16ನೇ ಹಾಕಿ ಇಂಡಿಯಾ ಜೂನಿಯರ್ ಮಹಿಳೆಯರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್-2026 ಕ್ರೀಡಾಕೂಟದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕರ್ನಾಟಕ ತಂಡ. ಗಣಪತಿ ಮತ್ತು ಮೇರಿ ಇದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಆಗಸ್ಟ್ 12ರಿಂದ ಆರಂಭವಾಗಿರುವ 16ನೇ ಹಾಕಿ ಇಂಡಿಯಾ ಜೂನಿಯರ್ ಮಹಿಳೆಯರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್-2026 ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಭರ್ಜರಿ ಪ್ರದರ್ಶನ ನೀಡಿದ್ದು ಎ ಪೂಲ್‌ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕ ರಾಜ್ಯ ಜೂನಿಯರ್ ಮಹಿಳಾ ಹಾಕಿ ತಂಡದ ನಾಯಕಿ ಸೇರಿದಂತೆ ಕೊಡಗಿನವರೇ 9 ಮಂದಿ ಆಟಗಾರರನ್ನು ಒಳಗೊಂಡಿದ್ದು ಪುಣೆಯ ಮೇಜರ್ ದಯಾನಂದ ಪೋಲಿಯರ್ ಹಾಕಿ ಸ್ಟೇಡಿಯಂನಲ್ಲಿ ನಡೆದ 4 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ದಾಖಲೆಯ ಸಾಧನೆ ಮಾಡಿದೆ.
ಬಿಹಾರ್ ವಿರುದ್ಧ 2-1 ತಮಿಳುನಾಡು ವಿರುದ್ಧ 5-1 ಉತ್ತರಾಖಂಡ ವಿರುದ್ಧ 6-1 ಹಾಗೂ ಗೋವಾ ವಿರುದ್ಧ 9-0 ಗೋಲುಗಳ ಅಂತರದಿAದ ಕರ್ನಾಟಕ ತಂಡ ಗೆಲುವು ಸಾಧಿಸಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ಆಲ್ ಇಂಡಿಯಾ ಹಾಕಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದುಕೊಂಡಿದ್ದ ಕೊಡಗಿನ ಆಟಗಾರ್ತಿಯರು, ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲೂ ಅದೇ ಪ್ರದರ್ಶನ ಮುಂದುವರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಾಯಕಿ ಕೊಡಗಿನ ಮನೀಶ್ ಪೊನ್ನಮ್ಮ, ಉಪನಾಯಕಿ ಪ್ರತೀಕ್ಷಾ ಹಾಗೂ ಆಟಗಾರರಾದ ದಿಶಾ ನಿಡ್ಯಮಲೆ, ಚಂದನ ತಡಿಯಪ್ಪನ, ಪರ್ಲಿನ್ ಪೊನ್ನಮ್ಮ, ಮೋನಿಕಾ ನಾಣಯ್ಯ, ಅಕ್ಷಿತಾ, ಗಗನ ಹಾಗೂ ಪುಣ್ಯ ಗಮನ ಸೆಳೆಯುವ ಆಟವಾಡಿದರು.
ಕರ್ನಾಟಕ ಹಾಕಿ ತಂಡದ ತರಬೇತುದಾರರಾದ ಪೊನ್ನಂಪೇಟೆಯ ಗಣಪತಿ ಮತ್ತು ಮೆನೇಜರ್ ಮೇರಿ ಮಾರ್ಗದರ್ಶನದಲ್ಲಿ ಕರ್ನಾಟಕ ತಂಡ ಈ ಸಾಧನೆ ಮಾಡಿದೆ.