ತಾಳತ್ತಮನೆಯ ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಸಭಾ ಭವನದಲ್ಲಿ ಶನಿವಾರ ನಡೆದ ಕಕ್ಕಡ ಸಂಭ್ರಮ ಕಾರ್ಯಕ್ರಮದಲ್ಲಿ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
- ಯುವಕರು ಮೊಬೈಲ್ ಮೋಹ ತ್ಯಜಿಸಿ ಸಂಸ್ಕೃತಿ ಉಳಿಸಿ
- ಕಕ್ಕಡ ಸಂಭ್ರಮ ಕಾರ್ಯಕ್ರಮದಲ್ಲಿ ಎಂ.ಎಂ.ಪರಮೇಶ್ವರ್ ಕಿವಿಮಾತು
ಮಡಿಕೇರಿ: ಇಂದಿನ ಯುವ ಪೀಳಿಗೆ ಮೊಬೈಲ್ ಮೋಹಕ್ಕೆ ತುತ್ತಾಗಿ ನಮ್ಮ ಆಚರಣೆ ಮತ್ತು ಸಂಸ್ಕೃತಿಯಿಂದ ದೂರ ಸರಿಯುತ್ತಿರುವುದು ವಿಷಾಧನೀಯ ಎಂದು ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ್ ಹೇಳಿದರು.
ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘ ಮತ್ತು ಮಹಿಳಾ ವೇದಿಕೆ ಹಾಗೂ ಯುವ ವೇದಿಕೆಯ ಸಂಯುಕ್ತ ಅಶ್ರಯದಲ್ಲಿ ತಾಳತ್ತಮನೆಯ ಸಂಘದ ಸಭಾ ಭವನದಲ್ಲಿ ಶನಿವಾರ ನಡೆದ ಕಕ್ಕಡ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಟಿ ತಿಂಗಳು ನಮ್ಮ ಸಂಸ್ಕೃತಿ ಮತ್ತು ಆರೋಗ್ಯದ ಸಂಕೇತವಾಗಿದ್ದು, ಆಟಿ ತಿಂಗಳು ಕರಾವಳಿ ಜನತೆಯ ಜೀವನದ ಅವಿಭಾಜ್ಯ ಅಂಗವಾಗಿದೆ. ಆಟಿ ಕೇವಲ ಹಬ್ಬವಲ್ಲ. ಇದು ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಬಂಧವಾಗಿದೆ. ಆದರೆ, ಇಂದು ಇಂದಿನ ಯುವ ಜನತೆ ಮಾದಕ ವಸ್ತು, ಮೊಬೈಲ್ ಹಿಂದೆ ಬಿದ್ದು ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ, ನಮ್ಮೊಂದಿಗೆ ಬೆರೆಯದ ಪರಿಣಾಮ ನಮ್ಮ ಸಂಸ್ಕೃತಿ, ಆಚರಣೆಗಳು ತಿಳುವಳಿಕೆ ಇಲ್ಲದಾಗಿದೆ. ಆದ್ದರಿಂದ ಪೋಷಕರು ನಮ್ಮ ಹಬ್ಬ, ಆಚರಣೆಗಳಲ್ಲಿ ತಮ್ಮ ಮಕ್ಕಳನ್ನು ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಸಭಾಭವನ ನಿರ್ಮಾಣ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ಣಗೊಳಿಸಲು ಸಮಾಜಬಾಂಧವರ ಸಹಕಾರ ಅಗತ್ಯವಾಗಿದೆ. ಸುಮಾರು ೪ಕೋಟಿ ವೆಚ್ಚದಲ್ಲಿ ಸಂಘದ ಸಭಾಭವನ ನಿರ್ಮಾಣವಾಗಲಿದೆ. ಈಗಾಗಲೇ ಸರ್ಕಾರದಿಂದ ೨ ಕೋಟಿ ಅನುದಾನ ಘೋಷಣೆಯಾಗಿದ್ದು, ೬೫ ಲಕ್ಷ ಸಿಕ್ಕಿದೆ. ೧.೩೫ ಕೋಟಿ ಹಣ ಬರಲು ಬಾಕಿಯಿದೆ. ಸರ್ಕಾರದ ಹಣದೊಂದಿಗೆ ಸಮಾಜಬಾಂಧವರ ಸಹಕಾರದೊಂದಿಗೆ ೧.೬೦ ಕೋಟಿ ವೆಚ್ಚದಲ್ಲಿ ಸಭಾಭವನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನುಳಿದ ಕಾಮಗಾರಿ ನಡೆಸಲು ಸಮಾಜಬಾಂಧವರ ಸಹಕಾರ ಅಗತ್ಯವಾಗಿದ್ದು, ಪ್ರತಿ ಕುಟುಂಬದಿಂದ ೫,೦೦೦ ನೀಡುವಂತೆ ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷೆ ದೇವಕ್ಕಿ ಜಿ.ಆರ್.ನಾಯ್ಕ ಮಾತನಾಡಿ, ಆಟಿ ತಿಂಗಳಲ್ಲಿ ನಡೆಯುವ ವಿಶೇಷ ಕಾರ್ಯಕ್ರಮ ಕಕ್ಕಡ ಸಂಭ್ರಮವಾಗಿದೆ. ಪ್ರಸ್ತುತ ನಮ್ಮ ದೇಹಕ್ಕೆ ಚಳಿಯಿಂದ ಕೂಡಿದ್ದು, ಶಕ್ತಿ ಗುಂದಿರುತ್ತದೆ. ಇಂತಹ ಸಂದರ್ಭದಲ್ಲಿ ಆಟಿ ಪದಾರ್ಥಗಳು ದೇಹದ ಉಷ್ಣತೆಯನ್ನು ಹೆಚ್ಚಿಸಲು ಸಹಕಾರಿಯಾಗಿರುತ್ತದೆ ಎಂದರು.
ಸಂಘದ ಉಪಾಧ್ಯಕ್ಷ ಪಿ.ಕೆ.ಗಂಗಧರ್ ಮಾತನಾಡಿ, ಎಲ್ಲ ಜನಾಂಗ ಬಾಂಧವರು ಕೂಡ ಆಟಿ ಸಂಭ್ರಮದಂತಹ ಆಚರಣೆಯನ್ನು ಹಮ್ಮಿಕೊಳ್ಳುತ್ತಿದ್ದಾರೆ. ಅದರಂತೆ ನಮ್ಮ ಜನಾಂಗದವರಿಗಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಾಗ ಒಗ್ಗಟ್ಟು ಮತ್ತು ಸಂಘಟನೆಗೆ ಸಹಕಾರಿಯಾಗಲಿದೆ ಎಂದ ಅವರು, ಮರಾಟಿ ಜನಾಂಗ ದೊಡ್ಡ ಜನಾಂಗವಾಗಿದೆ. ಆದರೆ, ಸಂಘದ ವಾರ್ಷಿಕ ಮಹಾಸಭೆಗೆ ಜನಾಂಗ ಬಾಂಧವರ ಪಾಲ್ಗೊಳುವಿಕೆ ಕ್ಷೀಣಿಸಿದೆ. ಮುಂದಿನ ದಿನಗಳಲ್ಲಿ ಹಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು.
