ದುಬಾರೆ ಸಾಕಾನೆ ಶಿಬಿರದ ಆನೆಗಳು
ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳ ನಡುವೆ ನಡೆದ ಕಾಳಗದಲ್ಲಿ ಪ್ರವಾಸಿ ಮಹಿಳೆ ಮತ್ತು ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವನ್ನಪ್ಪಿದ್ದ ಬೆನ್ನಲ್ಲೇ ಕಂಜನ್ ಆನೆಯನ್ನು ವಿಲನ್ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಆದರೆ ಕಂಜನ್ ಮಾತ್ರವಲ್ಲದೆ ದುಬಾರೆಯಲ್ಲಿರುವ ಬಹಳಷ್ಟು ಆನೆಗಳು ಆಗಾಗ್ಗೆ ಈ ರೀತಿಯಲ್ಲಿ ಉದ್ರೇಕಕಾರಿಯಾಗಿ ಕಂಡುಬರುತ್ತಲೇ ಇರುತ್ತವೆ. ಹಾಗಾಗಿ ಇದರ ಹಿಂದಿನ ಕಾರಣಗಳ ಬಗ್ಗೆ ಪ್ರಮುಖವಾಗಿ ಚರ್ಚೆ ಆಗಬೇಕಿದ್ದು ಸೂಕ್ತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎನ್ನುತ್ತಾರೆ ಪ್ರಾಣಿಪ್ರಿಯರು.
ಭೂಮಿ ಮೇಲಿನ ಅತ್ಯಂತ ದೊಡ್ಡ ಪ್ರಾಣಿ ಹೆಗ್ಗಳಿಕೆಯ ಆನೆ ಅಷ್ಟೇ ಸೂಕ್ಷö್ಮ ಪ್ರಾಣಿಯೂ ಹೌದು. ದಿನಕ್ಕೆ ಹತ್ತಾರು ಕಿಲೋ ಮೀಟರ್ ಸ್ವಚ್ಛಂದವಾಗಿ ಕಾಡಿನೊಳಗೆ ಅಲೆದಾಡುತ್ತಾ ಹೊಟ್ಟೆ ಹೊರೆಯುವ ಈ ಜೀವಿಗಳನ್ನು ಹಿಡಿದು ಪಳಗಿಸಿ ಕೂಡಿ ಹಾಕುವುದೇ ಮನುಷ್ಯ ಮಾಡುತ್ತಿರುವ ದೊಡ್ಡ ತಪ್ಪು. ಇಂಥದರಲ್ಲಿ ಅದನ್ನೊಂದು ಪ್ರದರ್ಶನದ ವಸ್ತುವೆಂಬAತೆ ಬಿಂಬಿಸುವುದು, ಶ್ರಮದ ಕೆಲಸ ಮಾಡಿಸುವುದು, ಹಣ ಗಳಿಕೆಯ ಉದ್ದೇಶದಿಂದ ಯರ‍್ಯಾರದ್ದೋ ಕೈಯಲ್ಲಿ ಸ್ನಾನ ಮಾಡಿಸುವುದು, ಆಹಾರ ತಿನ್ನಿಸುವುದು ನೈತಿಕವಾಗಿ ಎಷ್ಟು ಸರಿ ಎನ್ನುವುದು ಪ್ರಾಣಿಪ್ರಿಯರ ಪ್ರಶ್ನೆ.
ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳಿಗೆ ಸಂಬAಧಿಸಿದ ಚಟುವಟಿಕೆಗಳು ದೊಡ್ಡ ಮಟ್ಟಿನ ವಾಣಿಜ್ಯಿಕ ಚಟುವಟಿಕೆಗಳಾಗಿ ಸ್ವತಃ ಅರಣ್ಯ ಇಲಾಖೆಯ ನಿಯಂತ್ರಣಕ್ಕೂ ಸಿಗದಷ್ಟು ದೂರಕ್ಕೆ ಸಾಗಿದೆ. ಆನೆಗಳನ್ನು ಬಳಸಿಕೊಂಡು ಆದಾಯ ಗಳಿಸುವುದಕ್ಕಾಗಿಯೇ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ನಿಗಮದ ಮೂಲಕ ಸರ್ಕಾರವೇ ಇಲ್ಲಿ ಐಷಾರಾಮಿ ಕಾಟೇಜ್‌ಗಳನ್ನು ನಿರ್ಮಿಸಿ ದೇಶ-ವಿದೇಶದಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ವರ್ಷದ ಬಹುತೇಕ ದಿನಗಳಲ್ಲಿ ಈ ಕಾಟೇಜ್‌ಗಳು ಭರ್ತಿ ಆಗಿರುತ್ತದೆ.
ದುಬಾರೆ ಸಾಕಾನೆ ಶಿಬಿರದ ಖ್ಯಾತಿ ಎಲ್ಲಾ ಕಡೆ ಹರಡಿರುವುದರಿಂದ ಎಲ್ಲಾ ಕಡೆಯಿಂದಲೂ ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ಸಾಮಾನ್ಯ ದಿನಗಳಲ್ಲಿ ಸರಿಸುಮಾರು 1 ರಿಂದ 2 ಸಾವಿರದಷ್ಟು ಪ್ರವಾಸಿಗರು ಪ್ರತಿನಿತ್ಯ ಇಲ್ಲಿಗೆ ಭೇಟಿ ನೀಡುತ್ತಾರೆ. ಶನಿವಾರ, ಭಾನುವಾರ ಸೇರಿದಂತೆ ವಾರಾಂತ್ಯಗಳಲ್ಲಿ ಮತ್ತು ಹಬ್ಬದ ರಜೆಗಳ ಸಮಯದಲ್ಲಿ ಈ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತದೆ. ಪ್ರತಿನಿತ್ಯ 4ರಿಂದ 5 ಸಾವಿರದಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಹರಿದುಬರುತ್ತಾರೆ. ಟಿಕೆಟ್ ಕೌಂಟರ್ ಬಳಿ ಕಿಮೀ ಉದ್ದದ ಕ್ಯೂ ಇರುತ್ತದೆ. ಬೆಳಗ್ಗೆ 11 ಗಂಟೆ ತನಕ ಮಾತ್ರ ಪ್ರವೇಶಾವಕಾಶ ಇರವುದರಿಂದ ಟಿಕೆಟ್ ಪಡೆದುಕೊಳ್ಳಲು ಅನೇಕ ಬಾರಿ ಜಟಾಪಟಿ ನಡೆದಿದ್ದೂ ಇದೆ.
ಕಾಡಿನೊಳಗಿನ ಶಾಂತ ಪರಿಸರದಲ್ಲಿ ಇರಬೇಕಾಗಿದ್ದ ಆನೆಗಳ ಎದುರು ಒಮ್ಮಿಂದೊಮ್ಮೆಲೇ ಹೀಗೆ ಸಾವಿರಾರು ಸಂಖ್ಯೆಯ ಜನರು ಕಾಣಿಸಿಕೊಂಡರೆ ಅವುಗಳ ಮಾನಸಿಕ ಪರಿಸ್ಥಿತಿಯ ಒತ್ತಡ ಊಹಿಸಲೂ ಸಾಧ್ಯವಿಲ್ಲ. ಇದರ ಜತೆಗೆ ಅರಣ್ಯ ಇಲಾಖೆಯೇ ನಿಗದಿ ಮಾಡಿರುವ 300 ರೂ. ಕೊಟ್ಟು ಟಿಕೆಟ್ ಖರೀದಿಸಿದವರು ಆನೆಗಳನ್ನು ಸ್ನಾನ ಮಾಡಿಸಲು ನಡೆಸುವ ಪೈಪೋಟಿ, 80 ರೂ. ಕೊಟ್ಟು ಟಿಕೆಟ್ ಖರೀದಿಸಿದವರಿಂದ ಆಹಾರ ತಿನ್ನಿಸಲು ನೂಕು ನುಗ್ಗಲು, ಸೆಲ್ಫಿ ಕ್ಲಿಕ್ಕಿಸಲು ಬರುವವರ ಹಾವಳಿ...ಅನಾವಶ್ಯಕ ಕೂಗಾಟ, ಕಿರುಚಾಟವನ್ನೆಲ್ಲಾ ಆನೆಗಳು ಎಷ್ಟರ ಮಟ್ಟಿಗೆ ಸಹಿಸಬಲ್ಲವು ಎಂದು ಪ್ರಶ್ನಿಸುತ್ತಾರೆ ಪ್ರಾಣಿಪ್ರಿಯರು.
ಈ ವರ್ಷದ ಬೇಸಿಗೆಯಲ್ಲಂತೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ದುಬಾರೆಗೆ ಭೇಟಿ ಕೊಟ್ಟಿದ್ದಾರೆ. ಸ್ಥಳೀಯ ಪ್ರವಾಸೋದ್ಯಮಿಗಳ ಪ್ರಕಾರ ಇಲ್ಲಿಯ ತನಕ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬಂದಿರಲಿಲ್ಲ. ಕಂಜನ್ ಮತ್ತು ಮಾರ್ತಾಂಡ ನಡುವೆ ಕಾಳಗ ನಡೆದ ಸೋಮವಾರವೂ (ಮೇ18) ಇಲ್ಲಿ ಪ್ರತಿದಿನ ಪ್ರವಾಸಿಗರು ಕಿಕ್ಕಿರಿದು ಸೇರುತ್ತಿದ್ದರು. ಆನೆಗಳು ಸೂಕ್ಷö್ಮ ಪ್ರಾಣಿಗಳು ಎನ್ನುವುದನ್ನೂ ಮರೆತು ಅವುಗಳ ಮೇಲೆ ಒತ್ತಡದ ಪರಿಸ್ಥಿತಿ ನಿರ್ಮಾಣವಾಗುವ ರೀತಿಯಲ್ಲಿ ವಾತಾವರಣ ನಿರ್ಮಾಣ ಆಗಿತ್ತು. ಆನೆಗಳ ವರ್ತನೆಯನ್ನು ಸೂಕ್ಷö್ಮವಾಗಿ ಗಮನಿಸಿದಾಗ ಅವುಗಳ ಅಸಹನೆ ಕಾಣಬಹುದಾಗಿತ್ತು ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಹಿರಿಯ ಆನೆ ಪರಿಚಾರಕ.
ಸುಮಾರು 15 ಎಕರೆಯಷ್ಟು ವಿಸ್ತೀರ್ಣದಲ್ಲಿ ಇರುವ ದುಬಾರೆ ಸಾಕಾನೆ ಶಿಬಿರದಲ್ಲಿ ಸದ್ಯಕ್ಕೆ ಮರಿಗಳು ಸೇರಿದಂತೆ 29 ಆನೆಗಳಿವೆ. ಹಾಗಾಗಿ ಇಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಆನೆಗಳನ್ನು ಇಟ್ಟುಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಈ ಮೊದಲು ನ್ಯಾಯಾಲಯದ ಸೂಚನೆಯಂತೆ ತಜ್ಞರ ಸಮಿತಿ ನೀಡಿದ್ದ ವರದಿಯ ಹಿನ್ನೆಲೆಯಲ್ಲಿ ದುಬಾರೆ ಸಾಕಾನೆ ಶಿಬಿರದ ಒತ್ತಡ ಕಡಿಮೆ ಮಾಡಲು ಹಾರಂಗಿ ಜಲಾಶಯದ ಪಕ್ಕದಲ್ಲಿ ಮತ್ತೊಂದು ಆನೆ ಶಿಬಿರ ಆರಂಭಿಸಿ ಕೆಲವು ಆನೆಗಳನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಗಿತ್ತು. ಈಗ ಅಲ್ಲಿಯೂ ಒಂದು ಪ್ರವಾಸಿ ತಾಣ ಸೃಷ್ಟಿಯಾಗಿದ್ದು ಬಿಟ್ಟರೆ ಆನೆಗಳ ಪಾಲಿಗೆ ಯಾವುದೇ ಪ್ರಯೋಜನ ಆಗಿಲ್ಲ.
ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳ ಸಂಖ್ಯೆ ಕಡಿಮೆ ಮಾಡಬೇಕು ಎಂದಿದ್ದರೂ ಅದು ಸಾಧ್ಯವೇ ಆಗುತ್ತಿಲ್ಲ. ರಾಜ್ಯದಲ್ಲಿ ಅಲ್ಲಲ್ಲಿ ಸಮಸ್ಯೆ ಸೃಷ್ಟಿಸುವ ಪುಂಡಾನೆಗಳನ್ನು ಹಿಡಿದು ಇಲ್ಲಿಗೆ ತಂದು ಕ್ರಾಲ್ ಒಳಗೆ ತಿಂಗಳುಗಟ್ಟಲೆ ಇಟ್ಟು ಪಳಗಿಸಲಾಗುತ್ತದೆ. ಆನೆಗಳು ಪಳಗಿದ ನಂತರ ಅವುಗಳನ್ನು ಈ ಶಿಬಿರದಲ್ಲೇ ಇರಿಸಿಕೊಳ್ಳಲಾಗುತ್ತದೆ. ಆದರೂ ಗಂಡು ಮತ್ತು ಹೆಣ್ಣು ಆನೆಗಳ ಅನುಪಾತವೂ ಇಲ್ಲಿ ವೈಜ್ಞಾನಿಕವಾಗಿ ಇಲ್ಲ. 29 ಆನೆಗಳ ಪೈಕಿ ಇರುವುದು ಕೇವಲ ನಾಲ್ಕು ಹೆಣ್ಣಾನೆಗಳು ಮಾತ್ರ.
ಇಲ್ಲಿರುವ ಈ ಅಸಹಜ ಅನುಪಾತವೂ ಆನೆಗಳ ಮೇಲೆ ಪರಿಣಾಮ ಬೀರುತ್ತಿವೆ. ದುಬಾರೆಯಲ್ಲಿಇರುವ ಹೆಣ್ಣಾನೆಗಳನ್ನು ಹುಡುಕಿಕೊಂಡು ಕಾಡಾನೆಗಳು ಬರುವುದು, ಶಿಬಿರದ ಹೆಣ್ಣಾನೆಗಳು ತಪ್ಪಿಸಿಕೊಂಡು ಕಾಡಾನೆಗಳ ಜತೆ ಸೇರಿಕೊಳ್ಳುವುದು ಕೂಡ ಆಗಾಗ್ಗೆ ನಡೆಯುತ್ತಿರುತ್ತದೆ. ಇಂಥ ಸಂದರ್ಭಗಳಲ್ಲಿ ಆನೆ ಮಾವುತರು ಮತ್ತು ಕಾವಾಡಿಗರು ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡುವ ಪರಿಸ್ಥಿತಿ ಇರುತ್ತದೆ. ಆನೆಗಳಿಗೆ ಮದ ಬಂದಾಗಲೂ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ಮೊದಲೆಲ್ಲಾ ಇಂಥ ಸಂದರ್ಭದಲ್ಲಿ ಶಿಬಿರವನ್ನು 2-3 ದಿನಗಳ ಮಟ್ಟಿಗೆ ಪ್ರವಾಸಿಗರಿಗೆ ನಿರ್ಬಂಧಿಸಲಾಗುತ್ತಿತ್ತು. ಆದರೆ ಈಗ ಇಂಥ ಪರಿಪಾಠ ನಿಂತುಹೋಗಿದೆ.
ಸರ್ಕಾರ, ಅರಣ್ಯ ಇಲಾಖೆ ಇಲ್ಲಿರುವ ಮೂಲ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಮುಂದಾಗದೆ ಮತ್ತೆ ಪ್ರವಾಸಿ ಕೇಂದ್ರೀಕೃತ ಕ್ರಮಗಳ ಮೊರೆ ಹೋಗುತ್ತಿದೆ. ಹೆಚ್ಚುತ್ತಿರುವ ಪ್ರವಾಸಿಗರ ಭೇಟಿಗೆ ನಿಯಂತ್ರಣ ಹಾಕದಿದ್ದರೆ ಮುಂದೆಯೂ ಇಂಥ ಘಟನೆ ನಡೆಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ಪರಿಸರವಾದಿಗಳು. ಇದರ ಜತೆಗೆ ಶಿಬಿರದಲ್ಲಿ ಆನೆಗಳಿಗೆ ಆಗುತ್ತಿರುವ ಒತ್ತಡ, ಕಿರಿಕಿರಿಯನ್ನೂ ಕಡಿಮೆ ಮಾಡಬೇಕಿದೆ. ಪ್ರಮುಖವಾಗಿ ದುಬಾರೆಯಲ್ಲಿ ಇರುವ ಗಂಡು ಮತ್ತು ಹೆಣ್ಣು ಆನೆಗಳ ಅನುಪಾತದ ಪ್ರಮಾಣವನ್ನು ವೈಜ್ಞಾನಿಕವಾಗಿ ಕಾಪಾಡಿಕೊಳ್ಳಬೇಕಿದೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
"
ಕಾಡುಪ್ರಾಣಿಗಳ ನಡವಳಿಕೆಯನ್ನು ಮತ್ತು ಅವುಗಳ ಪ್ರತಿಕ್ರಿಯೆಯನ್ನು ನಿಖರವಾಗಿ ಊಹಿಸಲು ಯಾರಿಗೂ ಸಾಧ್ಯವಿಲ್ಲ. ಆದ್ದರಿಂದ ಅರಣ್ಯ ಪ್ರದೇಶಗಳು ಅಥವಾ ಆನೆ ಶಿಬಿರಗಳಿಗೆ ಭೇಟಿ ನೀಡುವ ಪ್ರವಾಸಿಗರು ಅರಣ್ಯ ಇಲಾಖೆಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರಾಣಿಗಳನ್ನು ವೀಕ್ಷಿಸುವಾಗ ಅಂತರ ಕಾಯ್ದುಕೊಳ್ಳುವ ಜತೆಗೆ ತಮ್ಮ ಸುರಕ್ಷತೆಯ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕು.
— ಎನ್.ಎಸ್. ಬೋಸರಾಜು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ
"
ಸಾಕಾನೆ ಶಿಬಿರಗಳಿಗೆ ಬರುವ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ಪ್ರಮಾಣಿತ ಕಾರ್ಯಚರಣೆ ವಿಧಾನ (ಎಸ್.ಓ.ಪಿ.) ರೂಪಿಸಲು ಸೂಚಿಸಲಾಗಿದೆ. ಯಾವುದೇ ಸಾಕಾನೆ ಶಿಬಿರದಲ್ಲಿ ಆನೆಯ ಬಳಿ ಹೋಗದಂತೆ, ಕನಿಷ್ಠ 100 ಅಡಿ ದೂರದಲ್ಲಿ ನಿಂತು ಆನೆ ಮೈತೊಳೆಯುವುದನ್ನು ವೀಕ್ಷಿಸುವಂತೆ ಮತ್ತು ಯಾವುದೇ ಕಾರಣಕ್ಕೂ ಆನೆಗಳ ಬಳಿ ಹೋಗಿ ಸೆಲ್ಫಿ, ಫೋಟೋ ತೆಗೆದುಕೊಳ್ಳಲು, ಮೈತೊಳೆಯಲು ಅವಕಾಶ ನೀಡದಂತೆ ಮತ್ತು ಆನೆಗಳಿಗೆ ಬಾಳೆಹಣ್ಣು, ಬೆಲ್ಲ, ಕಬ್ಬು ಇತ್ಯಾದಿ ಯಾವುದೇ ಆಹಾರವನ್ನು ಪ್ರವಾಸಿಗರ ಕೈಯಿಂದ ತಿನ್ನಿಸದಂತೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಲು ಸೂಚಿಸಲಾಗಿದೆ.
— ಈಶ್ವರ ಬಿ. ಖಂಡ್ರೆ, ಅರಣ್ಯ ಖಾತೆ ಸಚಿವ