ಸೋಮವಾರಪೇಟೆ ತಾಲೂಕಿನ ಐಗೂರು ಗ್ರಾಮದಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ 
ಕೊಡಗು

ಅರ್ಥಪೂರ್ಣವಾಗಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ

ಪ್ರಮುಖ ಮುಖ್ಯಾಂಶಗಳು

  • ಐಗೂರು ಐಸಿರಿ ಹೆಸರಿನೊಂದಿಗೆ ನಡೆದ ಸಮ್ಮೇಳನ ಜನಮನ ಸೆಳೆಯಿತು.
ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಐದು ಗ್ರಾಮಗಳ ನಾಡು ಐಗೂರು ಗ್ರಾಮದಲ್ಲಿ ಸೋಮವಾರ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ನಡೆಯಿತು.
ಐಗೂರು ಐಸಿರಿ ಹೆಸರಿನೊಂದಿಗೆ ನಡೆದ ಸಮ್ಮೇಳನ ಜನಮನ ಸೆಳೆಯಿತು. ಗ್ರಾಮೀಣ ಭಾಗದಲ್ಲಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ಆಯೋಜಿಸುವ ಮೂಲಕ ಐಗೂರು ಗ್ರಾಮವು ಕನ್ನಡಾಭಿಮಾನಕ್ಕೆ ಮಾದರಿಯಾಯಿತು.
ಕನ್ನಡ ಹಬ್ಬಕ್ಕೆ ಅಧಿಕೃತ ಚಾಲನೆ: ಬೆಳಗ್ಗೆ 6.30 ಗಂಟೆಗೆ ಶಾಲಾ ಮೈದಾನದಲ್ಲಿ ತಾಲೂಕು ತಹಸೀಲ್ದಾರ್ ಕೆ. ಕೆ. ಕೃಷ್ಣಮೂರ್ತಿ ರಾಷ್ಟ್ರಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಸಾಪ ಜಿಲ್ಲಾ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆ: ಬೆಳಗ್ಗೆ 9 ಗಂಟೆಗೆ ಐಗೂರು ಕಬ್ಬಿಣ ಸೇತುವೆಯಿಂದ ತೆರೆದ ವಾಹನದಲ್ಲಿ ಸಮ್ಮೇಳನಾಧ್ಯಕ್ಷೆ ಸಾಹಿತಿ ಜಲಜಾ ಶೇಖರ್, ಕ.ಸಾ.ಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವಕಾಮತ್, ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.
ಸಾಂಪ್ರದಾಯಿಕ ವಾದ್ಯಗಳು, ಜನಪದ ಕಲಾವಿದರ ನೃತ್ಯ, ಕನ್ನಡ ಧ್ವಜಗಳು ಮತ್ತು ಘೋಷಣೆಗಳೊಂದಿಗೆ ನಡೆದ ಮೆರವಣಿಗೆಗೆ ಗ್ರಾಮಸ್ಥರು ಸಾಕ್ಷಿಯಾದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶಕುಮಾರ್ ಮೆರವಣಿಗೆಯನ್ನು ಉದ್ಘಾಟಿಸಿದರು. ಕಬ್ಬಿಣ ಸೇತುವೆಯಿಂದ, ಯಡವಾರೆ ಮಾರ್ಗವಾಗಿ ಕಾಜೂರು ಸರ್ಕಾರಿ ಕಾಲೇಜು ಮೂಲಕ ಸಭಾಂಗಣದವರೆಗೆ ಮೆರವಣಿಗೆ ಸಾಗಿತು.