ಅರೆಸೇನಾಪಡೆಯ ಮಾಜಿ ಯೋಧರೊಂದಿಗೆ ಮುಕ್ತ ಸಂವಾದ ನಡೆಯಿತು. ಪ್ರದೀಪ್ ಕುಮಾರ್, ಎಂ.ಜಿ.ಯತೀಶ್, ಪುಲಿಯಂಡ ಚೆಂಗಪ್ಪ, ಜಿ.ಕೆ.ದಿನೇಶ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಕುಶಾಲನಗರ: ಅಪರಾಧಮುಕ್ತ ಕುಶಾಲನಗರದ ನಿರ್ಮಾಣಕ್ಕೆ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕೆಂದು ವೃತ್ತ ನಿರೀಕ್ಷಕ ಪ್ರದೀಪ್‌ಕುಮಾರ್ ಮನವಿ ಮಾಡಿದರು.
ಗುಮ್ಮನಕೊಲ್ಲಿ ಗ್ರಾಮದಲ್ಲಿ ಮಾಜಿ ಯೋಧ ಜಿ.ಕೆ. ದಿನೇಶ್ ಕುಮಾರ್ ನಿವಾಸದ ಆವರಣದಲ್ಲಿ ಅರೆಸೇನಾಪಡೆಯ ಮಾಜಿ ಯೋಧರೊಂದಿಗೆ ಮುಕ್ತ ಸಂವಾದ ನಡೆಸಿ ಮಾತನಾಡಿದ ಅವರು, ದೇಶದ ಗಡಿಗಳಲ್ಲಿ ದುರ್ಗಮ ಪರಿಸ್ಥಿತಿಗಳಲ್ಲಿ ಹಗಲು, ರಾತ್ರಿ ಕರ್ತವ್ಯಗೈದು ಸುರಕ್ಷಿತವಾಗಿ ಮರಳುವ ಮೂಲಕ ಆರೋಗ್ಯವಂತ ಬದುಕು ನಡೆಸುತ್ತಿರುವ ನಿವೃತ್ತ ಯೋಧರನ್ನು ಇಡೀ ಸಮಾಜ ಸದಾ ಗೌರವಿಸುತ್ತದೆ. ಅಲ್ಲದೆ ಅವರಂತೆಯೇ ಸದಾ ಶಿಸ್ತು ಹಾಗೂ ಜಾಗೃತ ಮನಸ್ಥಿತಿಯೊಂದಿಗೆ ಆರೋಗ್ಯವಂತ ಹಾಗೂ ಸುರಕ್ಷಿತ ಪರಿಸರ ನಿರ್ಮಾಣಕ್ಕೆ ಶ್ರಮಿಸಬೇಕೆಂದು ಹೇಳಿದರು.
ತಮ್ಮ ಪರಿಸರದಲ್ಲಿ ಸಮಾಜಬಾಹಿರ ಚಟುವಟಿಕೆ, ಮಾದಕ ವ್ಯಸನಿಗಳ ಉಪದ್ರವ ಕಂಡು ಬಂದಲ್ಲಿ ಠಾಣೆಗೆ ಮಾಹಿತಿ ನೀಡುವ ಮೂಲಕ ಸಹಕಾರ ನೀಡಬೇಕು. ನಿವೃತ್ತ ಯೋಧರ ಧ್ವನಿಯಾಗಿ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದು ಪ್ರದೀಪ್ ಕುಮಾರ್ ಹೇಳಿದರು.
ಯೋಧರ ಒಕ್ಕೂಟದ ಅಧ್ಯಕ್ಷ ಎಂ.ಜಿ. ಯತೀಶ್, ಉಪಾಧ್ಯಕ್ಷ ಪುಲಿಯಂಡ ಚೆಂಗಪ್ಪ, ಜಿ.ಕೆ. ದಿನೇಶ್ ಕುಮಾರ್, ಪುಟ್ಟೇಗೌಡ, ಬಿ.ಎಂ.ರವೀಂದ್ರ, ಎಂ.ಎನ್.ಭೀಮಯ್ಯ, ಹರೀಶ್ ಗೌಡ, ರಾಜಶೇಖರ, ಮನೋಹರ್, ಕಾಳಪ್ಪ, ಎಸ್.ಎಸ್.ಲೀಲಾವೇಣಿ, ಎಂ.ಎಂ. ವಿಜಯ, ಅಚ್ಚಯ್ಯ, ಸಿ.ಕೆ.ರಾಜು, ಕೆ.ಎ.ಚಂದ್ರೇಶ್, ಗೋಪಾಲಕೃಷ್ಣ, ಕೆ.ಬಿ. ಅಚ್ಚಯ್ಯ, ಎಂ.ಎಂ. ಅಯ್ಯಣ್ಣ ಮತ್ತಿತರರಿದ್ದರು.