ತೊಂಡೂರು ಉದ್ಭವ ಬಸವೇಶ್ವರ ದೇವಾಲಯದ ಹೊರನೋಟ
ಎಂ.ಬಿ. ವಿನ್ಸೆಂಟ್ ಸುಂಟಿಕೊಪ್ಪ
ಕೊಡಗಿನ ರಾಜವಂಶಸ್ಥರ ಜತೆ ನಂಟು ಹೊಂದಿದ್ದ ತೊಂಡೂರು ಗ್ರಾಮದ ಶ್ರೀ ಉದ್ಭವ ಬಸವೇಶ್ವರ ದೇವಸ್ಥಾನ ಈ ಭಾಗದ ಪ್ರಮುಖ ಶ್ರದ್ಧಾ ಕೇಂದ್ರವಾಗಿದೆ. ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು ಗ್ರಾಮದಲ್ಲಿ 2 ಶತಮಾನಗಳ ಹಿಂದೆ ಕೊಡಗಿನ ರಾಜವಂಶಸ್ಥರು ಶ್ರೀ ಬಸವೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿದರು. ಹಾಗಾಗಿ ಇದು ಸುತ್ತಮುತ್ತಲಿನ ಗ್ರಾಮಗಳ ಪ್ರಮುಖ ಆರಾಧನಾ ಸ್ಥಳವಾಗಿದೆ. ಭಕ್ತರ ನಂಬಿಕೆಯ ಪ್ರಕಾರ ಈ ಸನ್ನಿಧಿಯು ಉದ್ಭವ ಬಸವೇಶ್ವರ ಮೂರ್ತಿಯನ್ನು ಹೊಂದಿದೆ. ಇದು ಯಾವ ಶಿಲ್ಪಿಯೂ ಕೆತ್ತಿದ ವಿಗ್ರಹ ಅಲ್ಲ. ಕೊಡಗಿನ ರಾಜ ವಂಶಸ್ಥರಿಗೆ ಪ್ರಾಪ್ತವಾಗಿದ್ದು. ಹಾಗಾಗಿ ಅವರು ದೇವಸ್ಥಾನವನ್ನು ನಿರ್ಮಿಸಿದರು ಎನ್ನುತ್ತಾರೆ ಹಿರಿಯರು. ಪ್ರಮುಖವಾಗಿ ಕೃಷಿಕರ ಆರಾಧ್ಯ ದೈವನಾದ ಬಸವ ನಂಬಿ, ಬೇಡಿ ಬಂದವರನ್ನು ಹರಸುತ್ತಾ ಬಂದಿದ್ದಾನೆ ಎನ್ನಲಾಗುತ್ತಿದೆ. 7ನೇ ಹೊಸಕೋಟೆ, ಉಪ್ಪುತೋಡು, ಕಂಬಿಬಾಣೆ, ಕೊಡಗರಹಳ್ಳಿ, ಕಲ್ಲೂರು, ಸುಂಟಿಕೊಪ್ಪ ಭಾಗದ ನಿವಾಸಿಗಳು ದೇವಾಲಯದಲ್ಲಿ ನಡೆಯುವ ವಿಶೇಷ ಪೂಜೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಟಿಪ್ಪುವಿನಿಂದ ಹಾನಿಗೆ ಒಳಗಾಗಿತ್ತು:
ಕೊಡಗಿಗೆ ಟಿಪ್ಪು ದಂಡೆತ್ತಿ ಬಂದ ಸಂದರ್ಭ ಜಿಲ್ಲೆಯ ಹಲವು ದೇವಸ್ಥಾನಗಳನ್ನು ನಾಶಗೊಳಿಸಿದ. ಆಗ ಈ ದೇವಾಲಯವೂ ಹಾನಿಗೆ ಒಳಗಾಯಿತು ಎನ್ನುವುದು ಇಲ್ಲಿನ ಹಿರಿಯರ ಮಾತು. ಈ ಬಗ್ಗೆ ಇಂದಿಗೂ ಈ ಭಾಗದ ಜನರಲ್ಲಿ ನೋವು ಇದೆ. ದೇವಾಲಯದ ಸನ್ನಿಧಿ ಮೇಲಿನ ಭಕ್ತಿಯಿಂದ ಇಲ್ಲಿರುವ ಪಳೆಯುಳಿಕೆಗಳಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಕೆಲವು ವರ್ಷಗಳ ಹಿಂದೆ
ಈ ದೇವಾಲಯವನ್ನು ಗ್ರಾಮಸ್ಥರ ಮತ್ತು ದಾನಿಗಳ ಸಹಕಾರದಿಂದ ವಿಶಿಷ್ಟ ರೀತಿಯಲ್ಲಿ ಮರು
ನಿರ್ಮಾಣ ಮಾಡಲಾಗಿದೆ. ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರನ ಮೂರ್ತಿಯೊಂದಿಗೆ ಶ್ರೀ ಗಣಪತಿ, ಸುಬ್ರಹ್ಮಣ್ಯ, ಮುನೀಶ್ವರ ದೇವರುಗಳೂ ಇಲ್ಲಿ ಪ್ರತಿಷ್ಠಾಪನೆಗೊಂಡರು. ಹಾಗಾಗಿ ಇದು ಹಲವು ದೇವಾನುದೇವತೆಗಳ ಸನ್ನಿಧಿ ಒಳಗೊಂಡ ಸುಂದರವಾದ ಸಮೂಹ ದೇವಾಲಯವಾಗಿ ರೂಪಾಂತರಗೊಂಡು ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುತ್ತಿದೆ. ಪ್ರತಿ ತಿಂಗಳು ಸಂಕ್ರಮಣ ಮಾರನೆಯ ದಿನ ಇಲ್ಲಿ ಸಾಮೂಹಿಕ ಪೂಜೆ ನಡೆಯುವುದು ಬಹಳ ವಿಶೇಷ. ಆಗ ಸಾವಿರಾರು ಭಕ್ತರು ಸಂಗಮಗೊಳ್ಳುತ್ತಾರೆ.
ಪ್ರವಾಸಿಗರ ಮೆಚ್ಚಿನ ತಾಣವಾದ ಕೊಡಗಿಗೆ ಆಗಮಿಸುವ ಪ್ರವಾಸಿಗರು ಈ ದೇವಾಲಯಕ್ಕೂ ಭೇಟಿ ಕೊಡುತ್ತಾರೆ. ಪ್ರಕೃತಿ ಸೌಂದರ್ಯದ ಮಧ್ಯೆ ನೆಲೆನಿಂತಿರುವ ದೇವಾಲಯಕ್ಕೆ ಆಗಮಿಸುವ ಪ್ರವಾಸಿಗರು
ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಪ್ರಾರ್ಥನೆ ಸಲ್ಲಿಸುತ್ತಾರೆ. ನಂತರ ಈ ವ್ಯಾಪ್ತಿಯ ಸೌಂದರ್ಯವನ್ನು ಆಸ್ವಾದಿಸುವ ಮೂಲಕ ದೇವಾಲಯದಲ್ಲಿ ಕೆಲಕಾಲ ವಿರಮಿಸಿ ತೆರಳುತ್ತಾರೆ.ಬಸವೇಶ್ವರ ದೇವಾಲಯದಲ್ಲಿ ಪ್ರತಿ ತಿಂಗಳು ಸಂಕ್ರಮಣದ ಮಾರನೆಯ ದಿನದಂದು ಸಾಮೂಹಿಕ ಪೂಜೆ ನಡೆಯುತ್ತದೆ. ವಾರ್ಷಿಕವಾಗಿ ಸುಬ್ರಹ್ಮಣ್ಯ ಷಷ್ಠಿಯಂದು 7ನೇ ಹೊಸಕೋಟೆ, ಉಪ್ಪುತೋಡು, ಕಂಬಿಬಾಣೆ, ಕೊಡಗರಹಳ್ಳಿ, ಕಲ್ಲೂರು ಸುಂಟಿಕೊಪ್ಪ ಭಾಗದ ನಿವಾಸಿಗಳು ದೇವರಿಗೆ ವಿಶೇಷ ಸೇವಾದಿಗಳನ್ನು ಸಮರ್ಪಣೆ ಮಾಡುವ ಮೂಲಕ ಧನ್ಯತೆ ಮೆರೆಯುತ್ತಾರೆ. ಬೇರೆ ಬೇರೆ ಊರಿನ ಭಕ್ತರೂ ದೇವಾಲಯದಲ್ಲಿ ನಡೆಯುವ ವಿಶೇಷ ಪೂಜೆಗಳಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುತ್ತಾರೆ ದೇವಸ್ಥಾನ ಆಡಳಿತ ಮಂಡಳಿಯವರು.
