ಸೋಮವಾರಪೇಟೆ ಪಟ್ಟಣದಲ್ಲಿ ಎಸ್‌ಐಆರ್ ಕುರಿತ ಜಾಗೃತಿ ಜಾಥಾ ನಡೆಯಿತು. ಪರಮೇಶ ಕುಮಾರ್, ಮಂಜೇಶ್, ಕವಿತಾ ಇದ್ದರು.
ಸೋಮವಾರಪೇಟೆ: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಎಸ್‌ಐಆರ್-2026 ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈಚೆಗೆ ಸೋಮವಾರಪೇಟೆ ಪಟ್ಟಣದಲ್ಲಿ ಕಾಲ್ನಡಿಗೆ ಜಾಥಾ ಹಾಗೂ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕಾಧಿಕಾರಿ ಪರಮೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಶಾಲೆ ವಿದ್ಯಾರ್ಥಿಗಳು ಎಸ್‌ಐಆರ್-2026 ಕುರಿತು ಜಾಗೃತಿ ಮೂಡಿಸುವ ಫಲಕಗಳನ್ನು ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು. ಈ ವೇಳೆ ಸಾರ್ವಜನಿಕರಿಗೆ ಎಸ್‌ಐಆರ್‌ನ ಮಹತ್ವ ಹಾಗೂ ಚುನಾವಣಾ ಆಯೋಗದ ಸೂಚನೆಗಳ ಕುರಿತು ಮಾಹಿತಿ ನೀಡಿ ಅರಿವು ಮೂಡಿಸಲಾಯಿತು.
ಇದೇ ವೇಳೆ ಶಾಲೆಗಳಿಗೆ ಭೇಟಿ ನೀಡಿದ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಎಸ್‌ಐಆರ್ ಕುರಿತು ಮಾಹಿತಿ ನೀಡಿದರು. ಪಾಲಕರು ಹಾಗೂ ಸಂಬಂಧಿಕರಿಗೆ ಈ ಕುರಿತು ಮಾಹಿತಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಇಒ ಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ, ತಾಲ್ಲೂಕು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಮಂಜೇಶ್, ಜ್ಞಾನ ವಿಕಾಸ ಶಾಲೆಯ ಮುಖ್ಯ ಶಿಕ್ಷಕಿ ಕವಿತಾ ಇತರರಿದ್ದರು.