ಸೋಮವಾರಪೇಟೆ ಸಂತ ಜೋಸೆಫರ ವಿದ್ಯಾಸಂಸ್ಥೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಂಭ್ರಮ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳನ್ನು ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
- 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜನೆ
ಸೋಮವಾರಪೇಟೆ : ಸಂತ ಜೋಸೆಫರ ವಿದ್ಯಾಸಂಸ್ಥೆ ಮತ್ತು ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಕನ್ನಡ ನಾಡು-ನುಡಿ, ಸಾಂಸ್ಕೃತಿಕ ಸೊಬಗು, ನಾಡಿನ ಪರಂಪರೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ವೈಭವ, ಭಾಷಾ ಗರಿಮೆಯನ್ನು ಸಾರುವ ವಿದ್ಯಾರ್ಥಿ, ಶಿಕ್ಷಕರು ಮತ್ತು ಕಸಾಪ ಸದಸ್ಯರ ಮೆರವಣಿಗೆ ನೋಡುಗರನ್ನು ರಂಜಿಸಿತು. ಕನ್ನಡಾಂಬೆ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ಕೆಂಪು-ಹಳದಿ ಧ್ವಜಗಳನ್ನು ಹಿಡಿದು, ಸಾಂಸ್ಕೃತಿಕ ಘೋಷಣೆಗಳೊಂದಿಗೆ ತೆರಳಿದರು. ವಿದ್ಯಾರ್ಥಿಗಳ ಉಡುಪು, ಕಲಾತ್ಮಕ ಫಲಕಗಳು, ಕನ್ನಡದ ಮಹತ್ವ ಸಾರುವ ಘೋಷವಾಕ್ಯಗಳು ಸಾರ್ವಜನಿಕರ ಗಮನ ಸೆಳೆಯುವಂತಿದ್ದವು.
ಕಾರ್ಯಕ್ರಮವನ್ನು ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಉದ್ಘಾಟಿಸಿದರು. ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂಬ ಸಂದೇಶವನ್ನು ಒತ್ತಿ ಹೇಳಿದರು. ಕನ್ನಡವನ್ನು ದಿನನಿತ್ಯದ ಬದುಕಿನ ಭಾಷೆಯಾಗಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ್ದ ಕಸಾಪ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕನ್ನಡ ಅತಿ ಪ್ರಾಚೀನ ಭಾಷೆಯಾಗಿದೆ. ತರ್ಕಬದ್ಧಭಾಷೆ ಕೂಡ. 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಭಾರತಾಂಬೆ ತಾಯಿಯಾದರೆ ಕನ್ನಡಾಂಬೆ ಮಗಳಾಗಿ ಗೌರವಿಸಬೇಕು. ನಾವು ಕನ್ನಡದಲ್ಲಿ ಮಾತನಾಡಿದಾಗ, ಕನ್ನಡದಲ್ಲಿ ಬರೆಯುವಾಗ, ಕನ್ನಡದ ಸಾಹಿತ್ಯ ಓದಿದಾಗ, ಕನ್ನಡದ ಕಲೆಯನ್ನು ಬೆಂಬಲಿಸಿದಾಗ ಭಾಷೆ ಬದುಕುತ್ತದೆ ಎಂದು ಹೇಳಿದರು.
ಸಂತ ಜೋಸೆಫ್ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ಅವಿನಾಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕನ್ನಡದ ಮೌಲ್ಯಗಳನ್ನು ಕಲಿಸುವಲ್ಲಿ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಕೆಲ ಮಕ್ಕಳಿಗೆ ಕನ್ನಡವನ್ನು ಓದಲು ಬರುವುದಿಲ್ಲ. ಪಾಲಕರು ಮಕ್ಕಳು ಕನ್ನಡವನ್ನು ಕಲಿಯುವಂತೆ ತಿಳಿಹೇಳಬೇಕು ಎಂದು ತಿಳಿಸಿದರು.
ಕನ್ನಡ ಭಾಷೆಯಲ್ಲಿರುವ ಮೃದುತ್ವ, ಸಾಹಿತ್ಯದಲ್ಲಿರುವ ಮಹತ್ವ, ಸಂಸ್ಕೃತಿಯಲ್ಲಿರುವ ವೈವಿಧ್ಯತೆ ಇವೆಲ್ಲವನ್ನು ಮಕ್ಕಳು ತಿಳಿಸಬೇಕಿದೆ. ಶಾಲಾ ಮಟ್ಟದಲ್ಲೇ ಕನ್ನಡ ಕಲಿಕೆಯ ನೆಲೆ ಬಲವಾದರೆ ಮುಂದಿನ ಪೀಳಿಗೆಗಳು ಕನ್ನಡದ ಗೌರವವನ್ನು ಉಳಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಹತ್ತನೆಯ ಮತ್ತು ಪಿಯುಸಿಯ ವಾರ್ಷಿಕ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ಯು.ಎನ್. ಕುಶಿ, ಕೆ.ಎಸ್.ರೇಚನಾ, ಎಚ್.ಜೆ.ಸಹನಾ, ಎಚ್.ಪಿ.ದುರ್ಗಾಶ್ರೀ, ಧನ್ಯಶ್ರೀ, ಲಿಶ್ಮಾ ಡಯಾಸ್, ಜಾಹ್ನವಿ, ತನಿಶಾ ರೈ, ಎಸ್.ವೈ.ಹಿಮಾನಿ, ಮೆಹರೂಪ್, ಸಿ.ಎಲ್.ಡಿಂಪಲ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ವಿಭಾಗಗಳ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಜರುಗಿದವು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಿವೃತ್ತ ಶಿಕ್ಷಕ ಸಿ.ಎಲ್.ಸುಬ್ಬಯ್ಯ, ಸಾಹಿತಿ ಲಾವಣ್ಯ ಮೋಹನ್, ಧರ್ಮಗುರು ಅವಿನಾಶ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್, ತಾಲೂಕು ಘಟಕದ ಅಧ್ಯಕ್ಷ ಎಸ್.ಡಿ.ವಿಜೇತ್, ಬಿಇಒ ಎಂ.ಕೃಷ್ಣಪ್ಪ, ಸಾಹಿತಿ ಜಲಕಾಳಪ್ಪ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯೆ ಶೀಲಾ ಡಿಸೋಜ, ಕಸಾಪ ಕಾರ್ಯದರ್ಶಿ ಜ್ಯೋತಿ ಅರುಣ್, ನಿವೃತ್ತ ಶಿಕ್ಷಕಿ ಅನುರಾಧಾ ಮತ್ತಿತರ ಗಣ್ಯರು ಇದ್ದರು.