ಶ್ವೇತ ದಿವ್ಯಕುಮಾರ್ ಮಾತನಾಡಿ, ಆಟಿ ಕಾರ್ಯಕ್ರಮ ವಿಶೇಷತೆಯನ್ನು ವಿವರಿಸಿದರು. ಮಹಿಳಾ ವೇದಿಕೆ ಅಧ್ಯಕ್ಷೆ ಜಲಜಾಕ್ಷಿ ನವೀನ್, ಯುವ ವೇದಿಕೆ ಅಧ್ಯಕ್ಷ ಸಂತೋಷ್ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಎಂ.ಸಿ.ಹೂವಮ್ಮ, ಕಟ್ಟಡ ಸಮಿತಿ ಕಾರ್ಯದರ್ಶಿ ಎಂ.ಎಸ್.ಯೋಗೇಂದ್ರ, ಸಮಾಜದ ಹಿರಿಯರು ಎಂ.ಟಿ.ಆನಂದರಾವ್ ಇತರರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಕಕ್ಕಡ ಸಂಭ್ರಮ ಕಾರ್ಯಕ್ರಮದಲ್ಲಿ ಕಕ್ಕಡ ತಿಂಗಳ ಖಾದ್ಯಗಳು ಗಮನ ಸೆಳೆಯಿತು. ಕಾರ್ಯಕ್ರಮ ಪ್ರಯುಕ್ತ ಸಮಾಜ ಬಾಂಧವರು ಒಂದೊಂದು ಆಟಿ ಖಾದ್ಯವನ್ನು ಮಾಡಿ ತಂದಿದ್ದರು. ವಿಶೇಷವಾಗಿ ಕಣಿಲೆ ಸಾರು ಮತ್ತು ಪಲ್ಯ, ಪತ್ರೊಡೆ, ಅಕ್ಕಿ ಪಾಯಸಾ, ಹಲಸಿನ ಹಣ್ಣಿನ ಹಿಟ್ಟು, ಕುಕ್ಕು ಸುಂಟಿ ಚಟ್ನಿ, ಹಲಸಿನ ಕಾಯಿ ಸಾರು, ಚಗಟೆ ಸೊಪ್ಪಿನ ಪಲ್ಯ, ಚರ್ಮೆ ಸೊಪ್ಪಿನ ಪಲ್ಯ, ಕೆಂಜಿಗದ ಕುಡಿ ಚಟ್ನಿ, ಕೆಸ ಪಲ್ಯ, ಬಾಳೆ ಪೂಂಬೆ ಪಲ್ಯ, ಕೆಸ ಸಾರು, ಹಲಸಿನ ಬೀಜದ ಚಟ್ನಿ, ಕೈಪುಳಿ ಚಟ್ನಿ, ಹಿರಳೆಕಾಯಿ, ಕೋಳಿ, ಹಂದಿ ಸಾಂಬಾರ್ ಗಮನ ಸೆಳೆಯಿತು.
ಮರಾಟಿ ಸಮಾಜದಿಂದ ಸ್ವಾತಂತ್ರ್ಯ ದಿನಾಚರಣೆ
ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ತಾಳತ್ತಮನೆಯ ಸಂಘದ ಸಭಾ ಭವನದಲ್ಲಿ ೮೦ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಎಂ.ಎಂ.ಪರಮೇಶ್ವರ್ ವರು, ಇಂದು ಸ್ವಾತಂತ್ರ್ಯ ಕಾರ್ಯಕ್ರಮವನ್ನು ಆಚರಿಸುತ್ತಿರುವುದು ನಮ್ಮ ಸೌಭಾಗ್ಯ. ಇದು ಸ್ವಾತಂತ್ರ್ಯ ಹೋರಾಟಗಾರರ ಹೋರಾಟ ಮತ್ತು ತ್ಯಾಗದ ಫಲವಾಗಿದೆ. ಜೀವನದಲ್ಲಿ ನೆನಪಿಸಿಕೊಳ್ಳಬೇಕಾದ ಮಹತ್ವದ ದಿನ ಇದಾಗಿದೆ ಎಂದು ಅಭಿಪ್ರಾಯಪಟ್ಟರು.
ಅಭಿವೃದ್ಧಿಶೀಲ ದೇಶಕ್ಕೆ ತಂತ್ರಜ್ಞಾನ ಅಗತ್ಯವಿದೆ. ಆದರೆ, ತಂತ್ರಜ್ಞಾನದ ಜೊತೆಗೆ ದೇಶಾಭಿಮಾನವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸ್ವಾತಂತ್ರ್ಯದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು ಎಂದರು.
ಈ ಸಂದರ್ಭ ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಪದಾಧಿಕಾರಿಗಳು, ಸಮಾಜಬಾಂಧವರಿದ್ದರು.