ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪಾಲಕರು ಮತ್ತು ಬೋಧಕರ ಸಭೆ ಹಮ್ಮಿಕೊಳ್ಳಲಾಗಿತ್ತು. 
ಕೊಡಗು

ಮಕ್ಕಳ ದಿನಚರಿ ಮೇಲೆ ನಿಗಾ ವಹಿಸಿ

ಲಲಾಟಾಕ್ಷ ಎಸ್
ಗೋಣಿಕೊಪ್ಪಲು: ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪಾಲಕರು ಹಾಗೂ ಬೋಧಕರ ಸಭೆ ಕಾಲೇಜು ಸಭಾಂಗಣದಲ್ಲಿ ಬುಧವಾರ ಕಾವೇರಿ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷ ಕೆ.ಎಂ.ಬೆಳ್ಳಿಯಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾವೇರಿ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಕೆ.ಪಿ.ಬೋಪಣ್ಣ ಮಾತನಾಡಿ, ಶಿಕ್ಷಣ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ. ಪಾಲಕರು ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ಅವರು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳುವಂತೆ ಮಾಡಬೇಕು. ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಸುಳಿಗೆ ಸಿಕ್ಕಿ ಖಿನ್ನತೆಗೆ ಒಳಗಾಗುತ್ತಿದ್ದು, ಇಂತಹ ಮಕ್ಕಳ ಮೇಲೆ ನಿಗಾ ವಹಿಸಬೇಕು. ಕೆಲ ಮಕ್ಕಳು ಇತ್ತೀಚಿನ ದಿನಗಳಲ್ಲಿ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಆದ್ದರಿಂದ ಮಕ್ಕಳ ದಿನಚರಿಯ ಮೇಲೆ ಗಮನವಿಡಬೇಕು. ಅತಿಯಾದ ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಡಾ.ಎಂ.ಬಿ.ಕಾವೇರಿಯಪ್ಪ ಮಾತನಾಡಿ, ಕಾಲೇಜಿನಲ್ಲಿ ಶಿಕ್ಷಣದ ಜತೆಗೆ ಕ್ರೀಡೆ, ಎನ್‌ಸಿಸಿ, ಎನ್‌ಎಸ್‌ಎಸ್, ರೋವರ್ಸ್, ರೇಂಜರ್ಸ್‌ನಲ್ಲಿಯೂ ವಿದ್ಯಾರ್ಥಿಗಳ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿದ್ದು, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಅಂತಿಮ ವರ್ಷದ ಪದವಿ ಓದುವ ಸಮಯದಲ್ಲಿಯೇ ಪ್ರತಿವರ್ಷ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನಲ್ಲಿ ನಡೆಸುವ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ವಿವಿಧ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದರು.
ಸಭೆಯಲ್ಲಿ 2026-27ನೇ ಸಾಲಿನ ಪಾಲಕ-ಅಧ್ಯಾಪಕರ ಸಂಘದ ನೂತನ ಉಪಾಧ್ಯಕ್ಷರಾಗಿ ಎ.ಟಿ.ಸಾಯೀಶ್ವರಿ, ಜಂಟಿ ಕಾರ್ಯದರ್ಶಿಗಳಾಗಿ ಐ.ಪಿ.ತುಳಸಿ, ಬಿ.ಕೆ.ರೂಪಾ ಅವರನ್ನು ಆಯ್ಕೆ ಮಾಡಲಾಯಿತು. ಪಾಲಕರು ಮತ್ತು ಅಧ್ಯಾಪಕರ ಸಂಘದ ಉಪಾಧ್ಯಕ್ಷೆ ಎಸ್.ಧನಲಕ್ಷ್ಮೀ, ಜಂಟಿ ಕಾರ್ಯದರ್ಶಿ ಎಂ.ಬಿ.ಮೀನಾ, ಖಜಾಂಚಿ ಗಾಯತ್ರಿ ದೇವಯ್ಯ, ಸಂಚಾಲಕಿ ಡಾ.ಸಿ.ಟಿ.ಕಾವ್ಯಾ ಹಾಜರಿದ್ದರು.
------------------------
ಫೋಟೋ: 29ಎಂಡಿಕೆ03