ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮದ ಎಲ್‌ಕೆಜಿ ತರಗತಿಯನ್ನು ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಸಿದರು. ಮೋಹನರಾಜ್, ಯಂಕನ ಗಿರೀಶ್, ವಿ.ಜಿ.ಲೋಕೇಶ್, ಎಚ್.ಯು.ರಫೀಕ್‌ಖಾನ್, ಪಿ.ಆರ್.ಸುಕುಮಾರ್ ಇದ್ದರು. 
ಕೊಡಗು

ಸರ್ಕಾರಿ ಶಾಲೆಗಳನ್ನು ಖಾಸಗಿಗೆ ಹೋಲಿಸುವುದು ಸರಿಯಲ್ಲ

ಸುಂಟಿಕೊಪ್ಪ: ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಇತ್ತೀಚಿನ ದಿನಗಳಲ್ಲಿ ಅವಶ್ಯಕವಾಗಿದೆ. ಅಲ್ಲದೆ ಮಕ್ಕಳು ಗರಿಷ್ಠವಾಗಿ ಬೆಳೆಯಲು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ತಿಳಿಸಿದರು.
ಗದ್ದೆಹಳ್ಳದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮದ ಎಲ್‌ಕೆಜಿ ತರಗತಿಗಳ ಪ್ರಾರಂಭೋತ್ಸವವನ್ನು ಸೋಮವಾರ ನೇರವೇರಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳನ್ನು ಹೋಲಿಕೆ ಮಾಡುವುದು ಸರಿಯಲ್ಲ. ಪ್ರಸ್ತುತ ಕಾಲಘಟ್ಟದಲ್ಲಿ ಆಂಗ್ಲ ಭಾಷೆಯ ಕಲಿಕೆ ಅನಿವಾರ್ಯವಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರವು ಆಂಗ್ಲ ಮಾಧ್ಯಮ ಭಾಷೆ ತರಗತಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಶಾಲೆಯ ಅಭಿವೃದ್ಧಿ ಕಾಮಗಾರಿಗಾಗಿ 5 ಲಕ್ಷ ರೂ. ಗಳನ್ನು ಶಾಸಕರ ಅನುದಾನದಿಂದ ನೀಡುವುದಾಗಿ ಘೋಷಣೆ ಮಾಡಿದರು. ಇದೇ ಸಂದರ್ಭದಲ್ಲಿ ಗದ್ದೆಹಳ್ಳ ಸರ್ಕಾರಿ ಶಾಲೆಗೆ ಸೇರಿದ ಮೈದಾನವನ್ನು ಟರ್ಫ್ ಮೈದಾನವನ್ನಾಗಿ ಪರಿವರ್ತನೆಗಳಿಸಿಕೊಡಬೇಕೆಂಬ ಆಮ್ಮೆಟ್ಟಿ ಫುಟ್ಬಾಲ್ ಕ್ಲಬ್ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಎರಡೂ ಶಾಲೆಗಳ ಶಾಲಾಭಿವೃದ್ಧಿ ಸಮಿತಿಯಲ್ಲಿ ನಿರ್ಧಾರವಾಗಿ ಸರ್ಕಾರದ ಅನುಮತಿ ಪಡೆಯಬೇಕಾಗಿದೆ. ಆದರೆ ಸಂಜೆಯ ವೇಳೆ ಮಾತ್ರ ಕ್ಲಬ್ ಮತ್ತು ಸಾರ್ವಜನಕರಿಗೆ ಮೈದಾನ ಒದಗಿಸಲಾಗುವುದು. ಯಾವುದೇ ಅನ್ಯ ಚಟುವಟಿಕೆಗೆ ಮೈದಾನವನ್ನು ದುರ್ಬಳಕೆ ಮಾಡಬಾರದು. ಈ ಬಗ್ಗೆ ಸಮಿತಿಗಳ ಸಭೆಯ ಬಳಿಕ ಮುಂದುವರಿಯೋಣ ಎಂದು ಹೇಳಿದರು.
ಸುಂಟಿಕೊಪ್ಪ ಗ್ರೇಡ್-1 ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಮಾತನಾಡಿ, 3 ವರ್ಷದ ಕನಸು ನನಸಾಗಿದೆ. ಶಾಲೆಯ ಬೆಳವಣಿಗೆಯಲ್ಲಿ ಸ್ಥಳೀಯರ ಸಹಕಾರ ಅಮೂಲ್ಯವಾಗಿದೆ. ಶಾಲೆಗೆ ಅತ್ಯವಶ್ಯಕವಾಗಿ ತಡೆಗೋಡೆ ಮತ್ತು ಶೌಚಗೃಹ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಇ.ಕರೀಂ ಮಾತನಾಡಿ, 2002ರಲ್ಲಿ ಶಾಲೆ ಆರಂಭಗೊಂಡು 2004 ರಲ್ಲಿ ಸ್ವಂತ ಕಟ್ಟಡವನ್ನು ಹೊಂದಿತು. ಮುಂದಿನ ವರ್ಷ ಶಾಲೆಗೆ 25ನೇ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಗ್ರಾಮಸ್ಥರು ಸಕಲ ಸಹಕಾರವನ್ನು ನೀಡುವ ಮೂಲಕ ಅದ್ದೂಯಾಗಿ ಸಮಾರಂಭವನ್ನು ಆಯೋಜಿಸಲು ಚಿಂತಿಸಲಾಗಿದೆ ಎಂದು ಹೇಳಿದರು.
ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್‌ರಾಜ್, ಯಂಕನ ಗಿರೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಎಚ್.ಯು ರಫೀಕ್‌ಖಾನ್, ಪಿ.ಆರ್.ಸುಕುಮಾರ್ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷೆ ಸಕೀನಾ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಿವಮ್ಮ ಮಹೇಶ್, ಮಾಜಿ ಸದಸ್ಯರಾದ ಗೀತಾ, ಯಂಕನ ಶ್ರೀರಾಮ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸೌಭಾಗ್ಯಾ, ಎಲ್‌ಕೆಜಿ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷ ರಶೀದ್, ಸ್ಯಾಂಡಲ್‌ವುಡ್ ತೋಟದ ವ್ಯವಸ್ಥಾಪಕ ನಿಸಾರ್, ಬಾಳೆಕಾಡು ತೋಟದ ವ್ಯವಸ್ಥಾಪಕ ಪ್ರಸನ್ನ, ಇಬ್ರಾಹಿಂ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ವೈ.ಸಿ.ಕುಮಾರ್, ಪಟ್ಟೆಮನೆ ಚರಣ್, ಸೋಮಶೇಖರ್, ಸುಂಟಿಕೊಪ್ಪ ಗದ್ದೆಹಳ್ಳ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಹೇಮಾವತಿ ಸೇರಿದಂತೆ ಮತ್ತಿತರರು ಇದ್ದರು.
ಕಾರ್ಯಕ್ರಮ ಮೊದಲಿಗೆ ಶಾಲಾ ಮಕ್ಕಳು ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.