ಹುತ್ತರಿ ಆಚರಣೆ: ಕೊಡಗಿನ ಹುತ್ತರಿ ಹಬ್ಬದಂದು ಈ ದೇವಾಲಯದ ಸುತ್ತ ಮುತ್ತಲ್ಲಿನ ಕೃಷಿ ಭೂಮಿಯಲ್ಲಿ ಬೆಳೆಸುವ ಭತ್ತದ ಪೈರನ್ನು ತಂದು ದೇವರಿಗೆ ಸಮರ್ಪಣೆ ಮಾಡಿ, ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ವಿತರಿಸುವ ಮೂಲಕ ಹುತ್ತರಿ ಹಬ್ಬ ಆಚರಿಸಲಾಗುತ್ತದೆ.
ಗ್ರಾಮದ ಹಿರಿಯರು, ದಾನಿಗಳ ಸಹಕಾರದಿಂದ ದೇವಾಲಯ ನಿರ್ಮಿಸಬೇಕೆಂಬ ಅಭಿಲಾಷೆ ಸ್ಥಳೀಯರದ್ದಾಗಿತ್ತು. ಇದಕ್ಕಾಗಿ ಗ್ರಾಮಸ್ಥರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಯಿತು. 2018ರಲ್ಲಿ ಜೀಣೋದ್ಧಾರದ ಪ್ರಕ್ರಿಯೆ ಚಾಲನೆಗೊಂಡಿತು. ಕೇರಳದ ತಂತ್ರಿ ವಿನಿತ್ ನಂಬೂದರಿ ಮುಂದಾಳತ್ವದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಆರ್. ದಿಲೀಪ್‌ಕುಮಾರ್ ಸಾರಥ್ಯದಲ್ಲಿ ಧಾರ್ಮಿಕ ವಿಧಿಗಳನ್ನು ಪ್ರಾರಂಭಿಸಲಾಯಿತು. ನಂತರದ ದಿನಗಳಲ್ಲಿ ಕೊವಿಡ್ ಆರಂಭಗೊಂಡಿದ್ದರಿಂದ ದೇವಾಲಯ ನಿರ್ಮಾಣ ಕಾರ್ಯ ಕೆಲಕಾಲ ಸ್ಥಗಿತಗೊಂಡಿತು. ಕೋವಿಡ್ ಮಹಾಮಾರಿ ತಣ್ಣಗಾಗುತ್ತಿದ್ದಂತೆಯೇ ಜೀರ್ಣೋದ್ಧಾರ ಕಾರ್ಯ ಮತ್ತೆ ಆರಂಭಗೊಂಡು 2022ರಲ್ಲಿ ದೇವಾಲಯವನ್ನು ಸೇವೆಗೆ ಸಮರ್ಪಣೆ ಮಾಡಲಾಯಿತು. ಸುಬ್ರಹ್ಮಣ್ಯ ಷಷ್ಠಿ ಮತ್ತು ವಾರ್ಷಿಕೋತ್ಸವ ದಿನಗಳಲ್ಲಿ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯ ಇಲ್ಲಿ ನಡೆಯುವುದು ಬಹು ವಿಶೇಷ.
