ಕುಶಾಲನಗರದ ಕೃಷಿ ಭೂಮಿಯಲ್ಲಿ ಗೌಡ ಮಹಿಳಾ ಸಂಘದ ನೇತೃತ್ವದಲ್ಲಿ ಸೋಮವಾರ ನಡೆದ ಸಾಂಪ್ರದಾಯಿಕ ಕೆಡ್ಡಸ ಪೂಜೆಯಲ್ಲಿ ಪಾಲ್ಗೊಂಡಿದ್ದ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು.
ಕುಶಾಲನಗರ: ಕುಶಾಲನಗರದ ಕೃಷಿ ಭೂಮಿಯಲ್ಲಿ ಗೌಡ ಮಹಿಳಾ ಸಂಘದ ನೇತೃತ್ವದಲ್ಲಿ ಸೋಮವಾರ ಕೆಡ್ಡಸ ಹಬ್ಬವನ್ನು ಆಚರಿಸಲಾಯಿತು.
ಗೌಡರ ಜೀವನ ನೇರವಾಗಿ ಒಕ್ಕಲುತನಕ್ಕೆ ಸಂಬಂಧಿಸಿದ್ದು. ಭೂಮಿ ತಾಯಿಯ ಆರಾಧನೆಯಲ್ಲಿ ಅವರು ಪ್ರಥಮವಾಗಿ ನಿಲ್ಲುತ್ತಾರೆ. ಕೆಡ್ಡಸ ಪೂಜೆ ಈ ದಿಶೆಯಲ್ಲಿ ಪ್ರಮುಖವಾಗಿದ್ದು ಫೆಬ್ರವರಿ ತಿಂಗಳ ಮಧ್ಯದಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಮೂರು ದಿನಗಳಲ್ಲಿ ಮೊದಲನೆಯ ದಿನ ಕೊಡಿ ಕೆಡ್ಡಾಸ, ನಡು ಕೆಡ್ಡಾಸ, ಕಡೆ ಕೆಡ್ಡಾಸ ಎಂಬುದಾಗಿ ವಿಂಗಡಿಸಲಾಗುತ್ತದೆ. ಹೆಚ್ಚಾಗಿ ಕೃಷಿ ಪ್ರಧಾನ ಜಿಲ್ಲೆಗಳಾದ ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆಚರಿಸುತ್ತಾರೆ.
ಸ್ತ್ರೀ ಋತುಮತಿಯಾದ ನಂತರ ಹೇಗೆ ಮಗು ಪಡೆಯಲು ಸಶಕ್ತಳಾಗುತ್ತಾಳೋ ಹಾಗೆಯೇ ಭೂಮಿಯು ಕೂಡ ಮುಂದಿನ ಮಳೆಗಾಲದ ಕೃಷಿಗೆ ಮತ್ತು ಬೆಳೆಗಳನ್ನು ಬೆಳೆಸಲು ಸಜ್ಜಾಗುತ್ತಾಳೆ ಎನ್ನುವುದು ಇದರ ಅರ್ಥ. ಕೆಡ್ಡಸದ ಮೂರು ದಿನಗಳಲ್ಲಿ ರೈತರು ಭೂಮಿಯನ್ನು ಊಳುವಂತಿಲ್ಲ, ಮರ ಗಿಡಗಳನ್ನು ಕಡಿಯುವಂತಿಲ್ಲ ಮತ್ತು ಗುದ್ದಲಿ, ಪಿಕಾಸಿ, ಬಳಸಿ ನೆಲ ಅಗೆಯುವಂತಿಲ್ಲ. ಏಕೆಂದರೆ ಇದು ಭೂಮಿ ತಾಯಿಯ ಸಂಪೂರ್ಣ ವಿಶ್ರಾಂತಿಯ ಸಮಯ ಎಂಬ ನಂಬಿಕೆ ಇದೆ.
ಸಂಘದ ಅಧ್ಯಕ್ಷೆ ಕಲಾ ಕರಂದ್ಲಾಜೆ, ನಿರ್ದೇಶಕರಾದ ಕುಕ್ಕುನೂರು ತೀರ್ಥ, ಶ್ರೀವಾಣಿ ಕುಯ್ಯಮುಡಿ, ಸಂಘದ ಪ್ರತಿನಿಧಿಗಳಾದ ಪ್ರಮೀಳಾ ಪೊಡನೊಳನ, ವಿಂದ್ಯಾ ಕಾಳೆರಮ್ಮನ, ಲತಾ ಕಾಳೆರಮ್ಮ ಇದ್ದರು.