ಮಾನವ ಬಂಧುತ್ವ ವೇದಿಕೆ ಕೊಡಗು ಜಿಲ್ಲಾ ಶಾಖೆ ಹಾಗೂ ಸೋಮವಾರಪೇಟೆ ತಾಲೂಕು ಸಮಿತಿಯಿಂದ ಆಚರಿಸಲಾದ ಬಸವ ಪಂಚಮಿ ವೇಳೆ ಗಣ್ಯರು ಉಪಸ್ಥಿತರಿದ್ದರು. ಜೆ.ಆರ್. ಪಾಲಾಕ್ಷ, ಲಲಿತಾ ವೇದಮೂರ್ತಿ, ಜೆ.ಎಲ್. ಜನಾರ್ದನ್, ಎಂ.ಎಸ್. ವೀರೇಂದ್ರ ಮತ್ತಿತರರು ಇದ್ದರು. 
ಕೊಡಗು

ಕಲ್ಲುಗಳಿಗೆ ಹಾಲೆರೆಯುವ ಬದಲು ಮಕ್ಕಳಿಗೆ ನೀಡಿ

ಪ್ರಮುಖ ಮುಖ್ಯಾಂಶಗಳು

  • pouring milk over stones

ಶನಿವಾರಸಂತೆ:

ಮಾನವ ಬಂಧುತ್ವ ವೇದಿಕೆ ಕೊಡಗು ಜಿಲ್ಲಾ ಶಾಖೆ ಹಾಗೂ ಸೋಮವಾರಪೇಟೆ ತಾಲೂಕು ಸಮಿತಿಯಿಂದ ಶನಿವಾರಸಂತೆ ಪಟ್ಟಣದ ಸನ್ನಿಧಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ನಾಗರಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಇತ್ತೀಚೆಗೆ ಆಚರಿಸಲಾಯಿತು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜೆ.ಆರ್. ಪಾಲಾಕ್ಷ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೇಶದಲ್ಲಿ ಅಪೌಷ್ಟಿಕತೆಯಿಂದ ಮಕ್ಕಳು ಬಳಲುತ್ತಿರುವ ಸಂದರ್ಭದಲ್ಲಿ ಹುತ್ತಕ್ಕೆ ಹಾಗೂ ಕಲ್ಲುಗಳಿಗೆ ಹಾಲೆರೆಯುವ ಬದಲು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲು ನೀಡುವ ಮೂಲಕ ಪೌಷ್ಟಿಕತೆ ಹೆಚ್ಚಿಸುವ ಕಾರ್ಯ ಅರ್ಥಪೂರ್ಣವಾಗಿದೆ ಎಂದರು.
ಸಮಾಜ ಸೇವಕಿ ಲಲಿತಾ ವೇದಮೂರ್ತಿ ಮಾತನಾಡಿ, ಮಕ್ಕಳನ್ನು ಪೋಷಿಸುವ ಜವಾಬ್ದಾರಿ ಹೊತ್ತಿರುವ ಶಿಕ್ಷಕರು, ಸಿಬ್ಬಂದಿ ಹಾಗೂ ಸಹಾಯಕ ಸಿಬ್ಬಂದಿಯ ಸೇವಾ ಮನೋಭಾವವನ್ನು ಗೌರವಿಸಬೇಕು. ಇಂತಹ ಸಮಾಜಮುಖಿ ಕಾರ್ಯಗಳಿಗೆ ಸದಾ ಕೈಜೋಡಿಸುವುದಾಗಿ ತಿಳಿಸಿದರು.
ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಜೆ.ಎಲ್. ಜನಾರ್ದನ್ ಮಾತನಾಡಿ, ರಾಜ್ಯಾದ್ಯಂತ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಟಿಕ ಆಹಾರ ಹಾಗೂ ಹಾಲು ವಿತರಿಸುವ ಕಾರ್ಯವನ್ನು ಮಾನವ ಬಂಧುತ್ವ ವೇದಿಕೆ ನಡೆಸುತ್ತಿದೆ. ಅಗತ್ಯ ಸಂದರ್ಭಗಳಲ್ಲಿ ಮಕ್ಕಳಿಗೆ ಬೇಕಾದ ಮೂಲಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ವೇದಿಕೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಂ.ಎಸ್. ವೀರೇಂದ್ರ, ದುಂಡಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಬಿ. ಅಬ್ಬಾಸ್, ಒಕ್ಕಲಿಗ ಯುವ ವೇದಿಕೆ ಹೋಬಳಿ ಕಾರ್ಯದರ್ಶಿ ಅವಿನಾಶ್, ಮಾನವ ಬಂಧುತ್ವ ವೇದಿಕೆ ಸದಸ್ಯ ತವ್ಹೀದ್ ಕೊಡ್ಲಿಪೇಟೆ, ಎಂ.ಪಿ. ವಿಶ್ವ ಮಾದ್ರೆರ, ಕೊಡ್ಲಿಪೇಟೆ ಗ್ರಾಪಂ ಮಾಜಿ ಸದಸ್ಯ ಪ್ರಸನ್ನ, ಸ್ಥಳೀಯರಾದ ವಸಂತ, ರವಿ, ರಾಮ, ವಸತಿ ಶಾಲೆ ಮುಖ್ಯಶಿಕ್ಷಕಿ ಎ.ಎಸ್. ಶ್ವೇತಾ ಮತ್ತಿತರರು ಇದ್ದರು.