ಕೊಡಗು ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ವಿರಾಜಪೇಟೆ ತಾಲೂಕು ಅರಮೇರಿಯ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು ಶರಣ ಸಾಹಿತ್ಯ ಸಮ್ಮೇಳನ ಸಮಿತಿ ವತಿಯಿಂದ ಆಹ್ವಾನಿಸಲಾಯಿತು. 
ಕೊಡಗು

ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ

ವಿರಾಜಪೇಟೆ:
ಕೊಡಗು ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ವಿರಾಜಪೇಟೆ ತಾಲೂಕು ಅರಮೇರಿಯ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರಿಗೆ ಶರಣ ಸಾಹಿತ್ಯ ಸಮ್ಮೇಳನ ಸಮಿತಿ ವತಿಯಿಂದ ಈಚೆಗೆ ಆಹ್ವಾನ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಶ್ರೀಗಳು ಜಿಲ್ಲೆಯಲ್ಲಿ ನಡೆಯುತ್ತಿರುವ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಶ್ರೀಮಠಕ್ಕೆ ದೊರೆತ ಗೌರವವಾಗಿದೆ. ಶೈಕ್ಷಣಿಕ ಹಾಗೂ ವಾಣಿಜ್ಯ ಕೇಂದ್ರವಾದ ಕುಶಾಲನಗರದಲ್ಲಿ ನಡೆಯುತ್ತಿರುವ ಸಮ್ಮೇಳನ ಸರ್ವರ ಸಹಭಾಗಿತ್ವದ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕಿದೆ. ಜಿಲ್ಲೆಯೂ ಸೇರಿದಂತೆ ಕುಶಾಲನಗರದ ಗಡಿ ಪ್ರದೇಶಗಳ ಕಲಾಸಕ್ತರು, ಸಾಹಿತ್ಯಾಸಕ್ತರು, ಹಾಗೂ ಶರಣರ ತತ್ವಗಳ ಚಿಂತಕರಿಗೆ ಈ ಸಮ್ಮೇಳನದ ಪ್ರಯೋಜನಗಳು ದೊರಕುವಂತಾಗಬೇಕಿದೆ.
ಹನ್ನೆರಡನೇ ಶತಮಾನದ ವಚನಕಾರರು ಸಮ ಸಮಾಜದ ಪರಿಕಲ್ಪನೆಯಿಂದ ಸಾರಿದ ಸಂದೇಶಗಳು ಜನಮಾನಸಕ್ಕೆ ತಲುಪುವಂತಾಗಬೇಕು.
ಯಾವುದೇ ವಿವಾದಗಳಿಗೆ ಎಡೆಮಾಡಿಕೊಡದೇ ಸರ್ವರ ಸಹಭಾಗಿತ್ವದ ಸಮ್ಮೇಳನವಾಗಬೇಕೆಂದು ಆಶಿಸಿದರು.
ಈ ಸಂದರ್ಭ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ತೆರಳಿದ ನಿಯೋಗದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾಧ್ಯಕ್ಷ ಹೆಚ್.ವಿ. ಶಿವಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ನಟರಾಜು, ಕೋಶಾಧ್ಯಕ್ಷ ಕೆ.ಪಿ. ಪರಮೇಶ್, ಸಮ್ಮೇಳನದ ಹಣಕಾಸು ಸಮಿತಿ ಅಧ್ಯಕ್ಷ ಶಾಂಬಶಿವಯ್ಯ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಸ್. ನಂದೀಶ್, ಅತಿಥಿ ಸತ್ಕಾರ ಸಮಿತಿ ಅಧ್ಯಕ್ಷ ಬಿ.ಬಿ. ಲೋಕೇಶ್, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಯುವ ಘಟಕದ ಅಧ್ಯಕ್ಷ ಹಕ್ಕೆ ಮೋಹನ್ ಮತ್ತಿತರರು ಇದ್ದರು.