ದೇವಾಲಯಕ್ಕೆ ಮೊದಲು 12 ಸೆಂಟು ಜಾಗವಿತ್ತು. ಬೆಂಗಳೂರಿನ ಉದ್ಯಮಿ ಶುಭಾಕರನ್ ಎಂಬವರು 26 ಸೆಂಟು ಜಾಗವನ್ನು ಖರೀದಿಸಿ ದಾನವಾಗಿ ನೀಡಿದ್ದಾರೆ. ಕೆ.ಆರ್. ದಿಲೀಪ್ ಕುಮಾರ್ 10 ಸೆಂಟು ಹಾಗೂ ಕೆ.ಆರ್. ಬಾಬು 15 ಸೆಂಟು ಜಾಗವನ್ನು ದೇಣಿಗೆ ನೀಡುವ ಮೂಲಕ ದೇವಾಲಯದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಭಾಗದ ಗ್ರಾಮೀಣ ಜನರೂ ತಮ್ಮದೇ ಆದ ಸೇವಾ ರೂಪದ ಕಾಣಿಕೆಗಳನ್ನು ನೀಡಿದ್ದಾರೆ. ಇವೆಲ್ಲವೂ ಭಕ್ತಿ ರೂಪದಲ್ಲಿ ಹರಿದು ಬಂದ ಕಾರಣ
ಮರು ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗಳು ನೆರವೇರಿದವು ಎನ್ನುತ್ತಾರೆ ಆಡಳಿತ ಮಂಡಳಿ ಪ್ರಮುಖರು. ಈ ದೇವಾಲಯದಲ್ಲಿ ಗಣಪತಿಯ ದೇವಸ್ಥಾನ, ಸುಬ್ರಹ್ಮಣ್ಯ, ಮುನೀಶ್ವರ ಹಾಗೂ ಗುಳಿಗನ ಸ್ಥಾನಗಳಿವೆ. ನೈವೇದ್ಯ ಕೊಠಡಿ, ಕಚೇರಿ, ಸಣ್ಣ ಸಭಾಂಗಣ, ಪಾಕಶಾಲೆಯನ್ನೂ ದೇವಾಲಯ ಒಳಗೊಂಡಿದೆ. ದೇವಾಲಯದ ಪ್ರಧಾನ ಅರ್ಚಕರಾಗಿ ಕಳೆದ 23 ವರ್ಷಗಳಿಂದ ಶ್ರೀನಿವಾಸ್ ಭಟ್ ಸೇವೆ ನಿರ್ವಹಿಸುತ್ತಿದ್ದಾರೆ. ಒಟ್ಟಾರೆ ಎಲ್ಲರ ಶ್ರದ್ಧೆ ಮತ್ತು ಭಕ್ತಿಯಿಂದ ದೇವಾಲಯದ ಜನಪ್ರಿಯತೆ ಹೆಚ್ಚಾಗಿದೆ.
ಕಾಳಿಮಾಡ ಸೋಮಯ್ಯ ಮಾರ್ಗದರ್ಶನದಲ್ಲಿ ದೇವಾಲಯ ಜೀರ್ಣೋದ್ಧಾರ ಸಮಿತಿ ಕಾರ್ಯಾಚರಣೆ ಆರಂಭಿಸಿತು. ಸುಂದರ ಪ್ರಕೃತಿಯ ಹಸಿರು ಕಾನನ ಪ್ರದೇಶದಲ್ಲಿ ಉದ್ಭವ ಬಸವೇಶ್ವರ ದೇವಸ್ಥಾನವನ್ನು ಕೇರಳದ ತಂತ್ರಿ ವಿನೀತ್ ನಂಬೂದರಿ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ವಿನ್ಯಾಸ ಗೊಳಿಸಲಾಯಿತು. ಸರ್ಕಾರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಮತ್ತು ಭಕ್ತರ ದೇಣಿಗೆಯಿಂದ ಈ ದೇವಾಲಯದ ಮರು ನಿರ್ಮಾಣ ಆಗಿದೆ.
ಕಾರ್ಯದರ್ಶಿ, ಉದ್ಭವ ಬಸವೇಶ್ವರ ದೇವಾಲಯ ಸಮಿತಿ
ಟಿಪ್ಪುವಿನಿಂದ ಹಾಳಾಗಿದ್ದ ಉದ್ಭವ ಬಸವೇಶ್ವರ ದೇವಾಲಯವನ್ನು ಮರು ನಿರ್ಮಾಣ ಮಾಡಬೇಕು ಎಂಬ ಕಾಳಜಿ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರ ದೊಡ್ಡ ತಂಡವನ್ನೇ ರಚಿಸಿಕೊಂಡು ಜೀರ್ಣೋದ್ಧಾರ ಕಾರ್ಯ ನಡೆಸಲಾಯಿತು. ಗ್ರಾಮಸ್ಥರು ಮತ್ತು ಆಡಳಿತ ಮಂಡಳಿಯ ಸರ್ವರ ಸಹಕಾರದಿಂದಲೇ ತೊಂಡೂರು ಗ್ರಾಮದಲ್ಲಿ ಸುಂದರವಾದ ಉದ್ಭವ ಬಸವೇಶ್ವರ ದೇವಸ್ಥಾನ ನಿರ್ಮಿಸಲು ಸಾಧ್ಯವಾಯಿತು. ಹಾಗಾಗಿ ಇದು ಶ್ರದ್ಧಾ ಕೇಂದ್ರವಾಗಿದೆ.
ಅಧ್ಯಕ್ಷ, ಉದ್ಭವ ಬಸವೇಶ್ವರ ದೇವಾಲಯ ಸಮಿತಿ, ತೊಂಡೂರು