ನಾಪೋಕ್ಲು ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಜೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಚಿತ್ರನಟಿ ಹರ್ಷಿಕಾ ಪೂಣಚ್ಚ ಪಾಲ್ಗೊಂಡಿದ್ದರು. 
ಕೊಡಗು

ಕೆಚೆಟ್ಟಿರ ತಂಡಕ್ಕೆ ಪ್ರಶಸ್ತಿ

ನಾಪೋಕ್ಲು: ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಜೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಮಹಿಳೆಯರ 5 ಎ ಹಾಕಿ ಪಂದ್ಯಾವಳಿಯಲ್ಲಿ ಕೆಚೆಟ್ಟಿರ ತಂಡವು ಪ್ರಶಸ್ತಿ ಪಡೆದುಕೊಂಡಿತು.
ಗುರುವಾರ ನಡೆದ ಫೈನಲ್‌ಪಂದ್ಯದಲ್ಲಿ ಕಂಬಿರಂಡ ಮತ್ತು ಕೆಚ್ಚೆಟ್ಟಿರ ತಂಡಗಳು ಸಮಬಲದ ಹೋರಾಟ ನಡೆಸಿದವು. ಪಂದ್ಯದಲ್ಲಿ ಎರಡು ತಂಡಗಳು 2-2 ಗೋಲು ಗಳಿಸಿದವು. ಫಲಿತಾಂಶಕ್ಕಾಗಿ ಟೈ ಬ್ರೇಕರ್ ಮೊರೆ ಹೋಗಬೇಕಾಯಿತು. ಟೈ ಬ್ರೇಕರ್‌ನಲ್ಲಿ ಕೆಚೆಟ್ಟಿರ 2-1 ಅಂತರದಿಂದ ಕಂಬಿರಂಡ ವಿರುದ್ಧ ಗೆಲುವು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಕಂಬಿರಂಡ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಪುರುಷರ ವಿಭಾಗದಲ್ಲಿ ಮೊದಲ ಸೆಮಿಫೈನಲ್ ಪಂದ್ಯ ಕುಲ್ಲೆಟಿರ ಮತ್ತು ಪಳಂಗಂಡ ತಂಡಗಳ ನಡುವೆ ನಡೆಯಿತು. ಎರಡು ತಂಡಗಳ ನಡುವಿನ ಪಂದ್ಯ ವೀಕ್ಷಕರ ಕುತೂಹಲಕ್ಕೆ ಕಾರಣವಾಯಿತು. ಪಂದ್ಯದಲ್ಲಿ ತಂಡಗಳು 2-2 ಗೋಲು ಗಳಿಸಿದವು. ನಂತರ ಟೈ ಬ್ರೇಕರ್‌ನಲ್ಲಿ ತಂಡವು 2-1 ಅಂತರದಿಂದ ಪಳಂಗಂಡ ವಿರುದ್ಧ ಕುಲ್ಲೆಟಿರ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು ಪಂದ್ಯದಲ್ಲಿ ಚೆಪ್ಪುಡಿರ ಹಾಗೂ ಪರದಂಡ ತಂಡಗಳು ಬಿರುಸಿನ ಆಟವಾಡಿದವು. ಪಂದ್ಯದಲ್ಲಿ ಚೆಪ್ಪುಡಿರ ತಂಡವು ಪಳಂಗಂಡ ತಂಡವನ್ನು 4-3ರಿಂದ ಮಣಿಸಿ ಫೈನಲ್ ಪ್ರವೇಶಿಸಿತು.
ಪರದಂಡ ತಂಡದ ಪರ ರಂಜನ್ ಅಯ್ಯಪ್ಪ 2, ಪ್ರಜ್ವಲ್ ಪೂವಣ್ಣ 1 ಗೋಲು ಬಾರಿಸಿದರೆ, ಚೆಪ್ಪುಡಿರ ತಂಡದ ಪರ ದಿವಾನ್ ಸುಬ್ಬಯ್ಯ, ಪ್ರಣವ್, ಚೇತನ್ ಚಿಣ್ಣಪ್ಪ ಮತ್ತು ವಚನ್ ಚಿಣ್ಣಪ್ಪ ತಲಾ 1 ಗೋಲ್ ಬಾರಿಸಿದರು.
ಹಾಕಿ ಪಂದ್ಯಾವಳಿಯಲ್ಲಿ ಚಿತ್ರನಟಿ ಹರ್ಷಿಕಾ ಪೂಣಚ್ಚ ಭಾಗಿ
ನಾಪೋಕ್ಲು: ಚಲನಚಿತ್ರ ರಂಗದಲ್ಲಿ ನನಗೆ ಸಿಕ್ಕ ಎಲ್ಲ ಪ್ರಶಸ್ತಿಗಳಿಗಿಂತ ಜನಾಂಗದವರು, ತಾಯಿ ಕಾವೇರಮ್ಮ ಆಶೀರ್ವಾದ ಅಮೂಲ್ಯವಾದದು ಎಂದು ಚಿತ್ರನಟಿ ಹರ್ಷಿಕಾ ಪೂಣಚ್ಚ ಹೇಳಿದರು.
ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಗುರುವಾರ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನಲ್ಲಿ ಕೈಲು ಮುಹೂರ್ತ, ಕಾವೇರಿ ಸಂಕ್ರಮಣ ಹಾಗೂ ಹುತ್ತರಿ ಹಬ್ಬಗಳನ್ನು ಪ್ರಮುಖ ಹಬ್ಬಗಳನ್ನಾಗಿ ಆಚರಿಸಲಾಗುತ್ತಿದೆ. ಇದೀಗ ಕೊಡವ ಹಾಕಿ ಉತ್ಸವ ಕೂಡ ಹಬ್ಬಗಳ ಸಾಲಿಗೆ ಸೇರ್ಪಡೆಗೊಂಡಿದ್ದು ನಾಲ್ಕು ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದರು.
ಇಂಡಿಯನ್ ಹಾಕಿ ಕ್ಯಾಂಪರ್ ಕನ್ನಟಡ ರಾಣಿ ಕರಂಬಯ್ಯ, ತೆಕ್ಕಡ ಭವಾನಿ, ಹಾಕಿ ಕರ್ನಾಟಕ ಕಾರ್ಯದರ್ಶಿ ಅಂಜಪರವಂಡ ಬಿ ಸುಬ್ಬಯ್ಯ, ಅಂತಾರಾಷ್ಟ್ರೀಯ ಹಾಕಿ ಕ್ರೀಡಾಪಟು ಕೂತಂಡ ಪೂನಚ್ಚ, ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷ ಉಳ್ಳಿಯಡ ಪುವಯ್ಯ, ದಾಟಿ ಪೂವಯ್ಯ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ, ನಿರ್ದೇಶಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.