ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಕುಶಾಲನಗರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಮತ್ತು ಕಾವೇರಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅವರಿಗೆ ಕಾಯಕ ಯೋಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾಜದ ಸ್ವಾಸ್ಥ್ಯ ಕಾಪಾಡುವ ಹಾಗೂ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳ ಕುರಿತು ಜನತೆಗೆ ನೈಜ ಸಂಗತಿ ತಿಳಿಸುವ ಕೆಲಸವನ್ನು ಮಾಡುವಲ್ಲಿ
ಪತ್ರಿಕೆಗಳ ಪಾತ್ರ ದೊಡ್ಡದು ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು. ಕರ್ನಾಟಕ ಪತ್ರಕರ್ತರ ಸಂಘ ಮತ್ತು ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್ ವತಿಯಿಂದ ಇಲ್ಲಿನ ಎ.ಪಿ.ಸಿ.ಎಂ.ಎಸ್. ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಗುರುವಾರ ನಡೆದ ಪತ್ರಿಕಾ ದಿನಾಚರಣೆ ಅಂಗವಾಗಿ ನಡೆದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಮತ್ತು ಬ್ಯಾಗ್ ವಿತರಣೆ, ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಕಾವೇರಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ, ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಮಹತ್ತರ ಜವಾಬ್ದಾರಿ ಹೊತ್ತಿರುವ ಪತ್ರಿಕಾ ಮಾಧ್ಯಮ ಮತ್ತು ಪತ್ರಕರ್ತರು ಸಮಾಜದ ಬೆಳವಣಿಗೆಗೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಉತ್ತಮ ಶಿಕ್ಷಣದ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಾ ಪ್ರಗತಿಪರ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದರು.
ನಿವೃತ್ತ ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್ ಮಾತನಾಡಿ, ಸಮಾಜದಲ್ಲಿ ನಡೆಯುವ ನೈಜ ಸಂಗತಿಗಳನ್ನು ಕನ್ನಡಿಯಂತೆ ಜನರ ಮುಂದೆ ಇಡುವ ಪತ್ರಿಕಾ ಮಾಧ್ಯಮವು ಓದುಗರ ವಿಶ್ವಾಸ ಗಳಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ಕ್ಷಣಮಾತ್ರದ ಸುದ್ದಿಗಳು ಪ್ರಚಲಿತವಾಗುತ್ತಿದ್ದರೂ ಪತ್ರಿಕಾ ಮಾಧ್ಯಮಕ್ಕೆ ಹೆಚ್ಚಿನ ಮನ್ನಣೆ ಸಿಗುತ್ತಿದೆ ಎಂದು ಹೇಳಿದರು.
ಉದ್ಯಮಿ ಮನು ಪೆಮ್ಮಯ್ಯ ಮಾತನಾಡಿ, ಸಮಾಜಮುಖಿ ಕೆಲಸ ಮಾಡುವವರನ್ನು ಗುರುತಿಸಿ ಪ್ರೋತ್ಸಾಹಿಸಿ ಸನ್ಮಾನಿಸುತ್ತಿರುವುದು ಉತ್ತಮ ಕೆಲಸ ಎಂದರು.
ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಇಂದು ನಾವು ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪ್ರಾಕೃತಿಕ ಸವಾಲುಗಳನ್ನು ಎದುರಿಸಬೇಕಿದೆ ಎಂದು ಹೇಳಿದರು
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಚ್.ಎಂ. ರಘು ಮಾತನಾಡಿ, ಸಮಾಜಿಮುಖಿ ಕೆಲಸಗಳನ್ನು ಮಾಡುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯವಾಗಿದೆ ಎಂದರು.
ಸಂಘದ ಕೋಶಾಧಿಕಾರಿ ಭರಮಣ್ಣ ಟಿ.ಬೆಟಗೇರಿ, ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಡಿ.ಆರ್. ಪ್ರಭಾಕರ್, ಸಮಾಜ ಸೇವಕಿ ಪುಷ್ಪಾ, ಅನುಗ್ರಹ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ ಬಿ.ಡಿ. ಚೈತ್ರ, ದಸಂಸ(ಅAಬೇಡ್ಕರ್ ಮಾರ್ಗ) ಜಿಲ್ಲಾಧ್ಯಕ್ಷ ಕೆ.ಬಿ. ರಾಜು, ವೈದ್ಯ ಡಾ ಗಯಾ ಕುಶಲ್, ಕಾವೇರಿ ಕನ್ನಡ ಸಂಘದ ಅಧ್ಯಕ್ಷ ಬಬೀಂದ್ರ ಪ್ರಸಾದ್, ವಿಜಯೇಂದ್ರ, ಶಿಕ್ಷಕಿ ಎಚ್.ಎಸ್. ರಶ್ಮಿ ಇತರರು ಇದ್ದರು.
ಇದೇ ವೇಳೆ ಸಂಘದ ವತಿಯಿಂದ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅವರಿಗೆ ಕಾಯಕ ಯೋಗಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 19 ಮಂದಿಗೆ ಸಂಘದ ವತಿಯಿಂದ ಕಾವೇರಿ ರತ್ನ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು.