ಶನಿವಾರಸಂತೆಯ ಕಾವೇರಿ ವಿದ್ಯಾಸಂಸ್ಥೆಯಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕ್ಲಸ್ಟರ್ ಮಟ್ಟದ ಕಲೋತ್ಸವವನ್ನು ಬಿಇಒ ಕೃಷ್ಣಪ್ಪ ಉದ್ಘಾಟಿಸಿದರು. ದೇವರಾಜ್, ದಿನೇಶ್, ಜಯಕುಮಾರ್, ಗೀತಾ ಹರೀಶ್, ಹೂವಯ್ಯ ಇದ್ದರು.
- ಕ್ಲಸ್ಟರ್ ಮಟ್ಟದ ಕಲೋತ್ಸವ ಕಾರ್ಯಕ್ರಮ
ಶನಿವಾರಸಂತೆ : ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಶಿಕ್ಷಣ ಇಲಾಖೆ 23 ವರ್ಷಗಳಿಂದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಎಂದು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಅಭಿಪ್ರಾಯಪಟ್ಟರು.
ಕಾವೇರಿ ಪ್ರೌಢಶಾಲೆ, ಪ್ರಜ್ವಲ್ ಎಜುಕೇಶನ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶನಿವಾರಸಂತೆ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ 2025-26ನೇ ಸಾಲಿನ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಮಕ್ಕಳಲ್ಲಿ ಪಠ್ಯಚಟುವಟಿಕೆಗೆ ಹೊರತಾದ ಬಹುಮುಖ ಪ್ರತಿಭೆಗಳಿರುತ್ತದೆ. ಇದನ್ನು ಗುರುತಿಸುವ ಸಲುವಾಗಿ 2001ರಲ್ಲಿ ಆಗಿನ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಈ ಮೂಲಕ ಪ್ರತಿವರ್ಷವು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗಳು ಅನಾವರಣಗೊಳ್ಳುತ್ತಿದೆ ಎಂದು ಹೇಳಿದರು.
ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷೆ ಗೀತಾ ಹರೀಶ್ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತರಲು ಕಲೋತ್ಸವ ವಿದ್ಯಾರ್ಥಿಗಳಿಗೆ ಪೂರಕ ವೇದಿಕೆಯಾಗಿದೆ. ಈ ಮೂಲಕ ಮಕ್ಕಳು ತನ್ನ ಪ್ರತಿಭೆಗಳನ್ನು ಉತ್ತಮವಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಶನಿವಾರಸಂತೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸಿ. ಕೆ. ದಿನೇಶ್ ಮಾತನಾಡಿ, ಇಂದು ಮಕ್ಕಳಿಗೆ ಅನೇಕ ಸೌಲಭ್ಯ ಸವಲತ್ತುಗಳಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇವುಗಳನ್ನು ಸದುಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾವೇರಿ ವಿದ್ಯಾಸಂಸ್ಥೆ ಪ್ರಾಂಶುಪಾಲ ದೇವರಾಜ್ ಮಾತನಾಡಿ,ಗ್ರಾಮೀಣ ಭಾಗದ ಮಕ್ಕಳಲ್ಲಿ ನಾನಾ ಸಾಂಸ್ಕೃತಿಕ ಪ್ರತಿಭೆಗಳಿರುತ್ತದೆ, ಈ ದಿಸೆಯಲ್ಲಿ ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಆದರೆ ಈ ಕಾರ್ಯಕ್ರಮದಲ್ಲಿ ತೀರ್ಪುಗಾರರು ಮಕ್ಕಳ ಪ್ರತಿಭೆಯನ್ನು ಸಮರ್ಪಕವಾಗಿ ಗುರುತಿಸಿ ತೀರ್ಪು ನೀಡಬೇಕಾಗುತ್ತದೆ. ಸರಿಯಾಗಿ ತೀರ್ಪು ನೀಡದಿದ್ದರೆ ಮಕ್ಕಳ ಪ್ರತಿಭೆ ಕಮರಿ ಹೋಗುತ್ತದೆ. ಈ ನಿಟ್ಟಿನಲ್ಲಿ ತೀರ್ಪುಗಾರರು ಎಚ್ಚರವಹಿಸಿ ನಿಜವಾದ ಪ್ರತಿಭೆಗಳು ಹೊರಹೊಮ್ಮುವ ರೀತಿಯಲ್ಲಿ ತೀರ್ಪು ನೀಡುವಂತೆ ಮನವಿ ಮಾಡಿದರು.
ವಿಘ್ನೇಶ್ವರ ಬಾಲಕಿಯರ ಪ್ರೌಢಶಲಾ ಶಿಕ್ಷಕ ಕೆ.ಪಿ.ಜಯಕುಮಾರ್, ಪ್ರಜ್ವಲ್ ಎಜುಕೇಶನ್ ಟ್ರಸ್ಟಿನ ಕಾರ್ಯದರ್ಶಿ ಹೂವಯ್ಯ, ಪ್ರೌಢಶಾಲಾ ಮುಖ್ಯ ಶಿಕ್ಷಕ ಅಶ್ವತ್ಥ್, ತಾಲೂಕು ಶಿಕ್ಷರ ಸಂಘದ ಕಾರ್ಯದರ್ಶಿ ಕವಿತಾ, ವಿವಿಧ ಶಾಲಾ ಶಿಕ್ಷಕರಾದ ಮೈಕಲ್ ಸೆಬಾಸ್ಟಿನ್, ಸುಚಿತ್ರಾ, ಷಣ್ಮುಖ, ಪುಟ್ಟರಾಜು, ಲಲಿತಾ, ಶಾಂತಮ್ಮ, ಉಲ್ಲಾಸ್, ಜಯಮ್ಮ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಶಾದ ಮಧು, ಮುರುಳೀಧರ್ ಮುಂತಾದವರು ಹಾಜರಿದ್ದರು. ಈ ಸಂದರ್ಭ 110 ಮೀಟರ್ ಹರ್ಡಲ್ಸ್‌ನಲ್ಲಿ ರಾಷ್ಟ್ರಮಟ್ಟದ ಆಯ್ಕೆಯಾದ ಕಾವೇರಿ ಪ್ರೌಢಶಾಲಾ ವಿದ್ಯಾರ್ಥಿ ಅನೀಸ್ ಮತ್ತು ಶನಿವಾರಸಂತೆ ಸಿಆರ್‌ಪಿ ಸಿ.ಕೆ.ದಿನೇಶ್ ಅವರನ್ನು ಸನ್ಮಾನಿಸಲಯಿತು.