ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಆಯೋಜಿಸಿದ್ದ ಉದ್ಯೋಗ ಮೇಳವನ್ನು ತಹಶೀಲ್ದಾರ್ ಸಿ.ಎಸ್.ಸಂಜನ್ ಉದ್ಘಾಟಿಸಿದರು. ಪ್ರಶಾಂತ್, ರಾಜೇಶ್.ಕೆ, ಖಾಲಿದ್ ಇತರರಿದ್ದರು. 
ಕೊಡಗು

ಉದ್ಯೋಗ ಪಡೆಯಲು ಶಿಕ್ಷಣ ಅತ್ಯಂತ ಮಹತ್ವದ್ದು

ಪ್ರಮುಖ ಮುಖ್ಯಾಂಶಗಳು

  • ಉದ್ಯೋಗ ಪಡೆಯಲು ಶಿಕ್ಷಣ ಅತ್ಯಂತ ಮಹತ್ವದ್ದು

ಗೋಣಿಕೊಪ್ಪ:

ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಚೇರಿ ಆವರಣದ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು.

ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಸಂಜನ.ಸಿ.ಎಸ್ ಅವರು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್ ಅವರ ಅಧ್ಯಕ್ಷತೆಯಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಮೇಳವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ತಹಶೀಲ್ದಾರ್ ಸಂಜನ.ಸಿ.ಎಸ್, ಮನುಷ್ಯನ ವ್ಯಕ್ತಿತ್ವ ಹಾಗೂ ಜೀವನವನ್ನು ರೂಪಿಸುವಲ್ಲಿ ಉದ್ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಉದ್ಯೋಗ ಪಡೆಯಲು ಶಿಕ್ಷಣ ಅತ್ಯಂತ ಮಹತ್ವದ್ದಾಗಿದ್ದು, ಓದಿಗೆ ಪೂರಕವಾಗಿ ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಇಂತಹ ಮೇಳಗಳು ಸಹಕಾರಿಯಾಗುತ್ತವೆ. ಯುವಕರು ಉದ್ಯೋಗ ಮೇಳಗಳ ಸದುಪಯೋಗ ಪಡೆದುಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಯಾಗಿದ್ದಾಗ ನಾನೂ ಉದ್ಯೋಗಕ್ಕಾಗಿ ಇಂತಹ ಮೇಳಗಳಲ್ಲಿ ಭಾಗವಹಿಸಿದ್ದೆ. ಇಂದು ತಹಶೀಲ್ದಾರ್ ಆಗಿ ನಿಮ್ಮ ಮುಂದೆ ಕುಳಿತುಕೊಳ್ಳಲು ಉದ್ಯೋಗ ಮೇಳಗಳಂತಹ ಕಾರ್ಯಕ್ರಮಗಳೂ ಪ್ರೇರಣೆಯಾಗಿವೆ. ಯುವಕರ ಭವಿಷ್ಯ ರೂಪಿಸುವ ಉದ್ದೇಶದಿಂದ ಉದ್ಯೋಗ ಮೇಳಗಳನ್ನು ದೊಡ್ಡಮಟ್ಟದಲ್ಲಿ ಪದೇಪದೇ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್ ಮಾತನಾಡಿ, ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಅವರ ಬದುಕಿಗೆ ಆರ್ಥಿಕ ಭದ್ರತೆ ಒದಗಿಸುವುದು ಉದ್ಯೋಗ ಮೇಳಗಳ ಮುಖ್ಯ ಉದ್ದೇಶವಾಗಿದೆ. ಅರ್ಹ ಯುವಕರು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜೇಶ್.ಕೆ ಮಾತನಾಡಿ, ಉದ್ಯೋಗಕ್ಕಾಗಿ ಎದುರು ನೋಡುತ್ತಿರುವ ಯುವಕರಿಗೆ ವಿವಿಧ ಸಂಸ್ಥೆಗಳ ಮೂಲಕ ಅವಕಾಶಗಳನ್ನು ಒದಗಿಸುವಲ್ಲಿ ಉದ್ಯೋಗ ಮೇಳಗಳು ಪ್ರಮುಖ ಪಾತ್ರ ವಹಿಸುತ್ತವೆ. ನೂರಕ್ಕೂ ಹೆಚ್ಚು ಪದವೀಧರ, ಡಿಪ್ಲೋಮಾ ಮತ್ತು ಐಟಿಐ ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಖಾಲಿದ್, ಕೊಣಿಯಂಡ ಮುತ್ತಣ್ಣ, ಅನಿಷ್ ಅಹಮದ್, ಲಾಲು ಸ್ಟಾಲಿನ್, ಸಿದ್ದು ನಾಚ್ಚಪ್ಪ, ಮುತ್ತಣ್ಣ, ಫಿಲೋಮಿನಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಕಂಪನಿಗಳ ಪ್ರತಿನಿಧಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಉಪಸ್ಥಿತರಿದ್ದರು.