ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ರಕ್ಷಾಬಂಧನ ಆಚರಿಸಲಾಯಿತು. ಎಂ.ಪಿ. ಕೇಶವ ಕಾಮತ್, ಧನಲಕ್ಷ್ಮಿ, ರಮಾ, ಪುದಿಯನೆರವನ್ನು ರೇವತಿ ರಮೇಶ್ ಮತ್ತಿತರರು ಇದ್ದರು. 
ಕೊಡಗು

ಕಸಾಪ ಕಾರ್ಯಕಾರಿ ಮಂಡಳಿ ಸಭೆ

ಮಡಿಕೇರಿ:
ಇಲ್ಲಿನ ಕೊಡಗು ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದ ಕಾರ್ಯಕಾರಿ ಮಂಡಳಿ ಸಭೆ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅಧ್ಯಕ್ಷತೆಯಲ್ಲಿ ಈಚೆಗೆ ನಡೆಯಿತು. ಸಭೆಯಲ್ಲಿ ಗೌರವ ಕಾರ್ಯದರ್ಶಿ ಪುದಿಯನೆರವನ್ನು ರೇವತಿ ರಮೇಶ್ ವಾರ್ಷಿಕ ವರದಿ ಮಂಡಿಸಿದರು. ಕಳೆದ ವರ್ಷದಲ್ಲಿ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದ ಪದಾಧಿಕಾರಿಗಳ, ವಿಶೇಷ ಆಹ್ವಾನಿತರ ಮತ್ತು ಸದಸ್ಯರ ಸಭೆಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಇದರ ಜೊತೆಗೆ 6 ಕಾರ್ಯಕಾರಿ ಸಮಿತಿ ಸಭೆಗಳು, 12 ಪದಾಧಿಕಾರಿಗಳ ಸಭೆಗಳು, 1 ಜಿಲ್ಲಾ ಸಮ್ಮೇಳನ ಹಾಗೂ 3 ತಾಲೂಕು ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥಾಪನಾ ದಿನಾಚರಣೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ದಿನಾಚರಣೆಗಳ ಜೊತೆಗೆ 37 ದತ್ತಿನಿಧಿ ಕಾರ್ಯಕ್ರಮಗಳು ಮತ್ತು 15 ರಾಜ್ಯೋತ್ಸವ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಯಿತು.
ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್ ಇದೇ ವೇಳೆ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. 2026-27ನೇ ಸಾಲಿನಲ್ಲಿ ಒಟ್ಟು 38 ದತ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇವುಗಳನ್ನು ಸೆಪ್ಟೆಂಬರ್ ಒಳಗಾಗಿ ಪೂರ್ಣಗೊಳಿಸುವಂತೆ ತಾಲೂಕು ಮತ್ತು ಹೋಬಳಿ ಸಮಿತಿಗಳಿಗೆ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಸೂಚಿಸಿದರು. ಸಭೆಯಲ್ಲಿ ಮುಂದಿನ ಕಾರ್ಯಕ್ರಮಗಳ ಕುರಿತು ಸುದೀರ್ಘ ಚರ್ಚೆ ನಡೆಸಿ, ಸಾಹಿತ್ಯ ಪರಿಷತ್ ವತಿಯಿಂದ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಯಿತು.
ಸಭೆಯ ಕೊನೆಯಲ್ಲಿ ಆಗಮಿಸಿದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಡಿಕೇರಿ ಘಟಕದ ಧನಲಕ್ಷ್ಮಿ ಮತ್ತು ರಮಾ ಸಭೆಯಲ್ಲಿದ್ದ ಎಲ್ಲರಿಗೂ ರಾಕಿ ಕಟ್ಟಿ ರಕ್ಷಾಬಂಧನದ ಶುಭ ಸಂದೇಶ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್, ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಜಿಲ್ಲಾ ಸಹಕಾರ್ಯದರ್ಶಿ ಎ.ವಿ. ಮಂಜುನಾಥ್, ಜಿಲ್ಲಾ ನಿರ್ದೇಶಕ ಹೆಚ್.ಎಸ್. ಪ್ರೇಮ್ ಕುಮಾರ್, ಐಗೂರು ಹೋಬಳಿ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್, ಕೊಡ್ಲಿಪೇಟೆ ಹೋಬಳಿ ಅಧ್ಯಕ್ಷ ಬಿ.ಪಿ. ಶಾಂತಮಲ್ಲಪ್ಪ, ಸೋಮವಾರಪೇಟೆ ತಾಲೂಕು ಗೌರವ ಕಾರ್ಯದರ್ಶಿ ಎ.ಪಿ. ವೀರರಾಜ್ ಹಾಗೂ ಕುಶಾಲನಗರ ತಾಲೂಕು ಗೌರವ ಕೋಶಾಧಿಕಾರಿ ಕೆ.ವಿ. ಉಮೇಶ್ ಸಭೆಯಲ್ಲಿ ಇದ್ದರು.