ಕುಶಾಲನಗರ ಕೊಪ್ಪ ಗಡಿಭಾಗದ ಐತಿಹಾಸಿಕ ಸೇತುವೆಯ ಪುನಶ್ಚೇತನದ ಜತೆಗೆ ನಿರ್ಮಿಸಿದ ಕಾವೇರಿ ರೋಟರಿ ಉದ್ಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿದರು. ಕೆ.ಪಿ. ಚಂದ್ರಕಲಾ, ವಿ.ಪಿ. ಶಶಿಧರ್, ಮನುಪೆಮ್ಮಯ್ಯ, ಸಾತಪ್ಪನ್ ಮತ್ತಿತರರು ಇದ್ದರು.
ಕುಶಾಲನಗರದ ಬೈಚನಹಳ್ಳಿ ಬಳಿಯಿಂದ ಮುಳ್ಳುಸೋಗೆ ತನಕ ಕಾವೇರಿ ನದಿ ತೀರದಲ್ಲಿ ವಾಕ್ ಪಾತ್ ನಿರ್ಮಾಣದ ಬಗ್ಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಮೂಲಕ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಿಳಿಸಿದರು.
ಕುಶಾಲನಗರ ಕೊಪ್ಪ ಗಡಿಭಾಗದ ಐತಿಹಾಸಿಕ ಸೇತುವೆಯ ಪುನಶ್ಚೇತನದ ಜತೆಗೆ ನಿರ್ಮಿಸಿದ ಕಾವೇರಿ ರೋಟರಿ ಉದ್ಯಾನ ಉದ್ಘಾಟಿಸಿ ಬುಧವಾರ ಸಂಜೆ ಮಾತನಾಡಿದರು.
ಕುಶಾಲನಗರ ಪಟ್ಟಣದ ಕಾವೇರಿ ನದಿ ದಡದ ವ್ಯಾಪ್ತಿಯಲ್ಲಿ ಸುಮಾರು ಐದು ಕಿಲೋಮೀಟರ್ ಉದ್ದದ ವಾಕ್ ಪಾತ್ ನಿರ್ಮಾಣದ ಬೃಹತ್ ಯೋಜನೆ ಮೂಲಕ ಸ್ಥಳೀಯರಿಗೆ ಹೆಚ್ಚಿನ ಸೌಕರ್ಯ, ಅನುಕೂಲ ಕಲ್ಪಿಸುವ ಚಿಂತನೆಗೆ ಒತ್ತು ನೀಡಲಾಗುವುದು. ಕಳೆದ 25 ವರ್ಷಗಳಿಂದ ನಿರ್ವಹಣೆಯ ಕೊರತೆ ಎದುರಿಸುತ್ತಿದ್ದ ಐತಿಹಾಸಿಕ ಸೇತುವೆ ಸ್ವಚ್ಛಗೊಳಿಸಿ ಸರ್ಕಾರ ಮತ್ತು ಸ್ಥಳೀಯ ದಾನಿಗಳ ಸಹಕಾರದೊಂದಿಗೆ ಉದ್ಯಾನವನವಾಗಿ ಪರಿವರ್ತನೆ ಮಾಡಿ, ಸಮಾಜಕ್ಕೆ ಕೊಡುಗೆಯಾಗಿ ನೀಡಿರುವುದು ಶ್ಲಾಘನಾರ್ಹ. ನದಿ ಸ್ವಚ್ಛತಾ ಕಾರ್ಯಕ್ರಮಗಳ ಮೂಲಕ ಪ್ರಕೃತಿಯ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ.
ಶಾಸಕರ ಅನುದಾನ ಮೂಲಕ 10 ಲಕ್ಷ ರೂ. ಸೇರಿದಂತೆ ಒಟ್ಟು ಸುಮಾರು 30 ಲಕ್ಷ ರೂ. ಹಣವನ್ನು ಸಾರ್ವಜನಿಕ ವಲಯದಿಂದ ಸಂಗ್ರಹಿಸಿ ಬಳಕೆ ಮಾಡುವ ಮೂಲಕ ರೋಟರಿ ಸಂಸ್ಥೆ ಉತ್ತಮ ಕೆಲಸ ಮಾಡಿ ಕುಶಾಲನಗರ ಸಾರ್ವಜನಿಕ ವಲಯಕ್ಕೆ ಒಪ್ಪಿಸಿದ್ದಾರೆ ಎಂದರು.
ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ ಸೇತುವೆ ಸಂರಕ್ಷಣೆ ಮೂಲಕ ಜನರಿಗೆ ಉತ್ತಮ ಉದ್ಯಾನವನ ನಿರ್ಮಿಸಿದ ರೋಟರಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. ರೋಟರಿ ಅಧ್ಯಕ್ಷ ಮನುಪೆಮ್ಮಯ್ಯ ನೇತೃತ್ವದಲ್ಲಿ ನಡೆದ ಈ ಸೇತುವೆ ಉದ್ಯಾನವನ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಮನು ಪೆಮ್ಮಯ್ಯ ಮಾತನಾಡಿ ಬಹಳ ಕಾಲದವರೆಗೆ ನೆನಪಿನಲ್ಲಿ ಉಳಿಯುವ ಯೋಜನೆ ಇದಾಗಿದೆ.
ಕುಶಾಲನಗರ ಗಡಿಭಾಗದ ಕಾವೇರಿ ನದಿ ಮೇಲೆ ಸುಮಾರು 179 ವರ್ಷಗಳ ಹಿಂದೆ ಬ್ರಿಟಿಷರ ಕಾಲದ ಅವಧಿಯಲ್ಲಿ ಅಂದಿನ ಕಮಿಷನರ್ ಕಬ್ಬನ್ ನೇತೃತ್ವದಲ್ಲಿ ನಿರ್ಮಿಸಲಾದ ಸೇತುವೆ, ಕಳೆದ 25 ವರ್ಷಗಳ ಹಿಂದೆ ಪಕ್ಕದಲ್ಲಿ ನೂತನ ಸೇತುವೆ ನಿರ್ಮಾಣ ಸಂದರ್ಭ ಸ್ಥಳೀಯ ಪ್ರಮುಖರು ಉಳಿಸಿ ಸಂರಕ್ಷಿಸಿದ್ದು ಕುಶಾಲನಗರ ರೋಟರಿ ಸಂಸ್ಥೆ ಮೂಲಕ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಮತ್ತು ಸ್ಥಳೀಯ ದಾನಿಗಳ ಸಹಕಾರದೊಂದಿಗೆ ಉದ್ಯಾನವನವಾಗಿ ಪರಿವರ್ತಿಸಲಾಗಿದೆ. ಇಡೀ ದೇಶದಲ್ಲಿ ಉದ್ಯಾನವನವು ಹರಿಯುವ ನದಿಯ ಮೇಲ್ಭಾಗದಲ್ಲಿ ನಿರ್ಮಾಣಗೊಂಡಿರುವುದು ಅಪರೂಪದಾಗಿದೆ.
ಸೇತುವೆಯನ್ನು ಸ್ವಚ್ಛಗೊಳಿಸಿ, ಎರಡೂ ಬದಿಯಲ್ಲಿ ಕಮಾನು ರೂಪ ಬರುವಂತೆ ಗ್ರಿಲ್‌ಗಳ ರಚನೆ ಮಾಡಿ, ನೆಲಕ್ಕೆ ಟೈಲ್ ಅಳವಡಿಸಿ ಸೇತುವೆಯನ್ನು ಉದ್ಯಾನವನವಾಗಿ ನಿರ್ಮಿಸಲಾಗಿದೆ. ಉದ್ಯಾನವನದ ನಿರ್ವಹಣೆಗೆ ಕುಶಾಲನಗರ ಪುರಸಭೆ ಮೂಲಕ ಯೋಜನೆ ರೂಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್, ಹಿರಿಯರಾದ ಬಾಚರಣಿಯಂಡ ಅಪ್ಪಣ್ಣ, ಕೆ.ಪಿ. ಚಂದ್ರಕಲಾ, ವಕೀಲ ಆರ್.ಕೆ. ನಾಗೇಂದ್ರ ಬಾಬು, ದಾನಿಗಳಾದ ಎಸ್‌ಎಲ್‌ಎನ್ ಸಂಸ್ಥೆಯ ಸಾತಪ್ಪನ್, ಪಿ.ಆರ್.ಸಿ. ಮಾಲೀಕರಾದ ಪುರುಷೋತ್ತಮ ರೈ, ಮಹಾರಾಜ ಟೈಲ್ಸ್ನ ರಾಜೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಬಿ. ಭಾರತೀಶ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಭಾರವಿ ಸಂಸ್ಥೆಯ ರವಿಚಂದ್ರನ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ರೋಟರಿ ಸಂಸ್ಥೆಯ ಸಹಾಯಕ ಪ್ರಾಂತಪಾಲ ಉಲ್ಲಾಸ್ ಕೃಷ್ಣ ಮತ್ತಿತರರು ಇದ್ದರು.