ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಕೊಟ್ಟಗೇರಿ ಗ್ರಾಮದ ಆದ್ಯ ವಿ.ಪಿ ಅವರು ಜೆಆರ್‌ಎಫ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಆಯ್ಕೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಜೂನಿಯರ್ ರಿಸರ್ಚ್ ಫೆಲೋಶಿಪ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ದೇಶದಾದ್ಯಂತ 7 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದು, ಇದರಲ್ಲಿ ಆಯ್ಕೆಯಾಗಿರುವ 5 ಸಾವಿರ ವಿದ್ಯಾರ್ಥಿಗಳಲ್ಲಿ ಆದ್ಯ ಶೇ.99.416 ರಷ್ಟು ಅಂಕ ಪಡೆದು ಆಯ್ಕೆಯಾಗಿದ್ದಾರೆ.
ಜೂನಿಯರ್ ರಿಸರ್ಚ್ ಫೆಲೋಶಿಪ್ ಪರೀಕ್ಷೆ ರಾಷ್ಟ್ರೀಯ ಮಟ್ಟದ ಪರೀಕ್ಷೆಯಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವುದಕ್ಕಾಗಿ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಆರ್ಥಿಕ ಬೆಂಬಲದೊಂದಿಗೆ ಸಂಶೋಧನೆ ಅಥವಾ ಪಿಎಚ್.ಡಿ ಅಧ್ಯಯನಕ್ಕಾಗಿ ಮಾಸಿಕ ಸ್ಟೈಫಂಡ್ ಮತ್ತು ಸಂಶೋಧನಾ ಸೌಲಭ್ಯಗಳನ್ನು 5 ವರ್ಷಗಳವರೆಗೆ ನೀಡಲಾಗುತ್ತದೆ.
2024ರಲ್ಲಿ ನ್ಯಾಷನಲ್ ಫೋರೆನ್ಸಿಕ್ ಯೂನಿವರ್ಸಟಿಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ಒಬಿಸಿ ಆಲ್ ಇಂಡಿಯಾ ರ‌್ಯಾಂಕಿಂಗ್‌ನಲ್ಲಿ ಪ್ರಥಮ ಸ್ಥಾನ ಹಾಗೂ ಜನರಲ್ ಮೆರಿಟ್‌ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದ ಆದ್ಯ, ಪ್ರಸ್ತುತ ಗುಜರಾತ್‌ನ ನ್ಯಾಷನಲ್ ಫೋರೆನ್ಸಿಕ್ ಸೈನ್ಸ್ ಆಫ್ ಇನ್‌ಸ್ಟಿಟ್ಯೂಟ್‌ನಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಇವರು ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ವ್ಯಾಸಂಗವನ್ನು ಗೋಣಿಕೊಪ್ಪಲು ಕ್ಯಾಲ್ಸ್ ವಿದ್ಯಾಸಂಸ್ಥೆಯಲ್ಲಿ, ಪದವಿಯನ್ನು ಮೈಸೂರಿನ ಜೆಎಸ್‌ಎಸ್ ಮೆಡಿಕಲ್ ಕಾಲೇಜಿನಲ್ಲಿ ಮುಗಿಸಿದ್ದು, ಪೊನ್ನಂಪೇಟೆ ತಾಲೂಕಿನ ಕೊಟ್ಟಗೇರಿ ಗ್ರಾಮದ ವಿ.ಎಸ್. ಪ್ರಸನ್ನ ಹಾಗೂ ಜ್ಯೋತಿ ಹಾತೂರು ದಂಪತಿಯ ಪುತ್ರಿ.