ಸೋಮವಾರಪೇಟೆ ತಾಲೂಕು ಹಿಂದೂ ಮಲಯಾಳ ಸಮಾಜದ ವತಿಯಿಂದ ಪಟ್ಟಣದ ಜಾನಕಿ ಸಭಾಂಗಣದಲ್ಲಿ ನಡೆದ ಓಣಂ ಉತ್ಸವ ಹಾಗೂ ಸಂಘದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನಾಂಗ ಬಾಂಧವರು. 
ಕೊಡಗು

ಓಣಂ ಉತ್ಸವ, ಸಂಘದ ದಶಮಾನೋತ್ಸವ ಸಮಾರಂಭ

ಎ. ಆರ್. ರಘುರಾಮ
ವಿಜಯವಾಣಿ ಸುದ್ದಿಜಾಲ ಸೋಮವಾರಪೇಟೆ
ತಾಲೂಕು ಹಿಂದೂ ಮಲಯಾಳ ಸಮಾಜದ ವತಿಯಿಂದ ಪಟ್ಟಣದ ಜಾನಕಿ ಸಭಾಂಗಣದಲ್ಲಿ ಓಣಂ ಉತ್ಸವ ಹಾಗೂ ಸಂಘದ ದಶಮಾನೋತ್ಸವ ಸಮಾರಂಭ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಡಾ. ಮಂತರ್‌ಗೌಡ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಹಬ್ಬಗಳ ಆಚರಣೆಗಳು ಸಾಮರಸ್ಯದ ಸಂಕೇತವಾಗಿದ್ದು, ಸಾಮೂಹಿಕ ಆಚರಣೆಗಳು ಸಂಭ್ರಮವನ್ನು ಹೆಚ್ಚಿಸುತ್ತವೆ. ಹಿಂದೂ ಮಲಯಾಳ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಒದಗಿಸಲಾಗುವುದು ಎಂದರು.
ಸಮುದಾಯದ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಬೇಕು ಎಂದ ಅವರು, ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಗುರುವಾಯೂರು ಹಾಗೂ ಪರಶಿನಕಡವು ಕ್ಷೇತ್ರಕ್ಕೆ ಕೊಡಗಿನಿಂದ ಬಸ್ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ನಡೆಸಲಾಗುವುದು ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಎರ್ನಾಕುಲಂ ಶಿವಗಿರಿನಂದ ಮಠದ ಶ್ರೀ ಶಿವಸ್ವರೂಪಾನಂದ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಮನೆಯಿಂದಲೇ ಉತ್ತಮ ಸಂಸ್ಕಾರ ಕಲಿಸಬೇಕು. ಧಾರ್ಮಿಕತೆಯೊಂದಿಗೆ ಮಕ್ಕಳು ಬೆಳೆಯಬೇಕು. ದುಶ್ಚಟಗಳಿಂದ ದೂರವಿರುವಂತೆ ನೋಡಿಕೊಳ್ಳಬೇಕು. ಸಮುದಾಯದ ಹೆಣ್ಣುಮಕ್ಕಳ ರಕ್ಷಣೆಯಾಗಬೇಕು. ವಿವಾಹ ಸಂದರ್ಭದಲ್ಲಿ ಮತಾಂತರ, ಧರ್ಮಾಂತರ ಆಗದಂತೆ ಜಾಗ್ರತೆ ವಹಿಸಬೇಕು. ನಾವು ಎಷ್ಟೇ ಅದ್ದೂರಿ ಸಭೆ ಸಮಾರಂಭ ನಡೆಸಿದರೂ ಸಂಸ್ಕ ೃತಿಯ ಕೊಂಡಿ ಕಳಚಿದರೆ ಸಮುದಾಯ ಅಳಿಯುತ್ತದೆ ಎಂದು ಸಮುದಾಯ ಬಾಂಧವರಿಗೆ ಎಚ್ಚರಿಕೆ ನೀಡಿದರು.
ಹಿಂದೂ ಮಲಯಾಳ ಸಮಾಜದ ಅಧ್ಯಕ್ಷ ಅಧ್ಯಕ್ಷ ವಿ.ಎಂ. ವಿಜಯ, ಕೇರಳ ಕಾಂಞಂಗಾಡ್‌ನ ಗೃಹಸ್ಥಾಶ್ರಮ ಮಠಾಧೀಶರಾದ ಶ್ರೀ ಗಂಗಾಜೀ ನಾಯರ್ ಸ್ವಾಮೀಜಿ, ಮಾಜಿ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಹೈಕೋರ್ಟ್‌ನ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ, ರಾಜ್ಯ ಒಕ್ಕಲಿಗರ ಸಂಘದ ಕೊಡಗು ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ, ಚೌಡ್ಲು ವಿಎಸ್‌ಎಸ್‌ಎನ್ ಅಧ್ಯಕ್ಷ ಕೆ.ಟಿ. ಪರಮೇಶ್, ಹಿಂದೂ ಮಲಯಾಳ ಸಮಾಜದ ಪ್ರಮುಖರಾದ ಪಿ.ಡಿ. ಪ್ರಕಾಶ್ ಮತ್ತಿತರರು ಇದ್ದರು.
ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಸಮಾಜದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ಒದಗಿಸಲಾಯಿತು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಶ್ರೀ ಮುತ್ತಪ್ಪ ದೇವಾಲಯದಿಂದ ಪ್ರಮುಖ ಮಾರ್ಗದಲ್ಲಿ ಓಣಾಘೋಷ ಮೆರವಣಿಗೆ ನಡೆಯಿತು.
ಪಟ್ಟಣದಲ್ಲಿರುವ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಯಿತು. ಕೇರಳದ ಚೆಂಡೆ ವಾದ್ಯ ಹಾಗೂ ಬಲಿ ಚಕ್ರವರ್ತಿ ವೇಷಧಾರಿಗಳು ಗಮನ ಸೆಳೆದರು. ಮಲಯಾಳ ಸಮುದಾಯದ ಮಹಿಳೆಯರು ಹಾಗೂ ಪುರುಷರು ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.