ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೊಡಗು ಜಿಲ್ಲಾ ಘಟಕ, ಸಂಗಮ ಟಿ.ವಿ. ಹಾಗೂ ವಂಶಿ ನ್ಯೂಸ್ ಸಹಯೋಗದೊಂದಿಗೆ ಕುಶಾಲನಗರದಲ್ಲಿ ನಡೆದ ಕನ್ನಡ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಸಾಧಕರಿಗೆ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೊಟ್ರೇಶ್ ಎಸ್ .ಉಪ್ಪಾರ, ಹೆಚ್.ಎಂ. ರಘು, ಸದಾಶಿವ ಸ್ವಾಮೀಜಿ, ಬಿ.ಎ. ದಿನೇಶ್ ಶೆಟ್ಟಿ, ಮೀನಾಕ್ಷಿ ಮತ್ತಿತರರು ಇದ್ದರು.
ಕನ್ನಡ ಭಾಷೆಯನ್ನು ಬೆಳೆಸುವ ಅಗತ್ಯವಿಲ್ಲ ನಾವು ಬಳಸಿದರೆ ಸಾಕು ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್ .ಉಪ್ಪಾರ ಹೇಳಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೊಡಗು ಜಿಲ್ಲಾ ಘಟಕ, ಸಂಗಮ ಟಿ.ವಿ. ಹಾಗೂ ವಂಶಿ ನ್ಯೂಸ್ ಸಹಯೋಗದೊಂದಿಗೆ ಕನ್ನಡ ಸುವರ್ಣ ಸಂಭ್ರಮ ಅಂಗವಾಗಿ ಕುಶಾಲನಗರದ ಎ.ಪಿ.ಸಿ.ಎಂ.ಎಸ್. ಕನ್ವೆನ್ಸನ್ ಸಭಾಂಗಣದಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಕನ್ನಡ ಭಾಷೆ ಅನ್ನದ ಭಾಷೆಯಾಗಬೇಕು. ನೇಮಕಾತಿಗಳಲ್ಲಿ ಕನ್ನಡ ಭಾಷಿಕರಿಗೆ ಆದ್ಯತೆ ಸಿಗಬೇಕು. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಪ್ರತ್ಯೇಕ ಮೀಸಲಾತಿ ಸಿಗಬೇಕು. ಕನ್ನಡ ಸಾಹಿತ್ಯ ಪರಂಪರೆ ಬಹಳ ಅಭೂತಪೂರ್ವವಾದದ್ದು. ವಿಶಿಷ್ಟವಾದ ಈ ಭಾಷೆಯಲ್ಲಿರುವ ಪ್ರಭೇದ, ಪ್ರಾಕಾರಗಳು, ಷಟ್ಪದಿ, ರಗಳೆಗಳಂಥ ಸಾಹಿತ್ಯ ಬೇರೆ ಯಾವ ಭಾಷೆಗಳಲ್ಲಿ ಕಾಣಸಿಗಲು ಸಾಧ್ಯವಿಲ್ಲ. ಜನಪದ ಸಾಹಿತ್ಯ ಮತ್ತು ವಚನ ಸಾಹಿತ್ಯಗಳು ಕನ್ನಡ ಸಾಹಿತ್ಯಕ್ಕೆ ಮಹತ್ತರವಾದ ಅಡಿಪಾಯ ಹಾಕಿದವು. ಜನಪದರು, ಶರಣರು ಅನುಭಾವದ ನೆಲೆಯಲ್ಲಿ ಸಾಹಿತ್ಯವನ್ನು ಕಟ್ಟಿ ಬೆಳೆಸಿದರು.
ಕೊಡಗಿನಲ್ಲಿ ಕೊಡಗಿನ ಗೌರಮ್ಮ ಮೊದಲನೇ ತಲೆಮಾರಿನ ಕಥೆಗಾರ್ತಿಯಾಗಿದ್ದರು. ಕರ್ನಾಟಕದಲ್ಲಿ ಕನ್ನಡ ಭಾಷೆಯ ಜತೆಗೆ ಅನೇಕ ಉಪಭಾಷೆಗಳಿವೆ. ಆದ್ದರಿಂದ ಇದು ಕನ್ನಡ ರಾಜ್ಯೋತ್ಸವ ಮಾತ್ರವಲ್ಲ ಕರ್ನಾಟಕದ ರಾಜ್ಯೋತ್ಸವ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಕೊಡ್ಲಿಪೇಟೆಯ ಶ್ರೀ ಕ್ಷೇತ್ರ ಕಿರಿಕೊಡ್ಲಿ ಮಠದ ಶ್ರೀ ಸದಾಶಿವಸ್ವಾಮೀಜಿ, ಕನ್ನಡ ಭಾಷೆ, ನೆಲ ಜಲದ ಉಳಿವಿಗಾಗಿ ಈ ನಾಡಿನ ಅನೇಕ ಕನ್ನಡ ಪರ ಸಂಘಟನೆಗಳು ನಿರಂತರ ಹೋರಾಟದಲ್ಲಿ ತೊಡಗಿಸಿಕೊಂಡಿವೆ. ಆ ನಿಟ್ಟಿನಲ್ಲಿ ಎಲೆ ಮರೆಯ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿರುವ ಅನೇಕ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನಿಸುತ್ತಿರುವುದು ಪ್ರಶಂಸನೀಯ ಎಂದರು.
