕಾಗಿದ್ದಲ್ಲಿ ಹಣ್ಣಾಗಿರುವ ಕಾಫಿ ಮತ್ತು ಕೊಯ್ಲು ಮಾಡಿ ಒಣಹಾಕಿರುವ ಕಾಫಿಯನ್ನು ಮಾರುಕಟ್ಟೆ ತಲುಪಿಸುವ ತನಕ ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಕಣದಲ್ಲಿ ಒಣಹಾಕಿದ ಕಾಫಿಯನ್ನು ಮಾತ್ರ ದೋಚದ ಕಳ್ಳರು ಗಿಡದಿಂದಲೂ ಕದ್ದುಕೊಂಡು ಹೋಗುವ ಪರಿಪಾಟ ರೂಢಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಕಾಫಿ ಒಣ ಹಾಕಿದ್ದ ಕಣಕ್ಕೆ ಇಳಿದು ದೋಚುತ್ತಿದ್ದ ಕಳ್ಳರು ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಗಿಡಗಳಿಂದ ರೆಂಬೆ ಸಹಿತ ಕಾಫಿ ಹಣ್ಣನ್ನು ಕಿತ್ತು ಚೀಲಕ್ಕೆ ತುಂಬಿಸಿಕೊAಡು ಪರಾರಿ ಆಗುತ್ತಿದ್ದಾರೆ. ಕಳ್ಳರ ಈ ದುಷ್ಕೃತ್ಯದಿಂದ ಫಸಲು ಮಾತ್ರ ನಾಶವಾಗುವುದಲ್ಲದೆ ಕಾಫಿಗಿಡಗಳೂ ಹಾನಿಗೆ ಒಳಗಾಗುತ್ತಿವೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಇಂಥ ಕೆಲಸ ಕಳೆದ ವರ್ಷದಿಂದ ಶುರುವಾಗಿದೆ. ಕೆಲವು ಕಡೆಗಳಲ್ಲಿ ಇಂಥ ಕಳ್ಳರು ಬೆಳೆಗಾರರ ಕೈಗೆ ಸಿಕ್ಕಿಬಿದ್ದ ನಂತರ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಕಾಫಿಯ ಜತೆಗೆ ಕಪ್ಪು ಬಂಗಾರ ಕರಿಮೆಣಸು ಕಳುವು ಕೂಡ ಕೊಡಗಿನ ಕಾಫಿ ತೋಟಗಳಲ್ಲಿ ಸಾಮಾನ್ಯವಾಗಿದೆ. ಇಂಥ ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ ಪೊಲೀಸರು ಅಲರ್ಟ್ ಆಗಿದ್ದಾರೆ. ಕಳುವು ಮಾಡಿದ ಮಾಲು ಖರೀದಿಸುವವರು ಇದ್ದಾಗ ಮಾತ್ರ ಕಳ್ಳತನ ಹೆಚ್ಚಾಗುತ್ತದೆ ಎನ್ನುವುದು ಅರಿತಿರುವ ಪೊಲೀಸರು ಇಂಥ ಖರೀದಿದಾರರ ಮೇಲೆಯೇ ನಿಗಾ ಇಡಲಾರಂಭಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿನ ಕಾಫಿ ಮತ್ತು ಕಾಳು ಮೆಣಸು ವ್ಯಾಪಾರ ಮಾಡುವವರೊಂದಿಗೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ಮತ್ತು ಕಾಫಿ ಹಾಗೂ ಕಾಳುಮೆಣಸು ವ್ಯಾಪಾರಸ್ಥರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುವAತೆ ಆಯಾಯ ಪ್ರದೇಶದ ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳಿಗೆ ಈಗಾಗಲೇ ಎಸ್‌ಪಿ ಕೆ. ರಾಮರಾಜನ್ ಸೂಚನೆಗಳನ್ನು ನೀಡಿದ್ದಾರೆ.
