ಅವರೆಮಾದಂಡ ಶರಣ್ ಪೂಣಚ್ಚ ದತ್ತಿನಿಧಿ ಸ್ವೀಕಾರ, ಶಿಕ್ಷಣದ ಬೆಳಕು ಕಥಾಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಟಿ.ಪಿ.ರಮೇಶ್ ಅವರು ಉದ್ಘಾಟಿಸಿದರು. ಕೇಶವ ಕಾಮತ್, ಈರಮಂಡ ಹರಿಣಿ ವಿಜಯ್ ಇತರರಿದ್ದರು.
- ಸಾಹಿತ್ಯಾಭಿರುಚಿ ಬೆಳೆಸಲು ದತ್ತಿನಿಧಿ ಸಹಕಾರಿ
- ಕಸಾಪ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಕೇಶವ ಕಾಮತ್
ಮಡಿಕೇರಿ: ಸಾಹಿತ್ಯಾಭಿರುಚಿ ಬೆಳೆಸಲು ಮತ್ತು ಸಾಹಿತ್ಯ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿಸಲು ದತ್ತಿನಿಧಿ ಸ್ಥಾಪನೆ ಸಹಕಾರಿಯಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲ್ಲೂಕು ಹಾಗೂ ಎಂ.ಇ.ಎಸ್ ಪ್ರೌಢಶಾಲೆ ಮೂರ್ನಾಡು ಇವರ ಸಂಯುಕ್ತ ಆಶ್ರಯದಲ್ಲಿ ಪ್ರೌಢಶಾಲೆಯ ಕಾವೇರಿ ಸಭಾಂಗಣದಲ್ಲಿ ನಡೆದ ಅವರೆಮಾದಂಡ ಶರಣ್ ಪೂಣಚ್ಚ ದತ್ತಿನಿಧಿ ಸ್ವೀಕಾರ, ಶಿಕ್ಷಣದ ಬೆಳಕು ಕಥಾಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಹಿತ್ಯ, ಸಮಾಜ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸುವುದು ಉತ್ತಮ ಪರಂಪರೆಯಾಗಿದೆ. ಇಂತಹ ದತ್ತಿನಿಧಿಗಳ ಮೂಲಕ ಸಾಹಿತ್ಯಾಸಕ್ತರಿಗೆ ಹಾಗೂ ಸಮಾಜದ ವಿವಿಧ ವರ್ಗಗಳಿಗೆ ಪ್ರೋತ್ಸಾಹ ನೀಡಲು ಸಾಧ್ಯವಾಗುತ್ತದೆ ಎಂದರು.
ರಾಜ್ಯದಲ್ಲಿ ಈಗಾಗಲೇ ೩ ಸಾವಿರಕ್ಕೂ ಅಧಿಕ ದತ್ತಿನಿಧಿ ಕಾರ್ಯಕ್ರಮಗಳು ನಡೆದಿದ್ದು, ಕೊಡಗು ಜಿಲ್ಲೆಯಲಿ ೪೫ ದತ್ತಿನಿಧಿಗಳು ಸ್ಥಾಪನೆಯಾಗಿವೆ. ಶಾಲಾ-ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಅಂಗನವಾಡಿ ಶಿಕ್ಷಕರು ಹಾಗೂ ಕಾರ್ಯಕರ್ತರಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ಅಭಿರುಚಿ ಬೆಳೆಸುವ ಉದ್ದೇಶದಿಂದ ರೂ.೫೦ ಸಾವಿರ ದತ್ತಿನಿಧಿ ಸ್ಥಾಪಿಸಿರುವುದು ಶ್ಲಾಘನೀಯ ಕಾರ್ಯ ಎಂದರು.
ಅಂಗನವಾಡಿ ಶಿಕ್ಷಕರಿಗಾಗಿ ರೂ.೫೦ ಸಾವಿರ ಮೊತ್ತದ ದತ್ತಿನಿಧಿ ಸ್ಥಾಪಿಸಿದ ಅವರೆಮಾದಂಡ ಶರಣ್ ಪೂಣಚ್ಚ ಅವರು ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯದ ಉಳಿವು ಹಾಗೂ ಬೆಳವಣಿಗೆಗಾಗಿ ಮೂರ್ನಾಡು ಹೋಬಳಿ ಘಟಕ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಅಂಬೆಗಾಲಿಡುವ ಮಗುವನ್ನು ಸಮಾಜಕ್ಕೆ ಪರಿಚಯಿಸುವವರು ಅಂಗನವಾಡಿ ಶಿಕ್ಷಕರು. ಮಗುವಿನ ಕೈಗೆ ಬಳಪ ಹಿಡಿಸಿ ಅಕ್ಷರ ಕಲಿಸುವ ಮೂಲಕ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಅಂಗನವಾಡಿ ಶಿಕ್ಷಕರು ಹಾಗೂ ಕಾರ್ಯಕರ್ತರಿಗೆ ಸಣ್ಣ ಕಾಣಿಕೆಯಾಗಿ ಈ ದತ್ತಿನಿಧಿಯನ್ನು ಸ್ಥಾಪಿಸುತ್ತಿರುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್, ಅಂಗನವಾಡಿ ಶಿಕ್ಷಕರು ಹಾಗೂ ಕಾರ್ಯಕರ್ತರು ಮಕ್ಕಳಲ್ಲಿ ಜ್ಞಾನದ ಬೀಜ ಬಿತ್ತುವ ಮಹತ್ವದ ಸೇವೆ ಮಾಡುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಸಾಹಿತ್ಯಾಭಿರುಚಿ ಬೆಳೆಸುವ ಉದ್ದೇಶದಿಂದ ದತ್ತಿನಿಧಿ ಸ್ಥಾಪಿಸಿರುವುದು ಶ್ಲಾಘನಾರ್ಹ. ಮೂರ್ನಾಡು ಹೋಬಳಿ ಘಟಕದಲ್ಲಿ ಇದು ಎರಡನೇ ದತ್ತಿನಿಧಿಯಾಗಿದ್ದು, ಈ ಹಿಂದೆ ಹೋಬಳಿಯ ಶಿಕ್ಷಕರಿಗಾಗಿ ದತ್ತಿನಿಧಿ ಸ್ಥಾಪಿಸಲಾಗಿತ್ತು ಎಂದು ತಿಳಿಸಿದರು.
ಮುಂಬರುವ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ಸೇರಿದಂತೆ ಹಲವು ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹರಿಣಿ ವಿಜಯ್ ತಿಳಿಸಿದರು.
ಕನ್ನಡ ಸಾಹಿತ್ಯ ಪರಿತ್ತಿನ ಸದಸ್ಯತ್ವ ಅಭಿಯಾನಕ್ಕೂ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು ಸದಸ್ಯತ್ವ ಅರ್ಜಿಯನ್ನು ಕರವಂಡ ಸುಮಿತಾ ಪೊನ್ನಮ್ಮ ಅವರಿಗೆ ನೀಡಿ ಸದಸ್ಯತ್ವ ಸ್ವೀಕರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ೩೦ಕ್ಕೂ ಅಧಿಕ ಮಂದಿ ಕನ್ನಡಾಭಿಮಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಎಂ.ಇ.ಎಸ್. ಶಾಲೆಯ ಗೌರವ ಕಾರ್ಯದರ್ಶಿ ಪುದಿಯೋಕ್ಕಡ ಹರೀಶ್ ದೇವಯ್ಯ, ಮಠದಮನೆ ಧನಂಜಯ, ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್, ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲೆ ದಂಬೆಕೋಡಿ ಸುಶೀಲ, ಈರಮಂಡ ವಿಜಯ್, ಸಂಘಟನೆ ಕಾರ್ಯದರ್ಶಿ ಅಬ್ದುಲ್ ಖಾದರ್, ಪದಾಧಿಕಾರಿ ಪುದಿಯೊಕ್ಕಡ ರಮ್ಯ ವಿಪನ್, ಮಹಮ್ಮದ್ ಕಡಂಗ, ತೇಲಪಂಡ ಗುಲ್ಶನ್, ದಿನೇಶ್ ಪೆಗ್ಗೋಳಿ, ಮಹಿಳಾ ಪ್ರತಿನಿಧಿ ಮೀನಾಕ್ಷಿ ಕೇಶವ್, ಮರಗೋಡು ಶ್ರೀ ಗಣಪತಿ ದೇವಸ್ಥಾನ ಭಜನಾ ಮಂಡಳಿಯ ಸದಸ್ಯರು ಸೇರಿದಂತೆ ಕಸಾಪ ಸದಸ್ಯರು, ಅಂಗನವಾಡಿ ಶಿಕ್ಷಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ನಂತರ ಮೂರ್ನಾಡು ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.