ಕೂಡಿಗೆಯ ಕೊಡಗು ಸೈನಿಕ ಶಾಲೆ ಅಂತರ ನಿಲಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡ ಕಾರ್ಯಪ್ಪ ನಿಲಯಕ್ಕೆ ಬಹುಮಾನ ವಿತರಸಿಲಾಯಿತು. ಕರ್ನಲ್ ಅಮರ್ ಜೀತ್ ಸಿಂಗ್, ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಸುಬೇದಾರ್ ಮೇಜರ್ (ಗೌರವಾನ್ವಿತ ಲೆಫ್ಟಿನೆಂಟ್) ರಾಮ್ ಲಾಲ್, ರೀತಾ ಕುಮಾರಿ ಮತ್ತಿತರರು ಇದ್ದರು.
ಕೂಡಿಗೆಯ ಕೊಡಗು ಸೈನಿಕ ಶಾಲೆ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ 2025-26ನೇ ಸಾಲಿನ ಅಂತರ ನಿಲಯ ಸಾಂಸ್ಕೃತಿಕ ಸ್ಪರ್ಧೆ ಮತ್ತು ಶಾಲೆಯ 13ನೇ ಬ್ಯಾಚ್‌ನ 12ನೇ ತರಗತಿಯ ಕೆಡೆಟ್‌ಗಳಿಗೆ ಬೀಳ್ಕೊಡುಗೆ ಸಮಾರಂಭ ಸೋಮವಾರ ನಡೆಯಿತು. ಈ ಸಂದರ್ಭ ಮಾತನಾಡಿದ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ವಿದ್ಯಾರ್ಥಿಗಳ ಆತ್ಮವಿಶ್ವಾಸ ಮತ್ತು ತಂಡದ ಕೆಲಸವನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪ್ರಾಮಾಣಿಕತೆ, ಧೈರ್ಯ, ನಿಷ್ಠೆ ಮತ್ತು ನಾಯಕತ್ವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶಿಸ್ತು ಮತ್ತು ನಡತೆಯ ಮಹತ್ವ ಅರಿತಿರಬೇಕು. ದೈಹಿಕ ಸದೃಢತೆಯನ್ನು ಕಾಯ್ದುಕೊಳ್ಳಬೇಕು. ದುರಭ್ಯಾಸಗಳಿಂದ ಅಂತರ ಕಾಯ್ದುಕೊಳ್ಳಬೇಕು ಎಂದರು
ಇದಕ್ಕೂ ಮೊದಲು ನಡೆದ ಅಂತರ ನಿಲಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಎಲ್ಲಾ ನಿಲಯಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಸೃಜನಶೀಲತೆ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಭವಿಷ್ಯ ನಮ್ಮದು ಶಿರ್ಷಿಕೆ ಅಡಿಯಲ್ಲಿ ಸಮೂಹ ಗೀತೆ ಗಾಯನ ಸ್ಪರ್ಧೆ, ಡಿಜಿಟಲ್ ಕನ್ನಡಿ: ತಂತ್ರಜ್ಞಾನ ಮತ್ತು ನೈತಿಕತೆ ಎನ್ನುವ ವಿಷಯದಲ್ಲಿ ಕಿರುನಾಟಕ, ಸ್ಥಳೀಯ ಸಂಪ್ರದಾಯಗಳು ಮತ್ತು ಪುರಾಣ ಕಥೆಗಳ ಅನಾವರಣಕ್ಕಾಗಿ ಜಾನಪದ ನೃತ್ಯ ಹಾಗೂ ಫ್ರೀ-ಸ್ಟೈಲ್ ಸಿನಿಮಾಟಿಕ್ ಶೈಲಿಯಲ್ಲಿ ಸಮೂಹ ನೃತ್ಯ ಸ್ಪರ್ಧೆ ಆಯೋಜಿಸಲಾಗಿತ್ತು.
ಎಲ್ಲಾ ನಿಲಯಗಳ ನಡುವೆ ನಡೆದ ತೀವ್ರ ಪೈಪೋಟಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಾರ್ಯಪ್ಪ ನಿಲಯ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಕಾರ್ಯಕ್ರಮದ ಕೊನೆಗೆ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಇದೇ ಸಂದರ್ಭ ಶಾಲೆಯ 13ನೇ ಬ್ಯಾಚ್‌ನ 12ನೇ ತರಗತಿಯ ಕೆಡೆಟ್‌ಗಳಿಗೆ ಭಾವಪೂರ್ಣ ಬೀಳ್ಕೊಡುಗೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉಪ ಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ ಕೆಡೆಟ್‌ಗಳ ಎಂಟು ವರ್ಷಗಳ ಶಿಸ್ತುಬದ್ಧ ಜೀವನ, ಕಠಿಣ ತರಬೇತಿ ಮತ್ತು ಶೈಕ್ಷಣಿಕ ಸಾಧನೆಗಳನ್ನು ಮೆಲುಕು ಹಾಕಿದರು. ಈ ಅನುಭವಗಳು ಅವರನ್ನು ಭವಿಷ್ಯದ ಸವಾಲುಗಳನ್ನು ಎದುರಿಸಲು ಸಮರ್ಥ ವ್ಯಕ್ತಿಗಳನ್ನಾಗಿ ರೂಪಿಸಿವೆ ಎಂದರು. ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ನಿರ್ಗಮಿತ ಕೆಡೆಟ್‌ಗಳಿಗೆ ಶಾಲೆಯ ನೆನಪಿನ ಕಾಣಿಕೆಗಳನ್ನು ವಿತರಿಸಿದರು.
ಸುಬೇದಾರ್ ಮೇಜರ್ (ಗೌರವಾನ್ವಿತ ಲೆಫ್ಟಿನೆಂಟ್) ರಾಮ್ ಲಾಲ್, ರೀತಾ ಕುಮಾರಿ, ದಿವ್ಯಾ ಸಿಂಗ್, ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್, ಹಿರಿಯ ಶಿಕ್ಷಕರಾದ ವಿಭಿನ್ ಕುಮಾರ್, ಡಾ. ಸಿ.ಎಸ್. ಅನುಪಮಾ, ವಿದುಷಿ ಏಂಜೆಲ್ ರಶ್ಮಿ ಡಿಸೋಜಾ, ಋತು ಎನ್. ರಾಜ್, ಶಾಲೆಯ ವಿದ್ಯಾರ್ಥಿ ನಾಯಕ ಹೃದಯ್ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಎನ್‌ಸಿಸಿ ಸಿಬ್ಬಂದಿ ಹಾಗೂ ಕೆಡೆಟ್‌ಗಳು ಇದ್ದರು.