ಕಾಫಿ ಮತ್ತು ಕಾಳು ಮೆಣಸು ವ್ಯಾಪಾರಸ್ಥರು ಕಾಫಿ ಮತ್ತು ಕಾಳು ಮೆಣಸು ಖರೀದಿ ಮಾಡುವ ಸಂದರ್ಭದಲ್ಲಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಹಿವಾಟಿನ ವಿವರ ತೂಕ ಹಾಗೂ ಮೊತ್ತ ಸೇರಿದಂತೆ ಮಾರಾಟ ಮಾಡುವವರ ಸಂಪೂರ್ಣ ಮಾಹಿತಿಯನ್ನು ವ್ಯಾಪಾರಿಗಳು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಕಾಫಿ ಅಥವಾ ಕರಿಮೆಣಸು ಖರೀದಿ ಸಂದರ್ಭ ಸಂಶಯ ಉಂಟಾದಲ್ಲಿ ಅಂಥ ವ್ಯಕ್ತಿಗಳ ಫೋಟೋ ತೆಗೆದುಕೊಳ್ಳಬೇಕು. ಈ ಮಾರಾಟಗಾರರ ಹಿನ್ನೆಲೆ ಪರಿಶೀಲಿಸಿ ಎಚ್ಚರಿಕೆಯಿಂದ ವ್ಯವಹರಿಸಬೇಕು ಎನ್ನುವ ಸೂಚನೆಗಳನ್ನು ವ್ಯಾಪಾರಿಗಳಿಗೆ ನೀಡಲಾಗಿದೆ.
ಕಾಫಿ ವ್ಯಾಪಾರಸ್ಥರು ಕಾಫಿ ಅಥವಾ ಕರಿಮೆಣಸು ಮಾರಾಟ ಮಾಡುವವರ ವಿವರಗಳನ್ನು ಪಡೆಯುವುದು ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಪೊಲೀಸರ ಈ ಸೂಚನೆಗಳನ್ನು ನಿರ್ಲಕ್ಷಿಸಿ ದಾಖಲಾತಿಗಳನ್ನು ನಿರ್ವಹಿಸದಿರುವುದು ಕಂಡುಬAದಲ್ಲಿ ಅಂಥÀವರ ವಿರುದ್ಧ ಜಿಎಸ್‌ಟಿ ಇಲಾಖೆಗೆ ಮಾಹಿತಿ ಕೊಡುವುದಲ್ಲದೆ ಯಾವುದೇ ದಾಖಲಾತಿ ನಿರ್ವಹಿಸದೇ ವ್ಯವಹರಿಸಿರುವುದನ್ನು ಉದ್ದೇಶಪೂರ್ವಕವಾಗಿ ಕಳುವು ಮಾಲನ್ನು ಕಡಿಮೆ ಬೆಲೆಯಲ್ಲಿ ಪಡೆದಿರುವುದಾಗಿ ಪರಿಗಣಿಸಿ ವ್ಯಾಪಾರಸ್ಥರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಇಂಥವರಿಗೆ ನ್ಯಾಯಾಲಯದಿಂದ 3 ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಸಾಧ್ಯತೆಗಳಿರುತ್ತದೆ ಎನ್ನುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಒಟ್ಟು 4,106 ಚ.ಕಿ.ಮೀ ಭೌಗೋಳಿಕ ವಿಸ್ತೀರ್ಣ ಹೊಂದಿರುವ ಕೊಡಗಿನಲ್ಲಿ 1,197 ಚ.ಕಿ.ಮೀ ಪ್ರದೇಶದ 1,06,921 ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತದೆ. ಜಿಲ್ಲೆಯ ಬಹುತೇಕ ಕಾಫಿ ತೋಟಗಳು 10 ಹೆಕ್ಟೇರ್‌ಗಿಂತಲೂ ಕಡಿಮೆ ವಿಸ್ತೀರ್ಣದ ಸಣ್ಣ ಬೆಳೆಗಾರರ ಒಡೆತನದಲ್ಲಿದೆ. ಸಾಮಾನ್ಯವಾಗಿ ದೊಡ್ಡ ಹಿಡುವಳಿ ಹೊಂದಿರುವ ಕಾಫಿ ಬೆಳೆಗಾರರು ತಾವು ಬೆಳೆದ ಕಾಫಿ ಒಣಗಿಸಲು ಸುಸಜ್ಜಿತ ವ್ಯವಸ್ಥೆ ಹೊಂದಿರುತ್ತಾರೆ. ಭದ್ರತೆ ಹೊಂದಿರುವ ಕಣ ಮಾತ್ರವಲ್ಲದೆ ಕಾವಲುಗಾರರನ್ನೂ ನೇಮಿಸಿಕೊಂಡಿರುತ್ತಾರೆ. ಆದರೆ ಎಲ್ಲಾ ಸಣ್ಣ ಕಾಫಿ ಬೆಳೆಗಾರರ ಬಳಿ ಸುಸಜ್ಜಿತ ಕಣ ಇರುವುದಿಲ್ಲ. ಕೊಯ್ಲು ಮಾಡಿದ ಭತ್ತದ ಗದ್ದೆಗಳನ್ನೇ ಸಮತಟ್ಟು ಮಾಡಿ ಅಲ್ಲಿ ಕಾಫಿ ಒಣಗಿಸಲಾಗುತ್ತದೆ. ಇದಕ್ಕೆ ಯಾವುದೇ ಭದ್ರತೆ ಇರುವುದಿಲ್ಲ. ಬೆಳೆಗಾರರೇ ರಾತ್ರಿ ಪೂರ್ತಿ ಕಾವಲು ಕಾಯುವ ಪರಿಸ್ಥಿತಿ ಇರುತ್ತದೆ. ಇಂತಹ ಕಾಫಿ ಕಣಗಳೇ ಕಳ್ಳರ ಟಾರ್ಗೆಟ್ ಆಗಿದ್ದು, ಹೊಂಚು ಹಾಕಿ ಕಣದಿಂದಲೇ ಕಾಫಿ ಕದ್ದೊಯ್ಯುತ್ತಾರೆ.
ಕಾಫಿ ಕಳುವು ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಬೆಳೆಗಾರರು ಕೂಡ ಜಾಗೃತರಾಗಿದ್ದಾರೆ. ಕಾಫಿ ಫಸಲು ಮತ್ತು ಗಿಡಗಳ ರಕ್ಷಣೆಗಾಗಿ ಇತ್ತೀಚೆಗೆ ಕೆಲವು ಬೆಳೆಗಾರರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದ್ದಾರೆ. ಕಾಫಿ ಕಣಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದೂ ಕಂಡುಬರುತ್ತಿದೆ. ಕೆಲವೆಡೆ ಕಾಫಿ ಕಣದ ಸುತ್ತಲೂ ಸೋಲಾರ್ ಬೇಲಿ ಹಾಕಿಸಿರುವುದನ್ನೂ ನೋಡಬಹುದಾಗಿದೆ.
"

ಕಾಫಿ ಮತ್ತು ಕಾಳು ಮೆಣಸು ಬೆಳೆಗಾರರು ವ್ಯಾಪಾರ ನಡೆಸುವ ಸಂದರ್ಭ ಮಾರಾಟ ಅಥವಾ ಖರೀದಿದಾರರ ಕುರಿತು ಸಂಶಯ ಬಂದಲ್ಲಿ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ಒದಗಿಸಬೇಕು. ಕೂಡಲೇ ಸ್ಥಳಕ್ಕೆ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿ ಆಗಮಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮನೆಯ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಅನುಮಾನಸ್ಪದ ವ್ಯಕ್ತಿಗಳು ಕಂಡುಬAದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡುವ ಮೂಲಕ ಅಥವಾ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಬಹುದು.