ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಮಂದ್ರಿರ ಮೋಹನ್‌ದಾಸ್ ಉದ್ಘಾಟಿಸಿದರು. ಸ್ಮಿತಾ ಅಮೃತಾರಾಜ್, ಪಿ.ಕಲಾವತಿ, ಶೇಖರ್ ಇತರರಿದ್ದರು.
- ಮಹಿಳೆಯರ ಯಶಸ್ಸಿಗೆ ಬೆಂಬಲ ಅತ್ಯಗತ್ಯ
- ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ಮಿತಾ ಅಮೃತಾರಾಜ್
ಮಡಿಕೇರಿ: ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವೊಂದೇ ಸಾಲದು, ಅದರೊಂದಿಗೆ ಆರ್ಥಿಕ ಜ್ಞಾನ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ಸಾಮಾಜಿಕ ಬೆಂಬಲ ಅತ್ಯಗತ್ಯ ಎಂದು ಖ್ಯಾತ ಕವಯತ್ರಿ ಸ್ಮಿತಾ ಅಮೃತಾರಾಜ್ ಹೇಳಿದರು.
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಡಿಕೇರಿ ತಾಲೂಕು ಪಂಚಾಯತ್ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಿಳೆಯರ ಸಾಧನೆಯನ್ನು ಗುರುತಿಸಿ, ಗೌರವಿಸುವ ದಿನವಾಗಿದ್ದು, ಇದು ಕೇವಲ ಆಚರಣೆಯಲ್ಲ. ೨೦ನೇ ಶತಮಾನದ ಆರಂಭದಲ್ಲಿ ಮಹಿಳಾ ಕಾರ್ಮಿಕರು ಉತ್ತಮ ವೇತನ, ಕಡಿಮೆ ಕೆಲಸದ ಅವಧಿ ಮತ್ತು ಮತದಾನದ ಹಕ್ಕಿಗಾಗಿ ನಡೆಸಿದ ಬೃಹತ್ ಹೋರಾಟಗಳ ಫಲವಾಗಿದೆ ಎಂದರು.
ಅನಾದಿ ಕಾಲದಿಂದಲೂ ಮಹಿಳೆಯರನ್ನು ಎರಡನೇ ದರ್ಜೆಯ ನಾಗರಿಕರಂತೆ ಪರಿಗಣಿಸಿ ಕಡೆಗಣಿಸಲಾಗುತ್ತಿದೆ. ಆದರೂ ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಹಾಗೂ ಆರ್ಥಿಕ ಸ್ವಾತಂತ್ರ್ಯದಿಂದ ಸಬಲೀಕರಣಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ. ಭಾರತದಲ್ಲಿ ಮಹಿಳೆಯರಿಗೆ ಸ್ವತಂತ್ರ್ಯ ಇದೆ. ಕಾಲ, ದೇಶ, ಭಾಷೆ ಗಡಿಗಳನ್ನು ದಾಟಿದರೂ ಹೆಣ್ಣಿನ ಸಮಸ್ಯೆ ಒಂದೇ. ಹೆಣ್ಣಿಗೆ ಸಮಾಜದಲ್ಲಿ ಪುರುಷರಷ್ಟೇ ಸ್ಥಾನಮಾನ ದೊರಕಲು, ಮಹಿಳೆಯರಿಗೆ ಅಕ್ಷರದ ವಾರಸುದಾರಿಕೆ ಕೊಟ್ಟಂತ ಶ್ರೇಯಸ್ಸು ಸಾವಿತ್ರಿ ಬಾಪುಲೆ ಅವರಿಗೆ ಸಲ್ಲುತ್ತದೆ. ಮಹಿಳಾ ಸಮಾಜಕ್ಕೆ ಇದ್ದ ಧಾರ್ಮಿಕ ಕಟ್ಟುಪಾಡುಗಳ ವಿರೋಧದ ನಡುವೆ ಅಕ್ಷರವನ್ನು ಬಿತ್ತಿ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದವರು ಸಾವಿತ್ರಿ ಬಾಯಿಪುಲೆ. ಸಮಾಜದ ಮಹಿಳೆಯರ ಅಭ್ಯುದಯಕ್ಕೆ ಕಾರಣಕರ್ತರಾದರು. ಮಹಿಳಾ ಸಂಕುಲ ಸಂಕಷ್ಟಗಳಿಂದ ಸ್ವತಂತ್ರವಾಗಲು ಶಿಕ್ಷಣದಿಂದ ಸಶಕ್ತರಾಗಿಸಿದರು ಎಂದು ಹೇಳಿದರು.