ಸಾಹಿತಿ ಉ.ರಾ. ನಾಗೇಶ್ ಮಾತನಾಡಿ ರಂಗಭೂಮಿ, ಬಯಲಾಟ, ಹರಿಕಥೆ, ವಚನ ಸಾಹಿತ್ಯ, ದಾಸ ಸಾಹಿತ್ಯ ಮುಂತಾದವುಗಳು ಭಾಷೆಯನ್ನು ಕಟ್ಟಿ ಸಮೃದ್ಧವಾಗಿ ಬೆಳೆಸುವಲ್ಲಿ ಆಮೂಲಾಗ್ರ ಕೊಡುಗೆ ನೀಡಿವೆ. ಎಲ್ಲಿ ಭಾಷೆ ನಾಶವಾಗುತ್ತಾ ಹೋಗುವುದೋ ಅಲ್ಲಿ ಸಂಸ್ಕೃತಿ ವಿನಾಶದತ್ತ ಸಾಗುತ್ತದೆ. ಈ ನಿಟ್ಟಿನಲ್ಲಿ ಅನ್ಯ ಭಾಷೆಗಳಿಗೆ ಗೌರವ ನೀಡುವುದರೊಂದಿಗೆ ಮಾತೃ ಭಾಷೆ ಕನ್ನಡವನ್ನು ಬಳಸಿ ಉಳಿಸಿ ಬೆಳಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಗಮ ಟಿ.ವಿ. ಮತ್ತು ವಂಶಿ ನ್ಯೂಸ್ ಸಂಪಾದಕ ಹೆಚ್.ಎಂ. ರಘು ಕೋಟಿ ಮಾತನಾಡಿ
ಕನ್ನಡ ಭಾಷೆ, ಸಂಸ್ಕೃತಿ ಉಳಿವಿಗಾಗಿ ತೆರೆಮರೆಯಲ್ಲಿ ಶ್ರಮಿಸುವ ಕನ್ನಡದ ಕಟ್ಟಾಳುಗಳನ್ನು ಗುರುತಿಸಿ ಸನ್ಮಾನಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಪ್ರಶಸ್ತಿ ಪುರಸ್ಕಾರಗಳು ಲಾಬಿಗಳಾಗಬಾರದು. ಅದು ನಿಜವಾದ ಅರ್ಹರಿಗೆ ಲಭಿಸುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಆಟೋ ಚಾಲಕರು ಹಾಗೂ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಡುವೆ ಕಾವ್ಯ ವಾಚನ, ಶಾಲಾ ಮಕ್ಕಳ ನೃತ ಪ್ರದರ್ಶನ, ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಮುಂತಾದ ಕಾರ್ಯಕ್ರಮಗಳು ನಡೆದವು.
ಕುಶಾಲನಗರ ತಹಸೀಲ್ದಾರ್ ಕಿರಣ್ ಜೆ. ಗೌರಯ್ಯ, ಕನ್ನಡದ ಕಿರುತೆರೆ ಕಲಾವಿದೆ ಎಚ್.ಎಂ. ಮೀನಾಕ್ಷಿ, ಮುಂಬೈನ ಉದ್ಯಮಿ ಸದಾಶಿವ ಬಿ.ಎನ್. ಶೆಟ್ಟಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೊಡಗು ಘಟಕದ ಉಪಾಧ್ಯಕ್ಷೆ ರಾಣಿ ರವೀಂದ್ರ, ಹೆಚ್. ಚಿರನಹಳ್ಳಿ ಮಂಜುನಾಥ್, ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣದ ಅಧ್ಯಕ್ಷ ಬಿ.ಎ. ದಿನೇಶ್ ಶೆಟ್ಟಿ, ವಿವಿಧ ಕನ್ನಡ ಸಂಘಟನೆಯ ಪದಾಧಿಕಾರಿಗಳು, ವಿವಿಧ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಸಾರ್ವಜನಿಕರು ಇದ್ದರು.