ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್.ಜೆ.ಸೋಮಶೇಖರ್ ಮಾತನಾಡಿದರು. ಶೇಖರ್, ದಯಾನಂದ, ಪಿ.ಕಲಾವತಿ ಇತರರಿದ್ದರು.
- ಪ್ರಜಾಪ್ರಭುತ್ವ ಬಲಪಡಿಸಲು ಪ್ರತಿಯೊಬ್ಬರೂ ಕೈಜೋಡಿಸಿ
- ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಜಿಲ್ಲಾಧಿಕಾರಿ ಸೋಮಶೇಖರ್
ಮಡಿಕೇರಿ: ಇಡೀ ವಿಶ್ವದಲ್ಲಿ ಭಾರತವು ಬೃಹತ್ ಸಂವಿಧಾನ ಹೊಂದಿದ್ದು, ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಲು ಪ್ರತಿಯೊಬ್ಬರೂ ಕೈಜೋಡಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಇವರ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತ ಸಂವಿಧಾನವು ಮೂಲತಃ ೩೯೫ ವಿಧಿಗಳನ್ನು ಹೊಂದಿದ್ದು, ಪ್ರಸ್ತುತ ೨೫ ಭಾಗಗಳಲ್ಲಿ ಸುಮಾರು ೪೪೮ ಕ್ಕೂ ಹೆಚ್ಚು ವಿಧಿಗಳು ಹಾಗೂ ೧೨ ಅನುಸೂಚಿಗಳನ್ನು ಒಳಗೊಂಡು ಬೃಹತ್ ಸಂವಿಧಾನ ಹೊಂದಿದೆ. ಪ್ರಜಾಪ್ರಭುತ್ವ ಬಗ್ಗೆ ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು. ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಸರ್ಕಾರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಯುವ ಸಂಸತ್‌ಗೆ ಇಂದಿನಿಂದ ಚಾಲನೆ ನೀಡಿದ್ದು, ಈ ಯುವ ಸಂಸತ್‌ನಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಕೊಡಗು ಜಿಲ್ಲೆಗೆ ಒಳ್ಳೆಯ ಹೆಸರು ತರಬೇಕು ಎಂದು ಸಲಹೆ ಮಾಡಿದರು.
ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಸಿ.ದಯಾನಂದ ಮಾತನಾಡಿ, ಪ್ರಜಾಪ್ರಭುತ್ವ ಒಂದು ಕೇವಲ ಆಡಳಿತ ವ್ಯವಸ್ಥೆಯಲ್ಲ. ಅದು ಜೀವನದ ಮೌಲ್ಯ ಆಗಿದೆ. ಪ್ರಜಾಪ್ರಭುತ್ವವು ಸ್ವಾತಂತ್ರ್ಯ, ಸಮಾನತೆ, ನ್ಯಾಯ ಸಹಿಷ್ಣುತೆ, ಮಾನವ ಹಕ್ಕುಗಳು, ಹೊಣೆಗಾರಿಕೆ, ಪರಸ್ಪರ ನಂಬಿಕೆ ಮತ್ತು ಗೌರವ ಮೊದಲಾದ ಮೂಲ ಅಂಶಗಳ ಮೇಲೆ ನಿಂತಿದೆ ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿಯವರು ಸಹ ಪ್ರಜಾಪ್ರಭುತ್ವವು ದುರ್ಬಲರನ್ನು ಬಲಿಷ್ಠರಿಂದ ರಕ್ಷಿಸುವ ವ್ಯವಸ್ಥೆ ಆಗಿರಬೇಕು. ನಿಜವಾದ ಪ್ರಜಾಪ್ರಭುತ್ವ ಎಂದರೆ ಕೇವಲ ಬಹುಮತದ ಆಳ್ವಿಕೆಯಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಅವಕಾಶ ಮತ್ತು ಗೌರವ ದೊರೆಯುವುದೇ ಸ್ವಾತಂತ್ರ್ಯದ ನಿಜವಾದ ಪ್ರಜಾಪ್ರಭುತ್ವ ಎಂದು ಹೇಳಿದ್ದಾರೆ ಎಂದು ಕೆ.ಸಿ.ದಯಾನಂದ ಅವರು ವಿವರಿಸಿದರು.
ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆಯಲ್ಲ. ಅದೊಂದು ಪ್ರಮುಖ ಭಾಗವಾಗಿದ್ದು, ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಪ್ರತಿಯೊಬ್ಬರೂ ಕಾನೂನಿನ ಮುಂದೆ ಸಮಾನರು ಎಂಬುದಾಗಿದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ಯಶಸ್ಸು ಕೇವಲ ನಾಯಕರಿಂದಲ್ಲ. ಬದಲಾಗಿ ಜವಾಬ್ದಾರಿಯುತ ನಾಗರಿಕರಿಂದ ಮಾತ್ರ ಸಾಧ್ಯ. ಆ ದಿಸೆಯಲ್ಲಿ ಪ್ರಜಾಪ್ರಭುತ್ವದಲ್ಲಿ ಮತದಾನ ಅತ್ಯಂತ ಪ್ರಮುಖವಾದ ಹಕ್ಕು ಮತ್ತು ಕರ್ತವ್ಯವಾಗಿದೆ ಎಂದು ವರ್ಣಿಸಿದರು.
ಪ್ರಜಾಪ್ರಭುತ್ವದ ಯಶಸ್ಸು ಕೇವಲ ಚುನಾವಣೆ ನಡೆಸುವುದರಿಂದ ಯಶಸ್ವಿಯಾಗುವುದಿಲ್ಲ. ಜಾಗೃತ ಪ್ರಜೆಗಳು ಉತ್ತಮ ಆಡಳಿತ, ಕಾನೂನಿನ ಆಳ್ವಿಕೆ ಮತ್ತು ಸಂವಿಧಾನದ ಮೌಲ್ಯಗಳ ಪಾಲನೆ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದರು.
ನಗರಸಭೆ ಅಧ್ಯಕ್ಷ ಪಿ.ಕಲಾವತಿ ಮಾತನಾಡಿ, ಪ್ರಜಾಪ್ರಭುತ್ವದ ತತ್ವಗಳು, ಮೌಲ್ಯಗಳನ್ನು ಸಂರಕ್ಷಿಸುವುದು ಮತ್ತು ಜನರಲ್ಲಿ ಪ್ರಜಾಪ್ರಭುತ್ವದ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ೨೦೦೭ ರಲ್ಲಿ ಸೆ.೧೫ ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಣಪತಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹೇಶ್, ಪ್ರಮುಖರಾದ ಎಚ್.ಎಲ್.ದಿವಾಕರ, ಗಾಯತ್ರಿ, ಎಚ್.ಎಲ್.ಕುಮಾರ, ಪ್ರೇಮ, ವಕೀಲರ ಸಂಘದ ಅಧ್ಯಕ್ಷ ಸಿ.ಟಿ.ಜೋಸೆಫ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಇತರರು ಇದ್ದರು.