ಪ್ರಸ್ತುತ ಸಮಾಜದಲ್ಲಿ ಗಂಡಳ್ವಿಕೆಯ ಹೆಣ್ಣಿನಿಂದಲೂ ಮಹಿಳೆಯರನ್ನು ದಮನಿಸುವ ಕಾರ್ಯ ನಡೆಯುತ್ತಿದೆ ಎಂದ ಅವರು, ಮಹಿಳೆಯರನ್ನು ಗೌರವಿಸುವ ಕಾರ್ಯ ಸಮಾಜ ಮಾಡಬೇಕಿದೆ. ಮಹಿಳೆಯರಿಗೆ ಶಿಕ್ಷಣ, ಉದ್ಯೋಗಾವಕಾಶಗಳಲ್ಲಿ ಸಮಾನವಕಾಶಗಳನ್ನು ನೀಡಬೇಕು. ಮಹಿಳೆಯರು ಸಹ ಇಂದು ವೃತ್ತಿ ಜೀವನದಲ್ಲಾಗಲೀ, ಇತರ ರಂಗಗಳಲ್ಲಾಗಲೀ ಅವಕಾಶಗಳು ಬಂದಾಗ ಕೀಳರಿಮೆಯಿಂದ ಹಿಂದೆ ಸರಿಯದೆ ಪ್ರತಿಯೊಂದನ್ನು ಸವಾಲಾಗಿ ಸ್ವೀಕರಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಮಂದ್ರಿರ ಮೋಹನ್‌ದಾಸ್, ಮಹಿಳಾ ದಿನಾಚರಣೆಯೂ ಒಂದು ದಿನಕ್ಕೆ ಸಿಮೀತವಾಗಬಾರದು. ಎಲ್ಲಾ ರಂಗದಲ್ಲೂ ತೊಡಗಿಕೊಂಡು ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು. ಮಹಿಳೆಯರು ಮಗಳಾಗಿ, ಸಹೋದರಿಯಾಗಿ, ಬಾಳಸಂಗತಿಯಾಗಿ, ತಾಯಿಯಾಗಿ, ಅತ್ತೆ, ಅಜ್ಜಿಯಾಗಿ ಹಂತ ಹಂತವಾಗಿ ಈ ಎಲ್ಲಾ ಪಾತ್ರಗಳನ್ನು ಸಂತಸದಿಂದ ನಿರ್ವಹಿಸುತ್ತಾರೆ. ಇದರೊಂದಿಗೆ ತಮಗೆ ಎದುರಾಗುವ ಸವಾಲುಗಳನ್ನೂ ಎದುರಿಸಿ ಮುನ್ನುಗ್ಗಿದರೆ ಸಮೃದ್ಧಿ ಹಾಗೂ ಯಶಸ್ಸಿನ ಜೀವನ ನಡೆಸಬಹುದು, ಅಲ್ಲದೇ ಸಮಾಜಕ್ಕೆ ಉತ್ತಮ ದಾರಿದೀಪ ಆಗಬಹುದು ಎಂದು ಸಲಹೆ ನೀಡಿದರು.
ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಶೇ.೮೦ ರಷ್ಟು ಗ್ಯಾರಂಟಿ ಯೋಜನೆಯನ್ನು ಮೀಸಲಿಟ್ಟಿದ್ದು, ಯಾವುದೇ ಲೋಪದೋಷಗಳಿದ್ದಲ್ಲಿ ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸ್ವಾವಲಂಭಿ ಬದುಕನ್ನು ನಡೆಸುವಂತಾಗಬೇಕು ಎಂದು ಮೋಹನ್‌ದಾಸ್ ಅವರು ಹೇಳಿದರು.
ತಾ.ಪಂ.ಇಒ ಶೇಖರ್ ಮಾತನಾಡಿ, ನಮ್ಮ ದೇಶದ ಸಂಸ್ಕ೭ತಿಯಲ್ಲಿ ಅನಾದಿಕಾಲದಿಂದಲೂ ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡಲಾಗಿದೆ. ಅದರಂತೆ ಎಲ್ಲಾ ನಾರಿಯರನ್ನು ಗೌರವದಿಂದ, ಹಕ್ಕು, ಸ್ಥಾನಮಾನ ನೀಡಿ ತೃಪ್ತಿ ಪಡಿಸಿದರೆ ಈ ದೇಶ, ರಾಜ್ಯ ಸಮೃದ್ಧಿಯಾಗುತ್ತದೆ ಎಂದು ಹೇಳಿದ ಅವರು, ತಮಗೆ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗಿದರೆ ಮುಂದೆ ಉತ್ತಮ ವೇದಿಕೆ ಲಭ್ಯವಾಗಲಿದೆ. ಮಹಿಳೆಯರು ಅವಕಾಶವನ್ನು ಸೃಷ್ಟಿಸಿಕೊಳ್ಳಬೇಕು ಅಥವಾ ಸಿಕ್ಕ ಅವಕಾಶವನ್ನು ಬಳಸಿಕೊಂಡು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರಬೇಕು ಎಂದು ಕರೆ ನೀಡಿದರು.
ಮಡಿಕೇರಿ ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಮಾತನಾಡಿ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರತಿ ವರ್ಷ ಮಾ.೮ ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಮಹಿಳೆಯರು ತಮ್ಮ ಜವಾಬ್ದಾರಿಯನ್ನು ಅರಿತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಮತ್ತು ಮಹಿಳೆಯರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಹೇಳಿದರು.
ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರಾಣಿ ಮಾತನಾಡಿ, ಮಹಿಳೆಯರು ಅಬಲೆಯರಲ್ಲ, ಸಬಲೆಯರು. ಪುರುಷರಂತೆ ಮಹಿಳೆಯರು ಕೂಡ ಎಲ್ಲಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲೂ ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ಎಂ.ಜಿ.ಸುನಿತಾ, ಎಸ್.ಎಸ್.ಹೇಮಂತ್, ಚೆಂಬು ಗ್ರಾಮ ಪಂಚಾಯಿತಿ ಸಂಜೀವಿನಿ ಒಕ್ಕೂಟದ ಸದಸ್ಯೆ ರೇಖಾ, ಹೊದ್ದೂರು ಗ್ರಾ.ಪಂ ಪಿಡಿಒ ವತ್ಸಲಾ ಕುಮಾರಿ, ಮೂಕಾಂಬಿಕ ಸಂಜೀವಿನಿ ಒಕ್ಕೂಟದ ಕನಕಾಂಬಿಕೆ, ಸಂಜೀವಿನಿ ಒಕ್ಕೂಟದ ಪ್ರಮುಖರು ಹಾಗೂ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಸ್ಮೀತಾ ಅಮೃತರಾಜ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಗ್ರಾ.ಪಂ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ೨೬ ಒಕ್ಕೂಟಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಸಭಾ ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ವಿವಿಧ ಒಕ್ಕೂಟದ ಸದಸ್ಯರು ಹತ್ತಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಯಿತು.